



ಧಾರವಾಡ: ಇತ್ತೀಚೆಗೆ ಮುಕ್ತಾಯಗೊಂಡ ಮಳೆಗಾಲದ ಅಧಿವೇಶನದ ನಂತರ, ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರು ಜಿಲ್ಲೆಯಾದ್ಯಂತ ಸುರಿದ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರೈತರ ಬೆಳೆ ಹಾನಿಯನ್ನು ವೀಕ್ಷಿಸಿ ಅವರ ಸಂಕಷ್ಟಕ್ಕೆ ಸ್ಪಂದಿಸಿದ ಸಚಿವರು, ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ಸೂಕ್ತ ಪರಿಹಾರ ಒದಗಿಸುವ ಭರವಸೆ ನೀಡಿದರು.
ಬೆಳೆಹಾನಿ ಪರಿಶೀಲನೆ:
ನವಲಗುಂದ ತಾಲ್ಲೂಕಿನ ಶಲವಡಿ ಸೇರಿದಂತೆ ಹಲವು ಗ್ರಾಮಗಳಿಗೆ ಭೇಟಿ ನೀಡಿದ ಸಚಿವರು, ಈರುಳ್ಳಿ ಮತ್ತು ಹೆಸರು ಬೆಳೆಗಳು ಸಂಪೂರ್ಣ ನಾಶವಾಗಿರುವುದನ್ನು ಗಮನಿಸಿದರು. ರೈತರು ತಮ್ಮ ನೋವು ತೋಡಿಕೊಂಡಾಗ, “ಏನಾದರೂ ಮಾಡಿ ಪರಿಹಾರ ಕೊಡಿಸಿ ಸರ್, ನಾವು ನೇಣು ಹಾಕಿಕೊಳ್ಳೋದೊಂದೇ ಬಾಕಿ ಉಳಿದಿದೆ,” ಎಂದು ಭಾವುಕವಾಗಿ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಲಾಡ್, “ನಾವು ಎಲ್ಲ ರೀತಿಯಿಂದ ಪ್ರಯತ್ನ ಮಾಡುತ್ತಿದ್ದೇವೆ. ಮುಖ್ಯಮಂತ್ರಿಗಳ ಕಾಲಿಗೆ ಬಿದ್ದಾದರೂ ಪರಿಹಾರ ಕೊಡಿಸುತ್ತೇವೆ,” ಎಂದು ರೈತರಿಗೆ ಅಭಯ ನೀಡಿದರು.
ಮಾನವೀಯ ಸ್ಪಂದನೆ:
ಮಳೆ ಹಾನಿಯಿಂದ ಮನೆ ಕಳೆದುಕೊಂಡ ಸಂತ್ರಸ್ತರ ನೋವಿಗೆ ಸಚಿವರು ತಕ್ಷಣ ಸ್ಪಂದಿಸಿದರು. ನವಲಗುಂದ ಪಟ್ಟಣದ ಗುಡ್ಡದಕೇರಿ ಓಣಿಯಲ್ಲಿ ಮನೆ ಕಳೆದುಕೊಂಡ ದ್ಯಾಮವ್ವ ಬಣ್ಣೆನ್ನವರ ಅವರಿಗೆ ವೈಯಕ್ತಿಕವಾಗಿ 25 ಸಾವಿರ ರೂ. ಪರಿಹಾರ ನೀಡಿದರು. ಇದೇ ರೀತಿ ಅಣ್ಣಿಗೇರಿ ತಾಲ್ಲೂಕಿನ ಶಿಶುವಿನಹಳ್ಳಿಯಲ್ಲಿ ಮನೆ ಕುಸಿದು ಗಾಯಗೊಂಡಿದ್ದ ಶಿವಾನಂದ ಕೌಜಗೇರಿ ಕುಟುಂಬದ ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಿದ ಬಳಿಕ, ಅವರ ಚಿಕಿತ್ಸೆಯ ವೆಚ್ಚವನ್ನು ಭರಿಸುವ ಭರವಸೆ ನೀಡಿದರು. ಜೊತೆಗೆ, ವೃದ್ಧೆ ನಿಂಗಮ್ಮ ಕರಡಿಯವರ ಮನೆ ಹಾನಿಗೂ ಕೂಡಲೇ 25,000 ರೂ. ಸ್ಥಳದಲ್ಲೇ ಆರ್ಥಿಕ ನೆರವು ನೀಡಿ, ಹೆಚ್ಚುವರಿ 25,000 ರೂ. ನೀಡಲು ಅಧಿಕಾರಿಗಳಿಗೆ ಸೂಚಿಸಿದರು.
ಬೆಳೆ ವಿಮೆ ಮತ್ತು ಖರೀದಿ ಕೇಂದ್ರಗಳು:
ಮಣಕವಾಡದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಸಚಿವರು, ಬೆಳೆ ವಿಮೆಯ ವಿಷಯದಲ್ಲಿ ಸರ್ಕಾರ ಗಂಭೀರವಾಗಿದೆ. ಬೆಳೆ ವಿಮೆ ವಿತರಣೆಯಲ್ಲಿ ಖಾಸಗಿ ಸಂಸ್ಥೆಗಳ ಪಾತ್ರವನ್ನು ಬಹುತೇಕ ಕಡಿಮೆ ಮಾಡಿ, ಇನ್ನು ಮುಂದೆ ಸರ್ಕಾರವೇ ನೇರವಾಗಿ ರೈತರಿಗೆ ವಿಮೆ ಪಾವತಿಸುವ ಕೆಲಸ ಮಾಡಲಿದೆ ಎಂದು ತಿಳಿಸಿದರು. ಅಲ್ಲದೆ, ಸುಮಾರು 80 ಸಾವಿರ ಹೆಕ್ಟೇರ್ ಹೆಸರು ಬೆಳೆ ಸೇರಿದಂತೆ ಒಟ್ಟು ಒಂದು ಲಕ್ಷ ಹೆಕ್ಟೇರ್ ಬೆಳೆ ಜಿಲ್ಲೆಯಲ್ಲಿ ಹಾನಿಯಾಗಿದೆ ಎಂದು ಅಂದಾಜಿಸಿದರು. ಜಿಲ್ಲಾಡಳಿತ ಮತ್ತು ಕೃಷಿ ಇಲಾಖೆಯ ವರದಿ ಆಧಾರದ ಮೇಲೆ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ಹೆಚ್ಚಿನ ಪರಿಹಾರ ಪಡೆಯುವ ಭರವಸೆ ನೀಡಿದರು. ಸರ್ಕಾರಿ ಖರೀದಿ ಕೇಂದ್ರಗಳ ಸ್ಥಾಪನೆ ಬಗ್ಗೆಯೂ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ನವಲಗುಂದ ಶಾಸಕ ಎನ್.ಎಚ್. ಕೋನರಡ್ಡಿ ಮತ್ತು ಜಿಲ್ಲಾಧಿಕಾರಿ ದಿವ್ಯ ಪ್ರಭು ಹಾಗೂ ಕೆಪಿಸಿಸಿ ಸದಸ್ಯ ಚಂದ್ರಶೇಖರ ಜುಟ್ಟಲ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಸಹ ಸಚಿವರ ಜೊತೆಗಿದ್ದರು.

