ಡಿಸಿಎಂ ಡಿ.ಕೆ.ಶಿವಕುಮಾರ್ ಒಂದು ಕಾಲು ಬಿಜೆಪಿಯಲ್ಲಿದೆ’: ಶಾಸಕ ಯತ್ನಾಳ್‌ರಿಂದ ಹೊಸ ಬಾಂಬ್

Spread the love

ವಿಜಯಪುರ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬಿಜೆಪಿಯೊಂದಿಗೆ ರಹಸ್ಯ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಮತ್ತು ಬಿಜೆಪಿ ಸೇರುವ ಬಗ್ಗೆ ಮಾತುಕತೆ ನಡೆಸಿದ್ದಾರೆ ಎಂದು ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.

ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಡಿ.ಕೆ. ಶಿವಕುಮಾರ್ ಒಂದು ಕಾಲು ಬಿಜೆಪಿಯಲ್ಲಿದೆ. ಅವರು ಈಗಾಗಲೇ ದೆಹಲಿಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಜೊತೆ ಸೇರಿ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಒಟ್ಟು 60 ರಿಂದ 70 ಕಾಂಗ್ರೆಸ್ ಶಾಸಕರನ್ನು ಕರೆತಂದು ಸರ್ಕಾರ ರಚಿಸುವ ಬಗ್ಗೆ ಚರ್ಚೆ ನಡೆದಿದೆ” ಎಂದು ಹೇಳಿದ್ದಾರೆ.

ಈ ಹೇಳಿಕೆಯ ಮುಂದುವರಿದ ಭಾಗವಾಗಿಯೇ ಡಿ.ಕೆ. ಶಿವಕುಮಾರ್ ಅವರು ‘ನಮಸ್ತೇ ಸದಾ ವತ್ಸಲೇ’ ಹಾಡುತ್ತೇವೆ ಎಂದು ಹೇಳಿದ್ದರು ಎಂದು ಯತ್ನಾಳ್‌ ಆರೋಪಿಸಿದ್ದಾರೆ.
ನಮಸ್ತೇ ಸದಾ ವತ್ಸಲೇ’ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಪ್ರಾರ್ಥನೆಯಾಗಿದೆ.

“ಡಿ.ಕೆ. ಶಿವಕುಮಾರ್‌ ಅವರ ಬಳಿ ಕೇವಲ 12 ಶಾಸಕರ ಬೆಂಬಲ ಮಾತ್ರ ಇದೆ ಎಂದು ಆಂತರಿಕ ವರದಿಗಳು ಹೇಳುತ್ತವೆ. ಉಳಿದವರೆಲ್ಲಾ ಸಿದ್ದರಾಮಯ್ಯನವರ ಪರ ಇದ್ದಾರೆ. ಹಾಗಾಗಿ ಸರ್ಕಾರ ರಚಿಸಲು ಪ್ರಯತ್ನಿಸುವುದಿಲ್ಲ ಎಂದು ಬಿಜೆಪಿ ಹೇಳಿತ್ತು” ಎಂದು ಯತ್ನಾಳ್‌ ತಿಳಿಸಿದ್ದಾರೆ. ಈ ಮೂಲಕ ಯತ್ನಾಳ್‌ ಅವರು ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ.

Leave a Reply

Your email address will not be published. Required fields are marked *