ಆಲೂರ ಗ್ರಾಮದ ಅವ್ಯವಸ್ಥೆ ವಿರುದ್ಧ ಆರನೇ ತರಗತಿ ವಿದ್ಯಾರ್ಥಿನಿ ಏಕಾಂಗಿ ಸಮರ!

Spread the love

ದಾವಣಗೆರೆ: ಜಿಲ್ಲಾ ಪಂಚಾಯತ್ ಸಿಇಒಗೆ, ತಾಲ್ಲೂಕು ಪಂಚಾಯತ್ ಇಒಗೆ ಮತ್ತು ಗ್ರಾಮ ಪಂಚಾಯತ್‌ ಪಿಡಿಒಗೆ ನಾಚಿಕೆಯಾಗಬೇಕು! ಆಡಳಿತ ವ್ಯವಸ್ಥೆಯ ಅಸಮರ್ಥತೆ ಎಷ್ಟು ಹೀನಾಯ ಸ್ಥಿತಿಗೆ ತಲುಪಿದೆ ಎಂದರೆ, ಆರನೇ ತರಗತಿಯ ಪುಟಾಣಿ ವಿದ್ಯಾರ್ಥಿನಿಯೊಬ್ಬಳು ತನ್ನ ಗ್ರಾಮದ ಮೂಲಭೂತ ಸೌಕರ್ಯಗಳಿಗಾಗಿ ಏಕಾಂಗಿಯಾಗಿ ಪ್ರತಿಭಟನೆಗೆ ಇಳಿದಿದ್ದಾಳೆ. ದಾವಣಗೆರೆ ಜಿಲ್ಲೆಯ ಆಲೂರು ಗ್ರಾಮದಲ್ಲಿ ನಡೆದ ಈ ಘಟನೆ ಇಡೀ ವ್ಯವಸ್ಥೆಯ ಮುಖಕ್ಕೆ ಬಡಿದ ಕನ್ನಡಿಯಂತಿದೆ.

ಆಲೂರು ಗ್ರಾಮ ಪಂಚಾಯತ್ ಎದುರು, ಪಿ.ಬಿ. ಸುಷ್ಮತಾ ಎಂಬ ಹೆಸರಿನ ಈ ಪುಟ್ಟ ವಿದ್ಯಾರ್ಥಿನಿ ಪ್ಲಾಸ್ಟಿಕ್ ಕುರ್ಚಿಯ ಮೇಲೆ ಕುಳಿತು ತನ್ನ ನೋವು ಹಾಗೂ ಆಕ್ರೋಶವನ್ನು ಫಲಕದಲ್ಲಿ ಪ್ರದರ್ಶಿಸುತ್ತಿದ್ದಾಳೆ. ಆಕೆಯ ಬೇಡಿಕೆಗಳು ಅಕ್ಷರಶಃ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಕರ್ತವ್ಯ ಲೋಪದ ಕರಾಳ ಅಧ್ಯಾಯವನ್ನು ಅನಾವರಣಗೊಳಿಸುತ್ತವೆ.

ದೇವರಾಜ್ ಅರಸು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ಸುಷ್ಮತಾಳ ಪ್ರಮುಖ ಬೇಡಿಕೆ, ತನ್ನ ಶಾಲೆಗೆ ಹೋಗುವ ರಸ್ತೆಯನ್ನು ಸರಿಪಡಿಸುವುದು. ರಸ್ತೆಗಳು ಗುಂಡಿಮಯವಾಗಿದ್ದು, ಸಂಪೂರ್ಣವಾಗಿ ಹದಗೆಟ್ಟಿವೆ. ಮಳೆಗಾಲದಲ್ಲಿ ಈ ರಸ್ತೆಗಳು ಜಲಾವೃತಗೊಂಡು ಮಕ್ಕಳು ಶಾಲೆಗೆ ಹೋಗುವುದೇ ಅಸಾಧ್ಯವಾಗಿದೆ. ಹಲವಾರು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಈ ಗುಂಡಿಗಳಲ್ಲಿ ಬಿದ್ದು ಗಾಯಗೊಂಡಿದ್ದರೂ ಕೂಡ, ಆಡಳಿತ ವ್ಯವಸ್ಥೆ ಕಣ್ಣುಮುಚ್ಚಿ ಕುಳಿತಿದೆ. ಮಾನವೀಯತೆಯ ದೃಷ್ಟಿಯಿಂದಲೂ ಇದೊಂದು ಅಪರಾಧ.
ಅಷ್ಟಕ್ಕೇ ನಿಲ್ಲದ ಈ ಗ್ರಾಮದ ದುಸ್ಥಿತಿ, ಕುಡಿಯುವ ನೀರಿನ ಸಮಸ್ಯೆಗೂ ಸಾಕ್ಷಿಯಾಗಿದೆ.

ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವಿಲ್ಲ. ಇದರಿಂದಾಗಿ ಗ್ರಾಮಸ್ಥರು ಶುದ್ಧ ನೀರಿಗಾಗಿ ಪರದಾಡುವಂತಹ ಪರಿಸ್ಥಿತಿ ಬಂದಿದೆ. ಇನ್ನು ಚರಂಡಿ ವ್ಯವಸ್ಥೆಯಂತೂ ಅತ್ಯಂತ ಹೀನಾಯ ಸ್ಥಿತಿಯಲ್ಲಿದ್ದು, ಚರಂಡಿ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಇದು ರೋಗ-ರುಜಿನಗಳಿಗೆ ಆಹ್ವಾನ ನೀಡುತ್ತಿದೆ. ಗ್ರಾಮ ಪಂಚಾಯತ್ ಪಿಡಿಒ ಹಾಗೂ ಇತರೆ ಅಧಿಕಾರಿಗಳು ಇದ್ಯಾವುದೂ ತಮ್ಮ ಜವಾಬ್ದಾರಿಯಲ್ಲವೆಂಬಂತೆ ವರ್ತಿಸುತ್ತಿರುವುದು ನಾಚಿಕೆಗೇಡಿನ ವಿಷಯ.

ಒಬ್ಬ ಪುಟ್ಟ ವಿದ್ಯಾರ್ಥಿನಿಯ ಸಂಕಟಕ್ಕೆ ಸ್ಪಂದಿಸದ ವ್ಯವಸ್ಥೆ ಎಂತಹದು? ಒಬ್ಬ ಹೆಣ್ಣು ಮಗಳು ತನ್ನ ಭವಿಷ್ಯಕ್ಕಾಗಿ, ತನ್ನ ಸ್ನೇಹಿತರ ಆರೋಗ್ಯಕ್ಕಾಗಿ ಬೀದಿಗಿಳಿದು ಹೋರಾಟ ಮಾಡುವ ಪರಿಸ್ಥಿತಿ ಬಂದಿರುವುದು ರಾಜ್ಯದ ಆಡಳಿತ ವ್ಯವಸ್ಥೆಗೆ ದೊಡ್ಡ ಕಪ್ಪು ಚುಕ್ಕೆಯಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಈ ವಿಷಯಕ್ಕೆ ಗಮನ ಹರಿಸಿ, ಕರ್ತವ್ಯಲೋಪಕ್ಕೆ ಒಳಗಾದವರ ಮೇಲೆ ಕಠಿಣ ಕ್ರಮ ಕೈಗೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ಈ ಬಾಲಕಿಯ ಹೋರಾಟ ದೊಡ್ಡ ಕಿಚ್ಚಾಗಿ ಮಾರ್ಪಡುವ ಸಾಧ್ಯತೆಗಳು ಹೆಚ್ಚಿವೆ.

ಈ ವಿಷಯವು ಜಿಪಂ ಸಿಇಒ, ತಾಪಂ ಇಒ ಮತ್ತು ಗ್ರಾಪಂ ಪಿಡಿಒಗಳ ಕಣ್ಣು ತೆರೆಸಲಿ ಎಂದು ನಾಡಿನ ಜನ ಬಯಸುತ್ತಿದ್ದಾರೆ.

2 thoughts on “ಆಲೂರ ಗ್ರಾಮದ ಅವ್ಯವಸ್ಥೆ ವಿರುದ್ಧ ಆರನೇ ತರಗತಿ ವಿದ್ಯಾರ್ಥಿನಿ ಏಕಾಂಗಿ ಸಮರ!

Leave a Reply

Your email address will not be published. Required fields are marked *