ಧಾರವಾಡ | ಸೈಬರ್ ವಂಚನೆ ಜಾಲಕ್ಕೆ ಸಿಲುಕದಿರಿ: ಪ್ರಸನ್ನ ಕುಲಕರ್ಣಿ

Spread the love

ಧಾರವಾಡ: ಮಾನವ ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಗತಿಯಿಂದಾಗಿ ಸೈಬರ್ ಕ್ರೈಂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸೈಬರ್ ಜಗತ್ತನ್ನು ಋಣಾತ್ಮಕವಾಗಿ ಬಳಸುತ್ತಿರುವುದರಿಂದ ಅನೇಕರು ಆನ್‌ಲೈನ್ ವಂಚಕರ ಜಾಲಕ್ಕೆ ಬಲಿಯಾಗುತ್ತಿದ್ದಾರೆ ಎಂದು ಪ್ರಸನ್ನ ಕುಲಕರ್ಣಿ ತಿಳಿಸಿದ್ದಾರೆ.

ನಗರದ ಅಂಜುಮನ್ ಕಾಲೇಜಿನಲ್ಲಿ ಆಯೋಜಿಸಿದ್ದ “ಆನ್‌ಲೈನ್ ವಂಚನೆ ಮತ್ತು ಆರ್ಥಿಕ ಸಾಕ್ಷರತೆ” ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಯಾರೂ ಕೂಡ ಆನ್‌ಲೈನ್‌ನಲ್ಲಿ ತಮ್ಮ ಬ್ಯಾಂಕಿಂಗ್ ಖಾತೆಗಳ ಸಂಪೂರ್ಣ ವಿವರವನ್ನು ಹಂಚಿಕೊಳ್ಳಬಾರದು. “ಅತಿಯಾದರೆ ಅಮೃತವೂ ವಿಷ” ಎಂಬಂತೆ ಕೃತಕ ಬುದ್ಧಿಮತ್ತೆಯನ್ನು ಕೂಡ ಹಿತವಾಗಿ ಮತ್ತು ಮಿತವಾಗಿ ಬಳಸಬೇಕು. ಸೈಬರ್ ಜಗತ್ತಿನಲ್ಲಿ ತ್ವರಿತ ಆನ್‌ಲೈನ್ ಸಾಲ ಮತ್ತು ಡಿಜಿಟಲ್ ಬಂಧನದಂತಹ (Digital Arrest) ವಂಚನೆಗಳು ವಿವಿಧ ರೂಪಗಳಲ್ಲಿ ಹಬ್ಬುತ್ತಿವೆ. ಆದ್ದರಿಂದ ಸೈಬರ್ ಜಗತ್ತನ್ನು ಧನಾತ್ಮಕ ಕೆಲಸಗಳಿಗೆ ಮಾತ್ರ ಬಳಸಬೇಕು ಎಂದು ಅವರು ಸಲಹೆ ನೀಡಿದರು.

ಪ್ರಶಾಂತ್ ಮಟಗಿ ಅವರು ಮಾತನಾಡಿ, ಸುಶಿಕ್ಷಿತ ಹಾಗೂ ಬುದ್ಧಿವಂತ ಜನರಿಂದಲೇ ಸೈಬರ್ ಅಪರಾಧಗಳು ಹೆಚ್ಚು ನಡೆಯುತ್ತಿವೆ ಎಂದು ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಐ.ಎ. ಮುಲ್ಲಾ ಮಾತನಾಡಿ, “ಪ್ರಸ್ತುತ ಮೊಬೈಲ್ ಯುಗವು ರಕ್ತಬೀಜಾಸುರನಂತೆ ಕೃತಕ ಬುದ್ಧಿಮತ್ತೆ ಮತ್ತು ಸೈಬರ್ ಕ್ರೈಂ ಆಗಿ ಮಾರ್ಪಟ್ಟಿದೆ. ಇದಕ್ಕೆ ಬುದ್ಧಿವಂತರು, ವಿದ್ಯಾವಂತರೇ ಹೆಚ್ಚು ಬಲಿಯಾಗುತ್ತಿದ್ದಾರೆ. ಹೀಗಾಗಿ ಮೊಬೈಲ್ ಅನ್ನು ಮಿತವಾಗಿ ಬಳಸಬೇಕು” ಎಂದು ಹೇಳಿದರು.

ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ಡಾ. ಆಸ್ಮಾ ನಾಸ್ ಬಳ್ಳಾರಿ, ಐಕ್ಯೂ ಎಸಿ ಸಂಯೋಜಕ ಡಾ. ಎನ್.ಬಿ. ನಾಲತವಾಡ ಸೇರಿದಂತೆ ಅನೇಕ ಗಣ್ಯರು ವೇದಿಕೆಯಲ್ಲಿದ್ದರು. ಕುಂದುಕೊರತೆ ನಿವಾರಣಾ ಕೋಶದ ಅಧ್ಯಕ್ಷೆ ಡಾ. ಆಸ್ಮಾ ಅಂಜುಮ್ ನದಾಫ್ ಕಾರ್ಯಕ್ರಮ ನಿರೂಪಿಸಿದರು. ಡಾ. ಸೌಭಾಗ್ಯ ಜಾಧವ್ ವಂದನಾರ್ಪಣೆ ಮಾಡಿದರು. ಕಾರ್ಯಕ್ರಮದ ಆರಂಭದಲ್ಲಿ ಸಬಿಹಾ ಖಾಜಿ ಕುರ್‌ಆನ್ ಪಠಿಸಿದರೆ, ಆಕಾಂಕ್ಷ ಅವರು ಶ್ಲೋಕ ಪಠಿಸಿದರು.

Leave a Reply

Your email address will not be published. Required fields are marked *