ನವಲಗುಂದದಲ್ಲಿ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಮಿಂಚಿನ ಸಂಚಲನ: ಮಾಡೆಲ್ ಹೈಸ್ಕೂಲ್ ವಿದ್ಯಾರ್ಥಿಗಳೊಂದಿಗೆ ಸಂವಾದ, ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ

Spread the love

ನವಲಗುಂದ: ಸಾರ್ವಜನಿಕರ ಅಹವಾಲುಗಳಿಗೆ ಸ್ಪಂದಿಸುವುದು ಪ್ರತಿಯೊಬ್ಬ ಸರ್ಕಾರಿ ನೌಕರನ ಆದ್ಯ ಕರ್ತವ್ಯವಾಗಿದ್ದು, ಗ್ರಾಮ ಮಟ್ಟದಿಂದ ಜಿಲ್ಲಾ ಮಟ್ಟದವರೆಗಿನ ಎಲ್ಲಾ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಚೇರಿ ಸಮಯದಲ್ಲಿ ಕಡ್ಡಾಯವಾಗಿ ಸಾರ್ವಜನಿಕರಿಗೆ ಲಭ್ಯವಿರಬೇಕು ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು. ಬುಧವಾರ ಬೆಳಿಗ್ಗೆ ನವಲಗುಂದ ತಹಶೀಲ್ದಾರ್ ಕಚೇರಿಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ನಂತರ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ಜರುಗಿಸಿ ಮಾತನಾಡಿದ ಅವರು, ಕ್ಷೇತ್ರ ಭೇಟಿಯ ಸಮಯವನ್ನು ಹೊರತುಪಡಿಸಿ ಉಳಿದ ಅವಧಿಯಲ್ಲಿ ಅಧಿಕಾರಿಗಳು ಕಚೇರಿಯಲ್ಲಿದ್ದು ಜನರ ದೂರುಗಳಿಗೆ ಸ್ಪಂದಿಸಬೇಕು. ಅನಗತ್ಯವಾಗಿ ಸಾರ್ವಜನಿಕರಿಗೆ ಕಿರಿಕಿರಿ ನೀಡದಂತೆ ಸಂವೇದನಾಶೀಲರಾಗಿ ಕರ್ತವ್ಯ ನಿರ್ವಹಿಸಬೇಕು ಮತ್ತು ಅಗತ್ಯವಿದ್ದಲ್ಲಿ ಮಾತ್ರ ಮನವಿಗಳನ್ನು ಮೇಲಿನ ಕಚೇರಿಗೆ ರವಾನಿಸಿ ಸ್ಥಳೀಯ ಮಟ್ಟದಲ್ಲೇ ಪರಿಹಾರ ನೀಡಲು ಪ್ರಯತ್ನಿಸಬೇಕು ಎಂದು ಸೂಚಿಸಿದರು.

​ಇದೇ ಸಂದರ್ಭದಲ್ಲಿ ರೈತರ ಸಮಸ್ಯೆಗಳ ಕುರಿತು ಗಂಭೀರವಾಗಿ ಚರ್ಚಿಸಿದ ಜಿಲ್ಲಾಧಿಕಾರಿಗಳು, ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಆರಂಭವಾಗಿರುವ ಕಡಲೆ ಕಾಳು ಮತ್ತು ಗೋವಿನ ಜೋಳ ಖರೀದಿ ಕೇಂದ್ರಗಳಲ್ಲಿ ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ ರೈತರಿಂದ ನೇರ ಖರೀದಿ ಪ್ರಕ್ರಿಯೆ ನಡೆಯಬೇಕು ಎಂದು ತಿಳಿಸಿದರು. ರೈತರ ನೋಂದಣಿ ಮತ್ತು ಕಾಳು ಖರೀದಿಗೆ ಸಹಾಯ ಮಾಡಲು ಪ್ರತಿ ಕೇಂದ್ರಕ್ಕೆ ತಹಶೀಲ್ದಾರ್ ಕಚೇರಿಯಿಂದ ಒಬ್ಬ ಗ್ರಾಮ ಆಡಳಿತ ಅಧಿಕಾರಿಯನ್ನು ನೇಮಿಸುವಂತೆ ಸೂಚನೆ ನೀಡಿದರು. ಅಲ್ಲದೆ, ಬೆಳೆ ವಿಮೆಯ ಎರಡನೇ ಕಂತಿನ ಪರಿಹಾರ ಮೊತ್ತ ರೈತರ ಖಾತೆಗೆ ಜಮಾ ಆಗುವಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ರೈತರ ಅಹವಾಲುಗಳನ್ನು ಆಲಿಸಿದ ಅವರು, ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ತಾಲ್ಲೂಕು ಮಟ್ಟದ ಸಭೆ ನಡೆಸಿ ವಿಳಂಬದ ಕಾರಣಗಳನ್ನು ಪರಿಶೀಲಿಸಿ, ಆದಷ್ಟು ಬೇಗ ಹಣ ಜಮೆ ಆಗುವಂತೆ ಮುತುವರ್ಜಿ ವಹಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಆದೇಶಿಸಿದರು.

​ತಾಲ್ಲೂಕು ಕಚೇರಿಯ ಸಭೆಯ ನಂತರ ಜಿಲ್ಲಾಧಿಕಾರಿಗಳು ಪಟ್ಟಣದ ಮಾಡೆಲ್ ಹೈಸ್ಕೂಲ್‌ಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಆತ್ಮೀಯವಾಗಿ ಸಂವಾದ ನಡೆಸಿದರು. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ತರಗತಿಗೆ ತೆರಳಿ ಅವರ ಓದು ಮತ್ತು ಪರೀಕ್ಷಾ ಸಿದ್ಧತೆಯನ್ನು ಪರಿಶೀಲಿಸಿದ ಅವರು, ಪರೀಕ್ಷೆ ಎದುರಿಸುವ ಕುರಿತು ಅಮೂಲ್ಯ ಮಾರ್ಗದರ್ಶನ ನೀಡಿದರು. ಪ್ರತಿದಿನ ನಿಯಮಿತವಾಗಿ ಓದುವುದು, ಹಳೆಯ ಪ್ರಶ್ನೆಪತ್ರಿಕೆಗಳನ್ನು ಬಿಡಿಸುವುದು ಮತ್ತು ಶಿಕ್ಷಕರ ಸಲಹೆಗಳನ್ನು ಚಾಚೂತಪ್ಪದೆ ಪಾಲಿಸುವುದು ಯಶಸ್ಸಿನ ಸೂತ್ರ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಈ ಬಾರಿ ಜಿಲ್ಲೆಯಲ್ಲಿ ಅತ್ಯುತ್ತಮ ಫಲಿತಾಂಶ ತರುವ ಗುರಿ ಹೊಂದಲಾಗಿದ್ದು, ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೆ ಆತ್ಮವಿಶ್ವಾಸದಿಂದ ಪರೀಕ್ಷೆಯನ್ನು ಎದುರಿಸಬೇಕು ಎಂದು ಅವರು ಉತ್ತೇಜಿಸಿದರು.

​ಈ ಭೇಟಿಯ ಸಂದರ್ಭದಲ್ಲಿ ನವಲಗುಂದ ತಹಶೀಲ್ದಾರ್ ಸುಧೀರ ಸಾವುಕಾರ, ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಬೊಮ್ಮಕ್ಕನವರ, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಇ.ಆರ್. ಬಡೆಖಾನ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಪ್ರಿಯದರ್ಶಿನಿ ಹಿರೇಮಠ, ಭೂದಾಖಲೆಗಳ ಇಲಾಖೆ ಸಹಾಯಕ ನಿರ್ದೇಶಕ ಹಿರೇಗೌಡರ, ಉಪ ತಹಶೀಲ್ದಾರ್ ಎಂ.ಎಚ್. ಸದರಬಾಯಿ ಹಾಗೂ ಕಂದಾಯ ನಿರೀಕ್ಷಕ ಕುಮಾರಗೌಡ ಪಾಟೀಲ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *