
ದಾವಣಗೆರೆ: ಗಣೇಶೋತ್ಸವದ ಪ್ರಯುಕ್ತ ನಗರದ ಮಟ್ಟಿಕಲ್ನಲ್ಲಿ ಅಳವಡಿಸಲಾಗಿದ್ದ ಆಕ್ಷೇಪಾರ್ಹ ಫ್ಲೆಕ್ಸ್ ತೆರವುಗೊಳಿಸುವ ವಿಚಾರದಲ್ಲಿ ಕರ್ತವ್ಯ ಲೋಪ ಎಸಗಿದ್ದಾರೆ ಎಂಬ ಆರೋಪದ ಮೇಲೆ, ಪೊಲೀಸ್ ಉಪನಿರೀಕ್ಷಕರೊಬ್ಬರು (ಪಿಎಸ್ಐ) ಹಾಗೂ ಇಬ್ಬರು ಪೊಲೀಸ್ ಪೇದೆಗಳನ್ನು ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಆದೇಶ ಹೊರಡಿಸಿದ್ದಾರೆ.
ಆರ್ಎಂಸಿ ಯಾರ್ಡ್ ಪೊಲೀಸ್ ಠಾಣೆಯ ಪಿಎಸ್ಐ ಸಚಿನ್ ಬಿರಾದಾರ ಮತ್ತು ಪೇದೆಗಳಾದ ಷಣ್ಮುಖ ಹಾಗೂ ವತ್ಸಲಾ ಅಮಾನತುಗೊಂಡಿರುವ ಅಧಿಕಾರಿಗಳು.
ಘಟನೆ ಹಿನ್ನೆಲೆ
ನಗರದ ಮಟ್ಟಿಕಲ್ನಲ್ಲಿ ವೀರ ಸಾವರ್ಕರ್ ಯುವಕರ ಸಂಘದ ವತಿಯಿಂದ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು. ಈ ಸ್ಥಳದಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ಮತ್ತು ಅಫ್ಜಲ್ ಖಾನ್ ನಡುವಿನ ಯುದ್ಧದ ಸನ್ನಿವೇಶವನ್ನು ಬಿಂಬಿಸುವ ಫ್ಲೆಕ್ಸ್ ಅಳವಡಿಸಲಾಗಿತ್ತು. ಈ ಫ್ಲೆಕ್ಸ್ ಕೋಮು ಭಾವನೆಗಳನ್ನು ಕೆರಳಿಸುತ್ತದೆ ಎಂದು ಆಕ್ಷೇಪ ವ್ಯಕ್ತಪಡಿಸಿದ ಕೆಲವು ನಾಗರಿಕರು ಪೊಲೀಸರಿಗೆ ದೂರು ನೀಡಿದ್ದರು.
ದೂರಿನ ಆಧಾರದಲ್ಲಿ ಫ್ಲೆಕ್ಸ್ ತೆರವುಗೊಳಿಸಲು ಮುಂದಾದ ಪೊಲೀಸರೊಂದಿಗೆ ಯುವಕರು ವಾಗ್ವಾದ ನಡೆಸಿದ್ದರು. ಇದರಿಂದ ಗುರುವಾರ ಮಧ್ಯರಾತ್ರಿಯ ಸಮಯದಲ್ಲಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಕೊನೆಗೆ ಶುಕ್ರವಾರ ಪೊಲೀಸರು ವಿವಾದಿತ ಫ್ಲೆಕ್ಸ್ ಅನ್ನು ತೆರವುಗೊಳಿಸಿದರು. ಇದೇ ವೇಳೆ, ಹಿಂದೂ ಜಾಗರಣಾ ವೇದಿಕೆಯ ಮುಖಂಡ ಸತೀಶ್ ಪೂಜಾರಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.
ಕರ್ತವ್ಯಲೋಪದ ಆರೋಪದ ಮೇಲೆ ಈ ಮೂವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ ಎಂದು ಪೊಲೀಸ್ ಇಲಾಖೆಯ ಮೂಲಗಳು ತಿಳಿಸಿವೆ.

