

ಕುಂದಗೋಳ: ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರಿಗೆ ಕಳಂಕ ತರಲು ಒಳಸಂಚು ನಡೆಸುತ್ತಿರುವ ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧ ಸೂಕ್ತ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ, ನಾಳೆ (ಆಗಸ್ಟ್ 25,) ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು. ಧರ್ಮಸ್ಥಳ ಭಕ್ತಾಭಿಮಾನಿಗಳ ವೇದಿಕೆ ಈ ಪ್ರತಿಭಟನೆಯನ್ನು ಆಯೋಜಿಸಿದೆ.
ನಾಳೆ ಬೆಳಿಗ್ಗೆ 10 ಗಂಟೆಗೆ ಗಾಳಿಮರೆಮ್ಮ ದೇವಸ್ಥಾನದ ಆವರಣದಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಗಲಿದೆ. ಮೊದಲು ಜನಾಗ್ರಹ ಸಭೆ ನಡೆಸಿ, ನಂತರ ಮಾರ್ಕೆಟ್ ರಸ್ತೆಯ ಮೂಲಕ ಬೃಹತ್ ಜಾಥಾದೊಂದಿಗೆ ತಹಶೀಲ್ದಾರ್ ಕಚೇರಿಗೆ ಪಾದಯಾತ್ರೆ ಮೂಲಕ ತೆರಳಿ ಮನವಿ ಸಲ್ಲಿಸಲಾಗುವುದು ಎಂದು ಭಕ್ತಾಭಿಮಾನಿ ಶಿವಾನಂದ ಬೆಂತೂರ ತಿಳಿಸಿದ್ದಾರೆ.
ಈ ಪ್ರತಿಭಟನೆಗೆ ತಾಲ್ಲೂಕಿನ ಹಲವು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ರತ್ನ ಭಾರತ ರೈತ ಸಂಘ, ಮೇಟಿ ಬಣದ ರಾಜ್ಯ ರೈತ ಸಂಘ ಹಾಗೂ ಹಸಿರು ನಿಶಾನೆ, ಕರ್ನಾಟಕ ರಕ್ಷಣಾ ವೇದಿಕೆ, ಜಯ ಕರ್ನಾಟಕ, ಪಟ್ಟಣದ ವ್ಯಾಪಾರಸ್ಥರ ಸಂಘ, ದಲಿತ ಸಂಘರ್ಷ ಸಮಿತಿ, ಅಂಜುಮನ್ ಸಂಸ್ಥೆ, ಆದಿ ಜಂಬವ ಸಂಘ ಮತ್ತು ನಾಗರಿಕ ಹಿತರಕ್ಷಣಾ ಸಮಿತಿಗಳ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.
ಈ ಪ್ರತಿಭಟನೆಯ ನೇತೃತ್ವವನ್ನು ಶಿವಾನಂದ ಬೆಂತೂರ, ದೇವೇಂದ್ರಪ್ಪ ಕಾಗೇನವರ, ಕಲ್ಲಪ್ಪ ಹರಕುಣಿ, ಅಶೋಕ್ ಘೋರ್ಪಡೆ, ಗಿರೀಶ ಗೌಡ ಪಾಟೀಲ, ಯಲ್ಲಪ್ಪ ಮುಳುಗುಂದ, ಬಸವರಾಜ್ ಶಿರಸಂಗಿ, ಬಸವರಾಜ್ ಯೋಗಪ್ಪನವರ್ ಸೇರಿದಂತೆ ಮತ್ತಿತರರು ವಹಿಸಲಿದ್ದಾರೆ. ಈ ಪ್ರತಿಭಟನೆಯು ಧರ್ಮಸ್ಥಳದ ಭಕ್ತರು ತಮ್ಮ ನಂಬಿಕೆಗೆ ಧಕ್ಕೆ ತಂದವರ ವಿರುದ್ಧ ಒಗ್ಗಟ್ಟಾಗಿ ನಿಂತಿರುವ ಸಂದೇಶವನ್ನು ರವಾನಿಸಲಿದೆ.

