ಒಳ ಮೀಸಲಾತಿ: ಸೂಕ್ಷ್ಮ ಮತ್ತು ಅಲೆಮಾರಿ ಜಾತಿಗಳಿಗೆ ನ್ಯಾಯ ಒದಗಿಸಲು ಆಗ್ರಹ

Spread the love

ಧಾರವಾಡ: ಕರ್ನಾಟಕ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ವಿಚಾರದಲ್ಲಿ, ಸೂಕ್ಷ್ಮ ಮತ್ತು ಅಲೆಮಾರಿ ಜಾತಿಗಳಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ಅಖಿಲ ಕರ್ನಾಟಕ ಸುಡುಗಾಡು ಸಿದ್ಧರ ಮಹಾಸಂಘದ ಜಿಲ್ಲಾ ಘಟಕದ ನೇತೃತ್ವದಲ್ಲಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಯಿತು.

ಕಲಾಭವನ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಸರ್ಕಾರದ ಒಳ ಮೀಸಲಾತಿ ತೀರ್ಮಾನವು 59 ಸೂಕ್ಷ್ಮ ಮತ್ತು ಅಲೆಮಾರಿ ಪರಿಶಿಷ್ಟ ಜಾತಿಗಳ ಸಮುದಾಯಕ್ಕೆ ಆಘಾತ ಉಂಟು ಮಾಡಿದೆ ಎಂದು ಆರೋಪಿಸಿದರು.

ಸರ್ಕಾರದ ನಿರ್ಧಾರಕ್ಕೆ ಆಕ್ರೋಶ
ನ್ಯಾಯಮೂರ್ತಿ ಡಾ. ಎಚ್.ಎನ್. ನಾಗಮೋಹನ್ ದಾಸ್ ಆಯೋಗದ ವರದಿಯ ಆಧಾರದ ಮೇಲೆ ರಾಜ್ಯ ಸರ್ಕಾರ ಇತ್ತೀಚೆಗೆ ಒಳ ಮೀಸಲಾತಿ ಕುರಿತು ನಿರ್ಣಯ ಕೈಗೊಂಡಿದೆ. ಆದರೆ, 101 ಪರಿಶಿಷ್ಟ ಜಾತಿಗಳಿಗೆ ಸೂಕ್ತ ಪ್ರಾತಿನಿಧ್ಯ ನೀಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

“ಅಲೆಮಾರಿಗಳಂತಹ ಧ್ವನಿ ಇಲ್ಲದ ಸಮುದಾಯಗಳ ವಿಷಯದಲ್ಲಿ ಸರ್ಕಾರ ಸೂಕ್ತ ನಿರ್ಧಾರ ಕೈಗೊಂಡಿಲ್ಲ. ಈ ಕ್ಯಾಬಿನೆಟ್ ನಿರ್ಣಯ ಅಲೆಮಾರಿ ಸಮುದಾಯಗಳಿಗೆ ಮರಣಶಾಸನ ಬರೆದಂತಿದೆ” ಎಂದು ಪ್ರತಿಭಟನಾಕಾರರು ಹೇಳಿದರು.
ಅಲೆಮಾರಿಗಳನ್ನು ಲಂಬಾಣಿ, ಭೋವಿ, ಕೊರಚ ಮತ್ತು ಕೊರಮ ಸಮುದಾಯಗಳ ಜೊತೆ ಸೇರಿಸಿ ಶೇ. 5ರಷ್ಟು ಮೀಸಲಾತಿ ನಿಗದಿಪಡಿಸಿರುವುದು ಅಲೆಮಾರಿ ಸಮುದಾಯಗಳನ್ನು ಶಾಶ್ವತವಾಗಿ ಮೀಸಲಾತಿಯಿಂದ ವಂಚಿತಗೊಳಿಸಿದೆ ಎಂದು ಆರೋಪಿಸಿದರು.

ಬೇಡಿಕೆಗಳೇನು?
59 ಸೂಕ್ಷ್ಮ ಮತ್ತು ಅಲೆಮಾರಿ ಪರಿಶಿಷ್ಟ ಜಾತಿಗಳನ್ನು ಪ್ರವರ್ಗ ‘ಎ’ ಯಲ್ಲಿಯೇ ಇರಿಸಿ ಶೇ. 1ರಷ್ಟು ಒಳ ಮೀಸಲಾತಿ ನಿಗದಿಗೊಳಿಸಬೇಕು ಎಂದು ಆಗ್ರಹಿಸಿದರು. ಈ ಕುರಿತು ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳಿಗೆ ಮನವಿ ಪತ್ರ ರವಾನಿಸಲಾಯಿತು.

Leave a Reply

Your email address will not be published. Required fields are marked *