ಧರ್ಮಸ್ಥಳ ಪ್ರಕರಣ: ಯೂಟ್ಯೂಬರ್ ಸಮೀರ್‌ಗೆ 9 ಗಂಟೆಗೂ ಹೆಚ್ಚು ಕಾಲ ವಿಚಾರಣೆ

Spread the love

ಬೆಳ್ತಂಗಡಿ: ಧರ್ಮಸ್ಥಳ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೃತಕ ಬುದ್ಧಿಮತ್ತೆ (AI) ಬಳಸಿ ಅವಹೇಳನಕಾರಿ ವಿಡಿಯೊಗಳನ್ನು ತಯಾರಿಸಿದ ಆರೋಪದ ಮೇಲೆ ಯೂಟ್ಯೂಬರ್ ಸಮೀರ್ ಎಂ.ಡಿ. ಅವರನ್ನು ಸೋಮವಾರ (ಆಗಸ್ಟ್‌ 25) ಧರ್ಮಸ್ಥಳ ಮತ್ತು ಬೆಳ್ತಂಗಡಿ ಪೊಲೀಸ್ ಠಾಣೆಗಳಲ್ಲಿ ಪೊಲೀಸರು ಸತತ ಎರಡನೇ ದಿನವೂ ತೀವ್ರ ವಿಚಾರಣೆ ನಡೆಸಿದರು.

ಸಮೀರ್ ಅವರು ತಮ್ಮ ವಕೀಲರೊಂದಿಗೆ ಬೆಳಿಗ್ಗೆ 12:20ಕ್ಕೆ ಬೆಳ್ತಂಗಡಿ ಪೊಲೀಸ್ ಠಾಣಾ ಕಚೇರಿಗೆ ಹಾಜರಾಗಿದ್ದರು. ಮೊದಲಿಗೆ ಧರ್ಮಸ್ಥಳ ಪ್ರಕರಣದ ತನಿಖಾಧಿಕಾರಿ, ಸರ್ಕಲ್ ಇನ್ಸ್‌ಪೆಕ್ಟರ್ ನಾಗೇಶ್ ಕದ್ರಿ ಅವರು ಸಮೀರ್‌ರನ್ನು ವಿಚಾರಣೆಗೊಳಪಡಿಸಿದರು.

ನಂತರ, ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಬೆನಕ ಆಸ್ಪತ್ರೆಯಲ್ಲಿ ಗುಂಪು ಸೇರಿ ಗಲಾಟೆ ಮತ್ತು ಮಾಧ್ಯಮದವರ ಮೇಲೆ ಹಲ್ಲೆ ಪ್ರಕರಣದ ತನಿಖಾಧಿಕಾರಿ, ಇನ್ಸ್‌ಪೆಕ್ಟರ್ ಸುಬ್ಬಾಪುರ್ ಮರ್ ಅವರು ವಿಚಾರಣೆ ನಡೆಸಿದರು. ರಾತ್ರಿ 10 ಗಂಟೆಯವರೆಗೆ, ಅಂದರೆ ಒಟ್ಟು 9.30 ಗಂಟೆಗೂ ಹೆಚ್ಚು ಕಾಲ ಸಮೀರ್ ಅವರು ಪೊಲೀಸರ ಪ್ರಶ್ನೆಗಳಿಗೆ ಉತ್ತರಿಸಿದರು.

ವಿಚಾರಣೆ ಬಳಿಕ, ಸರ್ಕಲ್ ಇನ್ಸ್‌ಪೆಕ್ಟರ್ ನಾಗೇಶ್ ಕದ್ರಿ ಅವರು ಸಮೀರ್‌ಗೆ ನೋಟಿಸ್ ಜಾರಿ ಮಾಡಿದ್ದು, ಮುಂದಿನ ವಿಚಾರಣೆಗಾಗಿ ಮತ್ತೆ ಕರೆದಾಗ ಹಾಜರಾಗಬೇಕು ಹಾಗೂ ಅವರ ಬಳಿ ಇರುವ ಕಂಪ್ಯೂಟರ್ ಮತ್ತು ಮೊಬೈಲ್ ಅನ್ನು ಪೊಲೀಸರಿಗೆ ಒಪ್ಪಿಸಬೇಕು ಎಂದು ಸೂಚಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.

Leave a Reply

Your email address will not be published. Required fields are marked *