
ಧಾರವಾಡ: ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಧಾರವಾಡ ತಾಲೂಕಿನ ಮಾರಡಗಿ, ಶಿವಳ್ಳಿ, ಹೆಬ್ಬಳ್ಳಿ, ಅಮ್ಮಿನಭಾವಿ, ಮರೇವಾಡ ಸೇರಿದಂತೆ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ, ಬೆಳೆ ಹಾನಿಯಿಂದ ಬಳಲುತ್ತಿರುವ ರೈತರ ಜಮೀನುಗಳನ್ನು ಪರಿಶೀಲಿಸಿದರು.
ಈ ವೇಳೆ ಅವರಿಗೆ “ಹಸಿರು ಬರ” ದರ್ಶನವಾಯಿತು.
ರೈತರ ಮನವಿ, ಡಿಸಿ ಸ್ಪಂದನೆ
ಭೇಟಿ ವೇಳೆ ಅನೇಕ ರೈತರು ಬೆಳೆ ಹಾನಿ ಪರಿಹಾರ ಬಿಡುಗಡೆ ಮಾಡಲು ಮತ್ತು ಬೆಳೆ ವಿಮೆ ಪರಿಹಾರವನ್ನು ಕೂಡಲೇ ಜಮೆ ಮಾಡಲು ಮನವಿ ಸಲ್ಲಿಸಿದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ದಿವ್ಯ ಪ್ರಭು, ಆರಂಭದಲ್ಲಿ ಮುಂಗಾರು ಬೆಳೆಗಳು ಉತ್ತಮವಾಗಿ ಬಂದಿದ್ದರೂ, ನಂತರದ ದಿನಗಳಲ್ಲಿ ಸುರಿದ ನಿರಂತರ ಮಳೆ ಮತ್ತು ವಾತಾವರಣದ ವೈಪರೀತ್ಯದಿಂದಾಗಿ ಬೆಳೆಗಳಲ್ಲಿ ಕೀಟ ಮತ್ತು ರೋಗಗಳು ಕಾಣಿಸಿಕೊಂಡು ಫಸಲು ಕುಂಠಿತವಾಗಿದೆ. ಕೆಲವು ರೈತರು ಮರು ಬಿತ್ತನೆ ಮಾಡಿದ್ದರಿಂದ ಜಮೀನುಗಳಲ್ಲಿ ಹಸಿರು ಕಾಣಿಸುತ್ತಿದೆಯಾದರೂ, ಅದರಲ್ಲಿ ಫಸಲು ಇಲ್ಲ ಎಂದು ಹೇಳಿದರು.
ಬೆಳೆ ಹಾನಿ ಸಮೀಕ್ಷೆಗೆ ಸೂಚನೆ
ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆಯಂತೆ ಇಡೀ ಜಿಲ್ಲೆಯಲ್ಲಿ ಬೆಳೆ ಹಾನಿ ಸಮೀಕ್ಷೆಯನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಕೃಷಿ, ತೋಟಗಾರಿಕೆ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ತಂಡಗಳು ಗ್ರಾಮವಾರು ಜಂಟಿ ಸಮೀಕ್ಷೆ ನಡೆಸಲು ಸೂಚಿಸಲಾಗಿದೆ. ಮುಂದಿನ ಒಂದು ವಾರದಲ್ಲಿ ಸಮೀಕ್ಷೆಯನ್ನು ಪೂರ್ಣಗೊಳಿಸಿ, ದತ್ತಾಂಶಗಳನ್ನು ದಾಖಲಿಸಲು ನಿರ್ದೇಶನ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಇದಲ್ಲದೆ, ಬೆಳೆ ವಿಮೆ ಮಾಡಿಸಿರುವ ರೈತರಿಗೆ 72 ಗಂಟೆಯೊಳಗೆ ಅರ್ಜಿ ಸಲ್ಲಿಸಲು ಸೂಚಿಸಲಾಗಿತ್ತು. ಅದರಂತೆ, ಧಾರವಾಡ ತಾಲೂಕಿನಲ್ಲಿ 2,500ಕ್ಕೂ ಹೆಚ್ಚು ರೈತರು ಅರ್ಜಿ ಸಲ್ಲಿಸಿದ್ದಾರೆ. ಇಡೀ ಜಿಲ್ಲೆಯಲ್ಲಿ ವಿಮಾ ಕಂಪನಿಗೆ 26,000ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ವರದಿ ಸಲ್ಲಿಸಿದ್ದಾರೆ. ಈ ಎಲ್ಲ ಅರ್ಜಿಗಳನ್ನು ಪರಿಶೀಲಿಸಿ, ತುರ್ತು ಪರಿಹಾರ ಕ್ರಮ ಕೈಗೊಳ್ಳಲು ವಿಮಾ ಕಂಪನಿಯ ಪ್ರತಿನಿಧಿಗಳಿಗೆ ಈಗಾಗಲೇ ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

