ಬೆಣ್ಣೆಹಳ್ಳ ಪ್ರವಾಹ ನಿಯಂತ್ರಣ: ಕುಂದಗೋಳದಿಂದಲೇ ಕಾಮಗಾರಿ ಆರಂಭಿಸಲು ಶಾಸಕ ಎಂ.ಆರ್. ಪಾಟೀಲ್ ಸದನದಲ್ಲಿ ಆಗ್ರಹ

Spread the love

ಧಾರವಾಡ/ಕುಂದಗೋಳ : ಪ್ರತಿ ವರ್ಷ ಪ್ರವಾಹದಿಂದ ರೈತರಿಗೆ ಅಪಾರ ನಷ್ಟ ಉಂಟುಮಾಡುತ್ತಿರುವ ಬೆಣ್ಣೆಹಳ್ಳದ ಉಪಹಳ್ಳಗಳ ಕಾಮಗಾರಿಯನ್ನು ನವಲಗುಂದ ತಾಲ್ಲೂಕಿನ ಬದಲಿಗೆ ಪ್ರವಾಹದ ಮೂಲವಾದ ಕುಂದಗೋಳ ತಾಲ್ಲೂಕಿನಿಂದಲೇ ಆರಂಭಿಸಬೇಕು ಎಂದು ಶಾಸಕ ಎಂ.ಆರ್. ಪಾಟೀಲ್ ಅವರು ಸದನದಲ್ಲಿ ಆಗ್ರಹಿಸಿದ್ದಾರೆ.

ಬೆಣ್ಣೆಹಳ್ಳಕ್ಕೆ ಉಪಹಳ್ಳಗಳಾದ ಕಗ್ಗೋಡಿ, ಗೂಗಿ, ದೇಸಾಯಿ ಮತ್ತು ಮಾಸ್ತಿ ಹಳ್ಳಗಳಿಂದ ದೊಡ್ಡ ಪ್ರಮಾಣದ ಪ್ರವಾಹ ಉಂಟಾಗುತ್ತದೆ. ಇದು ಕುಂದಗೋಳ ತಾಲ್ಲೂಕಿನ 33 ಕಿ.ಮೀ. ವಿಸ್ತಾರ ಹೊಂದಿದ್ದು, 17 ಗ್ರಾಮಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಶಾಸಕರು ಗಮನ ಸೆಳೆದರು. ಪ್ರವಾಹದಿಂದಾಗಿ ಕುಂದಗೋಳ ತಾಲ್ಲೂಕಿನಲ್ಲಿ ಪ್ರತಿ ವರ್ಷ 2100 ಎಕರೆಗೂ ಹೆಚ್ಚು ಬೆಳೆ ನಾಶವಾಗುತ್ತಿದೆ ಹಾಗೂ ಈ ಬಾರಿ ಕಟಾವಿಗೆ ಬಂದಿರುವ ರೈತರ ಹೆಸರು ಬೆಳೆ ಸಹ ಪ್ರವಾದಿಂದ ನಾಶವಾಗಿದೆ ಎಂದು ಅವರು ಹೇಳಿದರು.

ಸದನದಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕರು
“ಸರ್ಕಾರ ಈಗಾಗಲೇ ₹200 ಕೋಟಿ ವೆಚ್ಚದ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಆರಂಭಿಸಿದೆ. ಆದರೆ, ಇದು ನವಲಗುಂದ ತಾಲ್ಲೂಕಿನಿಂದ ಆರಂಭವಾಗುತ್ತಿದ್ದು, ಪ್ರವಾಹದ ಮೂಲವಾದ ಕುಂದಗೋಳ ತಾಲ್ಲೂಕಿನಿಂದಲೇ ಕಾಮಗಾರಿ ಆರಂಭಿಸಬೇಕು” ಎಂದು ಅವರು ಒತ್ತಾಯಿಸಿದರು. ಅಲ್ಲದೆ, “ಈ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರೂ ಪತ್ರ ಬರೆದಿದ್ದು, ₹83 ಕೋಟಿಗಳ ಡಿಪಿಆರ್‌ಗೆ ಆಡಳಿತಾತ್ಮಕ ಅನುಮೋದನೆ ದೊರೆತಿದ್ದರೂ ಟೆಂಡರ್ ಆಗಿಲ್ಲ. ಕೂಡಲೇ ಈ ಪ್ರಕ್ರಿಯೆಗೆ ಮೊದಲ ಅನುಮೋದನೆ ನೀಡಿ, ಕಾಮಗಾರಿಗಳನ್ನು ಕುಂದಗೋಳ ತಾಲ್ಲೂಕಿನಿಂದ ಆರಂಭಿಸಿದರೆ ರೈತರಿಗೆ ಅನುಕೂಲವಾಗಲಿದೆ” ಎಂದು ಎಂ.ಆರ್. ಪಾಟೀಲ್ ಸದನದ ಗಮನ ಸೆಳೆದರು.

ಇತರ ಶಾಸಕರ ದನಿಗೂಡಿಸುವಿಕೆ
ಶಾಸಕ ಎಂ.ಆರ್. ಪಾಟೀಲ್ ಅವರ ಮಾತಿಗೆ ದನಿಗೂಡಿಸಿದ ಶಾಸಕರಾದ ಅರವಿಂದ ಬೆಲ್ಲದ್ ಮತ್ತು ಸಿ.ಸಿ. ಪಾಟೀಲ್, “ಬೆಣ್ಣೆಹಳ್ಳದಿಂದಾಗಿ ಪ್ರತಿ ವರ್ಷ 8 ಟಿಎಂಸಿ ನೀರು ಪೋಲಾಗುತ್ತಿದೆ ಮತ್ತು ಅಪಾರ ಪ್ರಮಾಣದ ಆಸ್ತಿಪಾಸ್ತಿ ಹಾನಿಯಾಗುತ್ತಿದೆ. ಕುಂದಗೋಳದಿಂದ ಆರಂಭವಾಗಿ ನರಗುಂದದವರೆಗೆ ಹರಿಯುವ ಈ ಹಳ್ಳದ ಸಂಪೂರ್ಣ ಹೂಳೆತ್ತಿ ಸಮಗ್ರವಾಗಿ ಅಭಿವೃದ್ಧಿಪಡಿಸಿದರೆ ಮಾತ್ರ ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ” ಎಂದು ಅಭಿಪ್ರಾಯಪಟ್ಟರು.

ಡಿಸಿಎಂ ಡಿ.ಕೆ. ಶಿವಕುಮಾರ್ ಸ್ಪಂದನೆ
ಶಾಸಕರ ಕಳವಳಕ್ಕೆ ಸ್ಪಂದಿಸಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, “ಬೆಣ್ಣೆಹಳ್ಳದ ಸಮಸ್ಯೆ ಮತ್ತು ಜನರ ಸಂಕಷ್ಟದ ಬಗ್ಗೆ ನನಗೆ ಅರಿವಿದೆ. ಈ ಹಿಂದೆಯೇ ನಾನು ಖುದ್ದಾಗಿ ಮಾಜಿ ಶಾಸಕಿ ಕುಸುಮಾವತಿ ಶಿವಳ್ಳಿವರು ಇದ್ದಾಗ ಅಲ್ಲಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇನೆ. ಸಣ್ಣಪುಟ್ಟ ಕಾಮಗಾರಿಗಳಿಂದ ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವುದಿಲ್ಲ. ಹೀಗಾಗಿಯೇ, ಏಷ್ಯನ್ ಅಭಿವೃದ್ಧಿ ಬ್ಯಾಂಕ್ ನೆರವಿನೊಂದಿಗೆ ₹1610 ಕೋಟಿಗಳ ಬೃಹತ್ ಯೋಜನೆಯನ್ನು ರೂಪಿಸಿ ಕೇಂದ್ರದ ‘ತ್ವರಿತ ನೀರಾವರಿ ಪ್ರಯೋಜನ ಕಾರ್ಯಕ್ರಮ’ದ (AIBP) ಅಡಿಯಲ್ಲಿ ಅನುದಾನ ಪಡೆಯಲು ಪ್ರಸ್ತಾವನೆ ಸಲ್ಲಿಸಲಾಗಿದೆ” ಎಂದು ತಿಳಿಸಿದರು.

“ಕೇಂದ್ರ ಸರ್ಕಾರ ಈ ಪ್ರಸ್ತಾವನೆಗೆ ಶೀಘ್ರವಾಗಿ ಅನುಮೋದನೆ ನೀಡಿದರೆ, ಬೆಣ್ಣೆಹಳ್ಳದ ಸಮಸ್ಯೆಗೆ ಶಾಶ್ವತ ಮುಕ್ತಿ ನೀಡಬಹುದು. ಈ ನಿಟ್ಟಿನಲ್ಲಿ ಕೇಂದ್ರ ಸಚಿವರು ಮತ್ತು ಈ ಭಾಗದ ಸಂಸದರ ಮೇಲೆ ಗಮನಕ್ಕೆ ತರಲು ನೀವೆಲ್ಲರೂ ಸಹಕರಿಸಬೇಕು” ಎಂದು ಅವರು ಶಾಸಕರಲ್ಲಿ ಮನವಿ ಮಾಡಿಕೊಂಡರು.

Leave a Reply

Your email address will not be published. Required fields are marked *