
ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ ಎಂದು ಹೇಳಿ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದ್ದ ‘ಬುರುಡೆ’ ಪ್ರಕರಣದಲ್ಲಿ, ಆರೋಪದ ಪ್ರಮುಖ ಪಾತ್ರಧಾರಿ ಚಿನ್ನಯ್ಯನ ಮೇಲೆ ಸ್ವತಃ ಸೂತ್ರಧಾರಿಗಳೇ ಹಲ್ಲೆ ನಡೆಸಿದ್ದರು ಎಂಬ ಆಘಾತಕಾರಿ ವಿಷಯ ವಿಶೇಷ ತನಿಖಾ ತಂಡದ (ಎಸ್ಐಟಿ) ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ತಮಗೆ ಬೇಕಾದಂತೆ ಚಿನ್ನಯ್ಯ ವರ್ತಿಸದಿದ್ದ ಕಾರಣ ಈ ಹಲ್ಲೆ ನಡೆದಿದೆ ಎಂದು ಹೇಳಲಾಗುತ್ತಿದೆ.
ಹಲ್ಲೆಯಿಂದ ನೊಂದಿದ್ದ ಚಿನ್ನಯ್ಯ:
ಆಗಸ್ಟ್ 22ರಂದು ಬೆಳಿಗ್ಗೆ ಎಸ್ಐಟಿ ತಂಡ ಚಿನ್ನಯ್ಯನನ್ನು ವಿಚಾರಣೆಗೆ ಕರೆದಾಗ, ವೈದ್ಯಕೀಯ ತಪಾಸಣೆ ವೇಳೆ ಅವನು ಬೆನ್ನು ಮತ್ತು ಕುತ್ತಿಗೆ ನೋವಿನ ಬಗ್ಗೆ ತಿಳಿಸಿದ್ದ. ಎಸ್ಐಟಿ ತಂಡ ಈ ಕುರಿತು ಆಳವಾಗಿ ಪ್ರಶ್ನಿಸಿದಾಗ, ಆಗಸ್ಟ್ 21ರ ರಾತ್ರಿ ತಿಮರೋಡಿ ಮಹೇಶ್ ಶೆಟ್ಟಿ ಅವರ ಮನೆಯಲ್ಲಿ ತನ್ನ ಮೇಲೆ ಹಲ್ಲೆ ನಡೆದಿತ್ತು ಎಂದು ಚಿನ್ನಯ್ಯ ಬಾಯಿಬಿಟ್ಟಿದ್ದಾನೆ. ಈ ಘಟನೆಯಿಂದ ತೀವ್ರವಾಗಿ ನೊಂದ ಚಿನ್ನಯ್ಯ, ಬದುಕಲು ಬೇರೆ ದಾರಿ ಕಾಣದೆ ತಾನು ಈ ಪ್ರಕರಣದಲ್ಲಿ ಕೇವಲ ಒಂದು ಪಾತ್ರವಾಗಿದ್ದ ವಿಷಯವನ್ನು ಎಸ್ಐಟಿ ಮುಂದೆ ಒಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಎಸ್ಐಟಿ ತಂಡವು ಆಗಸ್ಟ್ 22ರಂದು ತೀವ್ರ ವಿಚಾರಣೆ ನಡೆಸಿ, ಆಗಸ್ಟ್ 23ರಂದು ಅವನನ್ನು ಬಂಧಿಸಿತ್ತು.
ಮಹತ್ವದ ದಾಖಲೆ, ಗನ್, ತಲವಾರು ಪತ್ತೆ:
ಬುಧವಾರ (ಆ. 27) ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಅವರ ಸಹೋದರ ಮೋಹನ್ ಶೆಟ್ಟಿ ಅವರ ಮನೆಯಲ್ಲಿ ಶೋಧ ನಡೆಸಿದ ಎಸ್ಐಟಿ, ಮಹತ್ವದ ದಾಖಲೆಗಳ ಜೊತೆಗೆ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದೆ. ಮನೆಯಿಂದ ಎರಡು ತಲವಾರುಗಳು ಮತ್ತು ಒಂದು ಗನ್ ಪತ್ತೆಯಾಗಿರುವುದಾಗಿ ಮೂಲಗಳು ತಿಳಿಸಿವೆ.
ಹಲವರಿಗೆ ಶುರುವಾದ ನಡುಕ:
ಚಿನ್ನಯ್ಯ ಹಲವಾರು ವಿಷಯಗಳನ್ನು ಬಾಯಿಬಿಟ್ಟ ಬಳಿಕ ಪ್ರಕರಣದ ಹಿಂದಿರುವ ಹಲವರಿಗೆ ನಡುಕ ಶುರುವಾಗಿದೆ. “ಜೈಲಿಗೆ ಹೋಗಲೂ ಸಿದ್ಧ” ಎಂದು ಹೇಳಿದ್ದ ತಿಮರೋಡಿ ಮತ್ತು ಗಿರೀಶ್ ಮಟ್ಟಣ್ಣನವರ್ ಸೇರಿದಂತೆ ಹಲವರು ಪ್ರಸ್ತುತ ಬೇರೆಡೆಗೆ ತೆರಳಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಚಿನ್ನಯ್ಯ ಎಂಬ ಪಾತ್ರವನ್ನು ಸೃಷ್ಟಿಸಲು ಸಿದ್ಧಪಡಿಸಿದ್ದ ನಕಲಿ ದಾಖಲೆಗಳನ್ನು ಮತ್ತು ಸಿಸಿಟಿವಿ ಹಾರ್ಡ್ಡಿಸ್ಕ್, ಮೊಬೈಲ್ ಫೋನ್ಗಳನ್ನು ಎಸ್ಐಟಿ ವಶಕ್ಕೆ ಪಡೆದುಕೊಂಡಿದೆ. ಅಲ್ಲದೆ, ನಾಪತ್ತೆಯಾಗಿದ್ದಾರೆಂದು ಹೇಳಿದ್ದ ಮಗಳು ಅನನ್ಯಾ ಭಟ್ ಅವರ ತಾಯಿ ಸುಜಾತಾ ಭಟ್ ಅವರನ್ನು ಕೂಡ ಎರಡು ದಿನಗಳಿಂದ ತೀವ್ರ ವಿಚಾರಣೆ ನಡೆಸಲಾಗುತ್ತಿದೆ.
ಆಧಾರ್ ಕಾರ್ಡ್ ನಾಪತ್ತೆ:
ಚಿನ್ನಯ್ಯ ತಿಮರೋಡಿ ಮನೆಯ ಕೊಠಡಿಯಲ್ಲಿ ತನ್ನ ಆಧಾರ್ ಕಾರ್ಡ್ ಬಿಟ್ಟು ಹೋಗಿದ್ದ. ಆದರೆ ತನಿಖಾಧಿಕಾರಿಗಳು ಸ್ಥಳಕ್ಕೆ ಹೋದಾಗ ಅದು ಅಲ್ಲಿ ಇರಲಿಲ್ಲ. ಅಲ್ಲದೆ, ಆತನ ಕೋಟ್ ಕೂಡ ಇಲ್ಲದಿರುವುದು ಅನುಮಾನಕ್ಕೆ ಕಾರಣವಾಗಿದೆ. ಚಿನ್ನಯ್ಯನನ್ನು ಒಂದು ಕೋಣೆಯಲ್ಲಿ ಕೂಡಿಹಾಕಿ ಇರಿಸಲಾಗುತ್ತಿತ್ತು ಮತ್ತು ಅಲ್ಲಿಯೇ ಅವನಿಗೆ ಆಹಾರ ಮತ್ತು ನೀರು ಒದಗಿಸಲಾಗುತ್ತಿತ್ತು ಎಂದು ಮಹಜರು ವೇಳೆ ತಿಳಿದುಬಂದಿದೆ. ಎಲ್ಲಾ ವಶಪಡಿಸಿಕೊಂಡ ದಾಖಲೆಗಳನ್ನು ಎಫ್ಎಸ್ಎಲ್ಗೆ ಕಳುಹಿಸಲಾಗಿದ್ದು, ಶೀಘ್ರದಲ್ಲೇ ಮಹೇಶ್ ಶೆಟ್ಟಿ ಮತ್ತು ಮೋಹನ್ ಶೆಟ್ಟಿ ಅವರಿಗೆ ಎಸ್ಐಟಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡುವ ಸಾಧ್ಯತೆ ಇದೆ.

