ಧಾರವಾಡ: ‘ಶಿವಶರಣರ ಸಾಮಾಜಿಕ ಪ್ರಜ್ಞೆ’ ಕುರಿತು ಉಪನ್ಯಾಸ ಕಾರ್ಯಕ್ರಮ ನಾಳೆ

Spread the love

ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘವು, ಎಮೆರಿಟಸ್ ಪ್ರೊಫೆಸರ್ ಸಿ. ಆರ್. ಯರವಿನತೆಲಿಮಠ ದತ್ತಿ ಅಂಗವಾಗಿ ಅಕ್ಟೋಬರ್ 10, 2025 ರಂದು ಸಂಜೆ 6 ಗಂಟೆಗೆ ಸಂಘದ ಶ್ರೀ ರಾ. ಹ. ದೇಶಪಾಂಡೆ ಸಭಾಭವನದಲ್ಲಿ ‘ಶಿವಶರಣರ ಸಾಮಾಜಿಕ ಪ್ರಜ್ಞೆ’ ವಿಷಯ ಕುರಿತು ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಿದೆ.

ಉಪನ್ಯಾಸ ಮತ್ತು ಅಧ್ಯಕ್ಷತೆ

ಧಾರವಾಡದ ಶ್ರೀ ಮೃತ್ಯುಂಜಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. (ಶ್ರೀಮತಿ) ವೀಣಾ ಯಲಿಗಾರ ಅತಿಥಿ ಉಪನ್ಯಾಸಕರಾಗಿ ಆಗಮಿಸುವರು. ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸುವರು. ಎಮೆರಿಟಸ್ ಪ್ರೊಫೆಸರ್ ಸಿ. ಆರ್. ಯರವಿನತೆಲಿಮಠ ಮತ್ತು ಬೆಳಗಾವಿಯ ವಿದ್ವಾಂಸ ಡಾ. ಗುರುದೇವಿ ಹುಲೆಪ್ಪನವರಮಠ ಗೌರವ ಉಪಸ್ಥಿತರಿರುವರು.

ದತ್ತಿ ಸ್ಥಾಪನೆ ಮತ್ತು ಹಿನ್ನೆಲೆ

ಡಾ. ಸಿ. ಆರ್. ಯರವಿನತೆಲಿಮಠರು ವಿಜಯಪುರ ಜಿಲ್ಲೆಯ ನಿಡಗುಂದಿಯಲ್ಲಿ 1939ರಲ್ಲಿ ಜನಿಸಿದರು. ಅವರ ತಂದೆ ಶ್ರೀ ರುದ್ರಯ್ಯ, ತಾಯಿ ಶ್ರೀಮತಿ ರುದ್ರಮ್ಮ. ಅವರಿಗೆ 6 ಜನ ಸಹೋದರ, ಸಹೋದರಿಯರು. ಅವರು ನಿಡಗುಂದಿ, ಲಚ್ಯಾಣ, ಮುದ್ದೇಬಿಹಾಳ ಮತ್ತು ವಿಜಯಪುರದಲ್ಲಿ ಓದಿ, ಧಾರವಾಡದ ಕ.ವಿ.ವಿ.ಯಲ್ಲಿ ಎಂ.ಎ., ಪಿಎಚ್‌ಡಿ ಮಾಡಿದರು.

1963 ರಿಂದ 1969ರವರೆಗೆ ವಿಜಯಪುರದ ಎಸ್.ಬಿ. ಆರ್ಟ್ಸ್ ಕಾಲೇಜಿನಲ್ಲಿ ಇಂಗ್ಲಿಷ ಅಧ್ಯಾಪಕರಾಗಿ ಮತ್ತು ಎನ್.ಸಿ.ಸಿ. ಆಫೀಸರ್ ಆಗಿ ಸೇವೆ ಸಲ್ಲಿಸಿದ್ದಾರೆ. ನಂತರ 1969 ರಿಂದ ಕ.ವಿ.ವಿ.ಯ ಇಂಗ್ಲಿಷ ಪ್ರಾಧ್ಯಾಪಕರಾಗಿ, ಆ ವಿಭಾಗದ ಮುಖ್ಯಸ್ಥರಾಗಿ, ಡೀನರಾಗಿ, ಪ್ರಸಾರಾಂಗದ ನಿರ್ದೇಶಕರಾಗಿ, ಸಿನೇಟ್ ಸದಸ್ಯರಾಗಿ ಸೇವೆಸಲ್ಲಿಸಿ 1999ರಲ್ಲಿ ನಿವೃತ್ತರಾದರು. ನಂತರ 2001 ರಿಂದ 2003ರವರೆಗೆ ಎಮೆರಿಟಸ್ ಪ್ರಾಧ್ಯಾಪಕರಾದರು.

ಅವರ ಕೃತಿಗಳಲ್ಲಿ ‘ಪಾಶ್ಚಾತ್ಯ ಸಾಹಿತ್ಯ ವಾದಗಳು’, ‘ವಿಮರ್ಶೆಯ ಮಾದರಿಗಳು’ (3 ಭಾಗಗಳಲ್ಲಿ), ‘Purushottama Satccharitra: A Pot of Nectar’, ‘Sir Saheb’ ಬಹು ಪ್ರಾತಿನಿಧಿಕ ಕೃತಿಗಳಾಗಿವೆ. ಅವರು ನಿವೃತ್ತಿಯ ನಂತರ ವಚನ ಸಾಹಿತ್ಯದ ಅನುವಾದದ ಮಹತ್ ಕಾರ್ಯದಲ್ಲಿ ತೊಡಗಿದ್ದು, ‘Basaveshvara’s Vacahanas’, ‘Vachanas of Women Saints’, ‘The Essential Chennabasavanna’, ‘Lord of the Cave’, ಮತ್ತು ‘Vachana Lexicon’ ಅವರ ಪ್ರಮುಖ ಅನುವಾದ ಕೃತಿಗಳಾಗಿವೆ.

ಪ್ರೊ. ಯರವಿನತೆಲಿಮಠರಿಗೆ ಪ್ರೊ. ಎಸ್.ಎಸ್. ಮಾಳವಾಡ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು (2006, 2017), ಕುವೆಂಪು ಭಾಷಾ ಭಾರತಿ ಗೌರವ ಪ್ರಶಸ್ತಿ (2022), ಬಸವ ಭೂಷಣ ಪ್ರಶಸ್ತಿ, ಶೂನ್ಯಪೀಠ ಅಲ್ಲಮ, ಎಸ್.ಎಸ್. ಭೂಸನೂರಮಠ ಸಾಹಿತ್ಯ ಪುರಸ್ಕಾರ, ಮತ್ತು ಮೂಜಗಂ ಪ್ರಶಸ್ತಿ, ಜ.ಚ.ನಿ ಪ್ರಶಸ್ತಿಗಳು ಸಂದಿವೆ. 2020ರಲ್ಲಿ ಇವರಿಗೆ ‘Translation: Theory in Practice’ ಅಭಿನಂದನಾ ಗ್ರಂಥ ಸಮರ್ಪಣೆಯಾಗಿದೆ.

ಶರಣ ಸಾಹಿತ್ಯವು ಪ್ರಚಾರಗೊಳ್ಳಲಿ ಎನ್ನುವ ಉದ್ದೇಶದಿಂದ, ಅವರ ವಿದ್ಯಾರ್ಥಿನಿ ಡಾ. ಗುರುದೇವಿ ಹುಲೆಪ್ಪನವರಮಠ ಅವರು ಪ್ರೊ. ಸಿ.ಆರ್. ಯರವಿನತೆಲಿಮಠ ಅವರ ಹೆಸರಿನಲ್ಲಿ ದತ್ತಿ ಸ್ಥಾಪಿಸಿ ಸಂಘಕ್ಕೆ ಕಾರ್ಯಕ್ರಮ ಮಾಡಲು ಅನುವು ಮಾಡಿಕೊಟ್ಟಿದ್ದಾರೆ.

ಮನವಿ

ಸಾಹಿತಿಗಳು, ಕಲಾವಿದರು, ಚಿಂತಕರು, ವಿದ್ಯಾರ್ಥಿಗಳು, ಸಂಘದ ಆಜೀವ ಸದಸ್ಯರು, ಆಸಕ್ತ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

Leave a Reply

Your email address will not be published. Required fields are marked *