

ತಹಶಿಲ್ದಾರ ಕಚೇರಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ: ಕಂದಾಯ ಇಲಾಖೆ ವತಿಯಿಂದ ಶ್ರೀ ಕೃಷ್ಣನಿಗೆ ಪುಷ್ಪ ನಮನ
ಕುಂದಗೋಳ: ಪಟ್ಟಣದ ತಹಶೀಲ್ದಾರ ಕಚೇರಿ ಆವರಣದಲ್ಲಿ ಕಂದಾಯ ಇಲಾಖೆ ಹಾಗೂ ತಾಲ್ಲೂಕು ಆಡಳಿತದ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಶನಿವಾರದಂದು ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ತಹಶೀಲ್ದಾರ ರಾಜು ಮಾವರಕರ ಅವರು ಶ್ರೀ ಕೃಷ್ಣನ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಅವರು ಮಾತನಾಡಿ , ಶ್ರೀ ಕೃಷ್ಣನ ಜೀವನ, ಆದರ್ಶಗಳು ಮತ್ತು ಯಶೋಗಾಥೆಯ ಬಗ್ಗೆ ವಿವರಿಸಿದರು. ಕೃಷ್ಣನ ತತ್ವಗಳು ಸಮಾಜಕ್ಕೆ ಮತ್ತು ಮನುಷ್ಯನಿಗೆ ಮಾರ್ಗದರ್ಶನ ನೀಡುತ್ತವೆ ಎಂದು ಹೇಳಿದರು.
ಜನ್ಮಾಷ್ಟಮಿ ಸಂಭ್ರಮಕ್ಕೆ ಪುಟ್ಟ ಮಕ್ಕಳು ಶ್ರೀ ಕೃಷ್ಣನ ವೇಷಭೂಷಣ ಧರಿಸಿ ಆಗಮಿಸಿದ್ದರು. ಅವರ ಕೃಷ್ಣ ರೂಪವು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದಿತು ಮತ್ತು ಎಲ್ಲರ ಗಮನ ಸೆಳೆಯಿತು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ ಕಮ್ಮಾರ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಿ. ವಿ. ಕುಲಕರ್ಣಿ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಮೀನಾಕ್ಷಿ ಗುದಗಿನ, ಸಿಡಿಪಿಒ ಉಮಾ ಬೋಳ್ಳೊಳ್ಳಿ ಬಿಇಒ ಮಾಹಾದೇವಿ ಮಾಡಲಗೇರಿ ಸೇರಿದಂತೆ ಅನೇಕ ಅಧಿಕಾರಿಗಳು ಇತರರು ಉಪಸ್ಥಿತರಿದ್ದರು.

