
ಧಾರವಾಡ: ಜಿಲ್ಲಾ ಪಂಚಾಯತ್‌ನ ಕೈಗಾರಿಕಾ ವಿಭಾಗವು 2025-26ನೇ ಸಾಲಿಗೆ ಜಿಲ್ಲಾ ವಲಯ ಯೋಜನೆಯಡಿ ಗ್ರಾಮೀಣ ಭಾಗದ ಕುಶಲಕರ್ಮಿಗಳಿಗೆ ಉಚಿತವಾಗಿ ವಿವಿಧ ಸುಧಾರಿತ ಉಪಕರಣ ಸೌಲಭ್ಯಗಳನ್ನು ಒದಗಿಸಲು ಅರ್ಜಿಗಳನ್ನು ಆಹ್ವಾನಿಸಿದೆ.
ಗ್ರಾಮೀಣ ಭಾಗದ ಕುಶಲಕರ್ಮಿಗಳ ಜೀವನ ಮಟ್ಟ ಸುಧಾರಣೆಗಾಗಿ ಈ ಯೋಜನೆ ರೂಪಿಸಲಾಗಿದ್ದು, ಅರ್ಹ ಫಲಾನುಭವಿಗಳಿಗೆ ಉಚಿತವಾಗಿ ವಿದ್ಯುತ್‌ಚಾಲಿತ ಹೊಲಿಗೆ ಯಂತ್ರ, ಬಡಗಿತನ, ಗೌಂಡಿ, ಕಮ್ಮಾರಿಕೆ, ಕ್ಷೌರಿಕ ಮತ್ತು ಧೋಬಿ (ಅಗಸ) ಸುಧಾರಿತ ಉಪಕರಣಗಳನ್ನು ನೀಡಲಾಗುವುದು.
ಅರ್ಜಿ ಸಲ್ಲಿಕೆಗೆ ಮುಖ್ಯ ಅರ್ಹತೆಗಳು:
- ಅರ್ಜಿದಾರರು ಕಡ್ಡಾಯವಾಗಿ ಧಾರವಾಡ ಜಿಲ್ಲೆಯ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಡುವ ಗ್ರಾಮೀಣ ಭಾಗದ ಕುಶಲಕರ್ಮಿಗಳಾಗಿರಬೇಕು.
- ವಿದ್ಯುತ್‌ಚಾಲಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಸಲ್ಲಿಸುವ ಸಾಮಾನ್ಯ ವರ್ಗದ ಫಲಾನುಭವಿಗಳು 18 ವರ್ಷದಿಂದ 35 ವರ್ಷಗಳ ಒಳಗಿರಬೇಕು.
- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳು 18 ರಿಂದ 38 ವರ್ಷಗಳ ಒಳಗಿರಬೇಕು.
- ಬಡಗಿತನ, ಗೌಂಡಿ, ಕಮ್ಮಾರಿಕೆ, ಕ್ಷೌರಿಕ ಮತ್ತು ಧೋಬಿ ಸುಧಾರಿತ ಉಪಕರಣಗಳಿಗೆ ಅರ್ಜಿ ಸಲ್ಲಿಸುವ ಎಲ್ಲಾ ಫಲಾನುಭವಿಗಳು 18 ವರ್ಷ ಮೇಲ್ಪಟ್ಟಿರಬೇಕು.
ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಮತ್ತು ಮೇಲಿನ ಅರ್ಹತೆಗಳನ್ನು ಪೂರೈಸುವ ಅಭ್ಯರ್ಥಿಗಳು ನವೆಂಬರ್ 30, 2025 ರೊಳಗಾಗಿ ಅರ್ಜಿ ಸಲ್ಲಿಸಲು ಅವಕಾಶವಿದೆ.
ಹೆಚ್ಚಿನ ಮಾಹಿತಿ ಹಾಗೂ ಸ್ಪಷ್ಟನೆಗಾಗಿ ಜಿಲ್ಲಾ ಪಂಚಾಯತ ಕೈಗಾರಿಕಾ ವಿಭಾಗದ ಉಪ ನಿರ್ದೇಶಕರು (ಗ್ರಾಕ್ಕೆ) ಕಚೇರಿಯನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ: 0836-2324798.
ಈ ಕುರಿತು ಜಿಲ್ಲಾ ಪಂಚಾಯತ ಕೈಗಾರಿಕಾ ವಿಭಾಗದ ಉಪ ನಿರ್ದೇಶಕರು (ಗ್ರಾಕ್ಕೆ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

