



ಕುಂದಗೋಳ: ತಾಲ್ಲೂಕಿನಾದ್ಯಂತ ಸುರಿದ ಅಕಾಲಿಕ ಮಳೆಯಿಂದ ಹಾನಿಗೊಳಗಾದ ಬೆಳೆ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು. ರೈತರ ಸಮಸ್ಯೆಗಳನ್ನು ಆಲಿಸಿದ ಸಚಿವರು, ಸೂಕ್ತ ಪರಿಹಾರ ನೀಡಲು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಪರಿಹಾರ ದೊರಕಿಸುವ ಭರವಸೆ ನೀಡಿದರು.
ಯರಗುಪ್ಪಿ ಗ್ರಾಮದಲ್ಲಿ ಶಂಕರಗೌಡ ಪಾಟೀಲ, ರುದ್ರಗೌಡ ಪಾಟೀಲ, ಕರೀಮಸಾಬ ಬಳಗಲಿ ಮತ್ತು ಚಂದ್ರಶೇಖರ ಬೂದಿಹಾಳ ಸೇರಿದಂತೆ ಹಲವು ರೈತರ ಜಮೀನುಗಳಿಗೆ ಸಚಿವರು ಭೇಟಿ ನೀಡಿದರು. ಹಾನಿಗೊಳಗಾದ ಹೆಸರು, ಹತ್ತಿ, ಮೆಣಸಿನಕಾಯಿ, ಈರುಳ್ಳಿ ಮತ್ತು ಇನ್ನಿತರ ಬೆಳೆಗಳನ್ನು ವೀಕ್ಷಿಸಿ ನಷ್ಟದ ಪ್ರಮಾಣವನ್ನು ಅಂದಾಜಿಸಿದರು.
ರೈತನಿಂದ ಭಾವನಾತ್ಮಕ ಮನವಿ:
ಪರಿಶೀಲನೆಯ ವೇಳೆ, ರೈತನೊಬ್ಬ ಸಚಿವ ಸಂತೋಷ ಲಾಡ್ ಅವರ ಕಾಲುಗಳಿಗೆ ನಮಸ್ಕರಿಸಿ, ತಮ್ಮ ಜಮೀನಿನ ಸಮಸ್ಯೆಯನ್ನು ಬಗೆಹರಿಸುವಂತೆ ಭಾವುಕವಾಗಿ ಬೇಡಿಕೊಂಡರು. ಕೂಡಲೇ ಸ್ಪಂದಿಸಿದ ಸಚಿವರು, ಆ ರೈತನಿಗೆ ಸಾಂತ್ವಾನ ಹೇಳಿ, ನಮ್ಮದೆ ಜೆಸಿಬಿ ತೆಗೆದುಕೊಂಡು ಕೆಲಸ ನಿರ್ವಹಿಸಿಕೋಳ್ಳಿ ಎಂದು ಸೂಚಿಸಿ ಮಾನವೀಯತೆ ಮೆರೆದರು.
ಸಚಿವರ ಭರವಸೆ:
ನಂತರ ಮಾತನಾಡಿದ ಸಚಿವ ಸಂತೋಷ ಲಾಡ್, “ತಾಲ್ಲೂಕಿನಲ್ಲಿ ಮಳೆ ಹಾನಿಗೆ ಒಳಗಾಗಿರುವ ಹೆಸರು, ಕೆಂಪು ಮೆಣಸಿನಕಾಯಿ, ಬೋಳ್ಳೊಳಿ, ಈರುಳ್ಳಿ, ಹತ್ತಿ, ಸೋಯಾಬಿನ್ ಸೇರಿದಂತೆ ಹಾಳಾಗಿರುವ ಬೆಳೆಗಳಿಗೆ ಸೂಕ್ತ ಪರಿಹಾರ ಒದಗಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತರುತ್ತೇನೆ. ಅವರಿಗೆ ಕೈ ಮುಗಿದು ಬೇಡಿ, ರೈತರಿಗೆ ನೆರವಾಗಲು ಸಹಕರಿಸುತ್ತೇನೆ,” ಎಂದು ಹೇಳಿದರು.
ನಂತರ ಶಾಸಕ ಎಂ.ಆರ್. ಪಾಟೀಲ್ ಮಾತನಾಡಿ, “ತಾಲ್ಲೂಕಿನಲ್ಲಿ ಸುಮಾರು 15,000 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದ್ದು, ಇದರಲ್ಲಿ 12,500 ಹೆಕ್ಟೇರ್‌ಗಿಂತಲೂ ಹೆಚ್ಚು ಹೆಸರು ಬೆಳೆ ಸಂಪೂರ್ಣ ನಾಶವಾಗಿದೆ. ರೈತರು ಎರಡನೇ ಬಾರಿ ಬಿತ್ತನೆ ಮಾಡಲು ಹಣವಿಲ್ಲದೆ ಸಂಕಷ್ಟದಲ್ಲಿದ್ದಾರೆ. ಸರ್ಕಾರ ತಕ್ಷಣವೇ ಬೆಳೆ ಹಾನಿ ಪರಿಹಾರ ಬಿಡುಗಡೆ ಮಾಡಬೇಕು,” ಎಂದು ಆಗ್ರಹಿಸಿದರು.
“ಕೈಗೆ ಬಂದ ಬೆಳೆ ಮಳೆಗೆ ಹಾಳಾಗಿದ್ದು ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಗೊಬ್ಬರ ಖರೀದಿಸುವಾಗ ಬೇರೆ ಕೃಷಿ ಉತ್ಪನ್ನಗಳನ್ನು ಕಡ್ಡಾಯವಾಗಿ ಖರೀದಿಸುವಂತೆ ಒತ್ತಡ ಹೇರುತ್ತಿರುವ ವಿಷಯವನ್ನು ಸಚಿವರ ಗಮನಕ್ಕೆ ತರಲಾಗಿದೆ. ಇದಕ್ಕೆ ಸಚಿವರು ಇದೇ ತಿಂಗಳ 29ರಂದು ಸಭೆ ಕರೆದು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ,” ಎಂದು ಪಾಟೀಲ್ ತಿಳಿಸಿದರು.
ಬೆಣ್ಣೆಹಳ್ಳಕ್ಕೆ ಶಾಶ್ವತ ಪರಿಹಾರದ ಭರವಸೆ:
“ತಾಲ್ಲೂಕಿನ 17 ಹಳ್ಳಿಗಳಿಗೆ ದೊಡ್ಡ ಸಮಸ್ಯೆಯಾಗಿರುವ ಬೆಣ್ಣೆಹಳ್ಳದ ಹೂಳೆತ್ತುವ ಮತ್ತು ತಡೆಗೋಡೆ ನಿರ್ಮಿಸುವ ಕುರಿತು ವಿಧಾನಸಭೆಯಲ್ಲಿ ಈಗಾಗಲೇ ಪ್ರಸ್ತಾಪಿಸಿದ್ದೇನೆ. ಪ್ರತಿ ವರ್ಷ 2100 ಹೆಕ್ಟೇರ್ ಪ್ರದೇಶ ಪ್ರವಾಹದಿಂದ ಮುಳುಗಡೆಯಾಗುತ್ತದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಡಿಪಿಆರ್ ಸಿದ್ಧಪಡಿಸಲು ಸೂಚಿಸಲಾಗಿದೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರೂ ಈ ಬಗ್ಗೆ ಸ್ಪಂದಿಸಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರದ ನೆರವಿನೊಂದಿಗೆ 81 ಕೋಟಿ ರೂ.ಗಳ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು,” ಎಂದು ಅವರು ಹೇಳಿದರು.
ಈ ಸಮಯದಲ್ಲಿ ರತ್ನ ಭಾರತ ಸಮಾಜ ನವದೇಹಲಿ ಸಂಘಟನೆ ಪದಾಧಿಕಾರಿಗಳು ರೈತರ ವಿವಿಧ ಬೇಡಿಕೆ ಇಡೆರಿಸುವಂತೆ ಮನವಿ ನೀಡಿದರು.
ಈ ಸಂದರ್ಭದಲ್ಲಿ ಶಾಸಕರಾದ ಎನ್ ಎಚ್ ಕೊನರಡ್ಡಿ, ಜಿಲ್ಲಾಧಿಕಾರಿ ದಿವ್ಯ ಪ್ರಭು, ತಹಶಿಲ್ದಾರರಾದ ರಾಜು ಮಾವರಕರ, ಇಒ ಜಗದೀಶ ಕಮ್ಮಾರ, ಕೆಪಿಸಿಸಿ ಸದಸ್ಯರಾದ ಚಂದ್ರಶೇಖರ ಜುಟ್ಟಲ್, ದಾನಪ್ಪ ಗಂಗಾಯಿ ಗ್ರಾ ಪಂ ಅಧ್ಯಕ್ಷ, ಭೀಮಪ್ಪ ಮಾಯಣ್ಣವರ, ಸದಸ್ಯ ಶ್ರೀಕಾಂತ ಯಕ್ಕಣ್ಣವರ, ರವಿ ಕುಂಬಾರ, ಸಲೀಂ ಕ್ಯಾಲಕೊಂಡ, ಹನುಮಂತಪ್ಪ ವಡ್ಡರ, ನಾರಾಯಣ ಸುಕಂದ, ದೇವೆಂದ್ರಪ್ಪ ಶಂಬವನಮಠ, ಮಾಬುದಾಬ ಭದ್ರಾಪೂರ, ಹನುಮಂತಗೌಡ ಪಾಟೀಲ, ಸಲಿಂ ಕಡ್ಲಿ, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿದ್ದರು.

