ಗ್ರಾಮಸಭೆ, ವಾರ್ಡ್ ಸಭೆ ನಡೆಸದ ಪಿಡಿಒ ವಿರುದ್ಧ ಕ್ರಮಕ್ಕೆ ಆಗ್ರಹ: ತಾ.ಪಂ. ಎದುರು ಏಕಾಂಗಿ ಧರಣಿ600-700 ಶೌಚಾಲಯ ಹಗರಣ ಮುಚ್ಚಿಹಾಕಿದ ಆರೋಪ; ತೀವ್ರ ಭ್ರಷ್ಟಾಚಾರದ ವಿರುದ್ಧ ಹೋರಾಟ

Spread the love

ಕುಂದಗೋಳ: ಕಳೆದ ಮೂರು ವರ್ಷಗಳಿಂದ ಒಂದೇ ಒಂದು ಗ್ರಾಮಸಭೆ ಅಥವಾ ವಾರ್ಡ್ ಸಭೆ ನಡೆಸದೆ, ಭೂ ತರ್ಲಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಭ್ರಷ್ಟಾಚಾರಕ್ಕೆ ಆಸ್ಪದ ನೀಡಿರುವ ಪಿಡಿಒ ಹಾಗೂ ಪಂಚಾಯಿತಿ ಆಡಳಿತ ಮಂಡಳಿಯ ವಿರುದ್ಧ ತಕ್ಷಣ ದಂಡನಾತ್ಮಕ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ, ಗ್ರಾಮದ ನಿವಾಸಿ ಮಂಜುನಾಥ ಮೊರಬದ ಅವರು ಶುಕ್ರವಾರ ತಾಲ್ಲೂಕು ಪಂಚಾಯಿತಿ ಕಚೇರಿ ಎದುರು ಏಕಾಂಗಿ ಧರಣಿ ಸತ್ಯಾಗ್ರಹ ನಡೆಸಿ ಆಡಳಿತ ವ್ಯವಸ್ಥೆಯ ನಿದ್ದೆಗೆ ಭಂಗ ತಂದಿದ್ದಾರೆ.

ಕಳೆದ ಒಂದೂವರೆ ವರ್ಷದಿಂದ ಈ ಕುರಿತು ನಿರಂತರವಾಗಿ ಹೋರಾಟ ನಡೆಸುತ್ತಿದ್ದರೂ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಧರಣಿನಿರತ ಮಂಜುನಾಥ್ ಅವರು ಗಂಭೀರ ಆರೋಪ ಮಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಪ್ರಿಯಾಂಕ ಖರ್ಗೆ, ಜಿಲ್ಲಾ ಪಂಚಾಯತ್ ಸಿಇಒ ಭುವನೇಶ್ವರ ಪಾಟೀಲ ಮತ್ತು ತಾ.ಪಂ. ಇಒ ಜಗದೀಶ್ ಕಮ್ಮಾರ ಅವರ ಭಾವಚಿತ್ರಗಳನ್ನು ಇರಿಸಿಕೊಂಡು ಅವರು ನಡೆಸಿದ ಪ್ರತಿಭಟನೆ, ಸ್ಥಳೀಯ ಆಡಳಿತದ ಅಸಡ್ಡೆಗೆ ಹಿಡಿದ ಕೈಗನ್ನಡಿಯಾಗಿತ್ತು.

ಭ್ರಷ್ಟಾಚಾರದ ರಕ್ಷಣೆ: ಅಧಿಕಾರಿಗಳ ವಿರುದ್ಧ ನೇರ ವಾಗ್ದಾಳಿ

ಪ್ರತಿಭಟನಾ ನಿರತರಾದ ಮಂಜುನಾಥ ಮೊರಬದ ಅವರು ಅಧಿಕಾರಿಗಳ ವಿರುದ್ಧ ನೇರ ವಾಗ್ದಾಳಿ ನಡೆಸಿದರು.
“ನಮ್ಮ ಗ್ರಾಮ ಪಂಚಾಯಿತಿಯಲ್ಲಿ ಬರೋಬ್ಬರಿ 600-700 ಶೌಚಾಲಯಗಳ ಬೃಹತ್ ಹಗರಣವನ್ನು ಸಂಪೂರ್ಣವಾಗಿ ಮುಚ್ಚಿಹಾಕಲಾಗಿದೆ. ಹಾಗು ವಾರ್ಡ್ ಸಭೆ ಮತ್ತು ಗ್ರಾಮಸಭೆ ನಡೆಸಿಲ್ಲ — ಈ ಬಗ್ಗೆ ಪ್ರಶ್ನಿಸಿದರೆ ಕೇವಲ ‘ಕ್ರಮ ಕೈಗೊಳ್ಳುತ್ತೇವೆ’ ಎಂದು ಹೇಳಿ, ಭ್ರಷ್ಟ ಪಿಡಿಒ ನವಾಬ್ ಸಾಬ್ ನದಾಫ್ ಅವರನ್ನು ರಕ್ಷಿಸುವ ಕುತ್ಸಿತ ಕೆಲಸ ನಡೆಯುತ್ತಿದೆ” ಎಂದು ಸಿಡಿದೆದ್ದರು.

2024ರಲ್ಲಿ ಗ್ರಾಮಸಭೆ ನಡೆದಿಲ್ಲ ಎಂದು ಸ್ವತಃ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್ ಕಮ್ಮಾರ ಅವರು ಜಿಲ್ಲಾ ಪಂಚಾಯಿತಿಗೆ ವರದಿ ಕೊಟ್ಟಿದ್ದರೂ ಸಹ, ಅದೇ ಪಿಡಿಒ ಇನ್ನೂ ಅಧಿಕಾರದಲ್ಲಿ ದರ್ಪದಿಂದ ಮುಂದುವರಿದಿರುವುದು ಭ್ರಷ್ಟ ಅಧಿಕಾರಿಗಳ ಬಲಕ್ಕೆ ಸಾಕ್ಷಿಯಾಗಿದೆ. ಗ್ರಾಮಸಭೆ, ವಾರ್ಡ್ ಸಭೆಗಳು ನಡೆಯದ ಕಾರಣ ಗ್ರಾಮದ ಅಭಿವೃದ್ಧಿ ಸಂಪೂರ್ಣವಾಗಿ ಕುಂಠಿತಗೊಂಡಿದೆ. ಕೋಟ್ಯಾಂತರ ಅವ್ಯವಹಾರ ಮಾಡಿರುವ ಪಿಡಿಒ ನಧಾಫ್ ರಂತಹ ಭ್ರಷ್ಟ ಅಧಿಕಾರಿಗಳಿಂದ ಹಾಗೂ ಅವರಿಗೆ ಸಾತ್ ನೀಡುತ್ತಿರುವ ತಾಲ್ಲೂಕು ಪಂಚಾಯತ್ ಅಧಿಕಾರಿಗಳಿಂದ ತಾಲ್ಲೂಕಿನ ಅಭಿವೃದ್ಧಿ ಮರೀಚಿಕೆಯಾಗಿದೆ. ಕೂಡಲೇ ಪಿಡಿಒ ಅವರನ್ನು ಅಮಾನತುಗೊಳಿಸಿ, ವಜಾಗೊಳಿಸಬೇಕು**” ಎಂದು ಅವರು ಪ್ರಬಲವಾಗಿ ಒತ್ತಾಯಿಸಿದರು.

ತಮ್ಮ ಹೋರಾಟ ಹೀಗೆಯೇ ಮುಂದುವರೆದರೆ, ಮುಂದಿನ ದಿನಗಳಲ್ಲಿ ಜಿಲ್ಲಾ ಪಂಚಾಯಿತಿ ಎದುರು ಆಮರಣ ಉಪವಾಸ ಸತ್ಯಾಗ್ರಹವನ್ನೂ ನಡೆಸುವುದಾಗಿ ಮಂಜುನಾಥ್ ಮೊರಬದ ಅವರು ಆಕ್ರೋಶಯುಕ್ತ ಎಚ್ಚರಿಕೆ ನೀಡಿದರು.

ಪಿಡಿಒ ವಿರುದ್ಧ ಕ್ರಮಕ್ಕೆ ವರದಿ: ಇಒ ಜಗದೀಶ್ ಕಮ್ಮಾರ ಸ್ಪಷ್ಟನೆ

ಭೂ ತರ್ಲಘಟ್ಟ ಗ್ರಾ.ಪಂ. ಕುರಿತಾದ ತೀವ್ರ ಆರೋಪಗಳಿಗೆ ಪ್ರತಿಕ್ರಿಯೆ ನೀಡಿರುವ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್ ಕಮ್ಮಾರ ಅವರು, ಪಿಡಿಒ ವಿರುದ್ಧ ಈಗಾಗಲೇ ಕಾನೂನು ಕ್ರಮ ಆರಂಭಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
“ಸಾರ್ವಜನಿಕರ ದೂರಿನ ಅನ್ವಯ ಸಂಬಂಧಪಟ್ಟ ಪಿಡಿಒಗೆ ಈಗಾಗಲೇ ಮೂರು ಬಾರಿ ನೋಟಿಸ್ ಜಾರಿ ಮಾಡಲಾಗಿದೆ. ಗ್ರಾಮಸಭೆ ನಡೆಸದ ವೈಫಲ್ಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮದ ಪ್ರಕಾರ ದಂಡನಾತ್ಮಕ ಕ್ರಮಕ್ಕಾಗಿ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ” ಎಂದು ಅವರು ತಿಳಿಸಿದರು.

ಅಲ್ಲದೆ, “ಪ್ರತಿಭಟನಾಕಾರ ಮಂಜುನಾಥ್ ಅವರು ಉಲ್ಲೇಖಿಸಿರುವ ವಾರ್ಡ್ ಸಭೆ ಮತ್ತು ಗ್ರಾಮ ಸಭೆ ಕುರಿತು ಖುದ್ದಾಗಿ ಪರಿಶೀಲನೆ ನಡೆಸಲಾಗಿದೆ. ಇದರಲ್ಲಿ ಪಿಡಿಒ ಅವರ ವೈಫಲ್ಯ ಕಂಡುಬಂದಿರುವದರಿಂದ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಕಾನೂನು ಪ್ರಕಾರ ಪಿಡಿಒ ನಧಾಫ್ ಮೇಲೆ 124 ಜಾರಿ ಮಾಡಿ ಕ್ರಮ ಕೈಗೊಳ್ಳಲು ಮೇಲಾಧಿಕಾರಿಗಳಿಗೆ ಬರೆಯಲಾಗಿದೆ. ಪಿಡಿಒ ಕೂಡ ಇದಕ್ಕೆ ಉತ್ತರಿಸಿದ್ದಾರೆ. ಕಾನೂನು ರೀತ್ಯ ಏನು ಕ್ರಮಗಳನ್ನು ತೆಗೆದುಕೊಳ್ಳಬೇಕೋ, ಅದನ್ನು ಈಗಾಗಲೇ ತೆಗೆದುಕೊಳ್ಳಲಾಗಿದೆ” ಎಂದು ಇಒ ಜಗದೀಶ್ ಕಮ್ಮಾರ ಅವರು ತಮ್ಮ ಕಚೇರಿಯ ಕ್ರಮಗಳನ್ನು ಸಮರ್ಥಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *