ಗುಡಿಸಾಗರ ಜನರ ಜೀವದ ಜೊತೆ ಚೆಲ್ಲಾಟ, ಕಲುಷಿತ ಕೆರೆ ನೀರು ಕುಡಿದು16 ಕ್ಕು ಹೆಚ್ಚು ಗ್ರಾಮಸ್ಥರು ಅಸ್ಥವ್ಯಸ್ತ

Spread the love

ನವಲಗುಂದ: ತಾಲ್ಲೂಕಿನ ಗುಡಿಸಾಗರ ಗ್ರಾಮದಲ್ಲಿ ಕಲುಷಿತಗೊಂಡ ಕೆರೆ ನೀರು ಕುಡಿದು ಮಕ್ಕಳು, ವೃದ್ಧರು ಸೇರಿದಂತೆ 20ಕ್ಕೂ ಹೆಚ್ಚು ಮಂದಿ ವಾಂತಿ-ಭೇದಿಯಿಂದ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದಾರೆ. ಮಂಗಳವಾರ ಸಂಜೆ ನಡೆದ ಈ ಘಟನೆ, ಸರ್ಕಾರದ ವಿವಿಧ ಇಲಾಖೆಗಳು ಹಾಗೂ ಸ್ಥಳೀಯ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಬಡ ಮತ್ತು ಅಮಾಯಕ ಜನರ ಜೀವದೊಂದಿಗೆ ಚೆಲ್ಲಾಟವಾಡಿದ ಈ ಅಮಾನವೀಯ ಘಟನೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಅಧಿಕಾರಿಗಳ ಬೇಜವಾಬ್ದಾರಿಯೇ ದುರಂತಕ್ಕೆ ಕಾರಣವಾಯೀತೆ:
ಗುಡಿಸಾಗರ ಕೆರೆಯ ನೀರು ಕುಡಿಯಲು ಯೋಗ್ಯವಲ್ಲ ಎಂದು ತಿಳಿದಿದ್ದರೂ, ಗ್ರಾಮ ಪಂಚಾಯಿತಿಯ ಯಾವೊಬ್ಬ ಅಧಿಕಾರಿಯೂ ಜನರಿಗೆ ಎಚ್ಚರಿಕೆ ನೀಡುವ ಗೋಜಿಗೆ ಹೋಗಿಲ್ಲ. ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO), ಕಾರ್ಯದರ್ಶಿ ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷರ ನೇತೃತ್ವದಲ್ಲಿ ಕೆರೆ ನಿರ್ವಹಣೆಯ ಜವಾಬ್ದಾರಿ ಸಂಪೂರ್ಣ ನಿರ್ಲಕ್ಷ್ಯಕ್ಕೊಳಗಾಗಿದೆ. ಇನ್ನು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ (RDPR), ಆರೋಗ್ಯ ಇಲಾಖೆ ಮತ್ತು ಸಣ್ಣ ನೀರಾವರಿ ಇಲಾಖೆಗಳು ಈ ವಿಷಯದಲ್ಲಿ ಸಂಪೂರ್ಣ ವಿಫಲವಾಗಿವೆ. ತಮ್ಮ ಕರ್ತವ್ಯವನ್ನು ಮರೆತು, ಜನರನ್ನು ಕಷ್ಟಕ್ಕೆ ದೂಡಿದ ಇಂತಹ ಅಧಿಕಾರಿಗಳು ಕ್ಷಮಾರ್ಹರಲ್ಲ. ಬರೀ ಕಡತಗಳಲ್ಲಿ ಮಾತ್ರ ಸಕ್ರಿಯವಾಗಿರುವ ಈ ವ್ಯವಸ್ಥೆ, ಜನರ ನೈಜ ಸಮಸ್ಯೆಗಳಿಗೆ ಸ್ಪಂದಿಸದಿರುವುದು ದುರಂತ.

ಆಸ್ಪತ್ರೆಗೆ ದಾಖಲು, ಸೂಕ್ತ ಚಿಕಿತ್ಸೆಗೆ ಆಗ್ರಹ:ತಕ್ಷಣವೇ ಅಸ್ವಸ್ಥಗೊಂಡವರನ್ನು ನವಲಗುಂದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ವೈದ್ಯ ಡಾ. ಅಜಯ್ ಪಿ. ಅವರು “ಎಲ್ಲರೂ ಎರಡು-ಮೂರು ದಿನಗಳಲ್ಲಿ ಚೇತರಿಸಿಕೊಳ್ಳುವ ಸಾಧ್ಯತೆ ಇದೆ” ಎಂದು ಹೇಳಿದ್ದಾರೆ.

ಘಟನೆ ಬೆಳಕಿಗೆ ಬಂದ ತಕ್ಷಣ, ತಹಶೀಲ್ದಾರ್ ಸುಧೀರ್ ಸಾಹುಕಾರ್ ಸ್ಥಳಕ್ಕೆ ಭೇಟಿ ನೀಡಿ ತುರ್ತು ಕ್ರಮ ಕೈಗೊಂಡಿದ್ದಾರೆ. ಗ್ರಾಮದಲ್ಲಿ ಡಂಗುರ ಸಾರಿಸುವುದರ ಜೊತೆಗೆ, ಟ್ಯಾಂಕರ್‌ಗಳ ಮೂಲಕ ಶುದ್ಧ ಕುಡಿಯುವ ನೀರನ್ನು ಪೂರೈಸಲು ವ್ಯವಸ್ಥೆ ಮಾಡಲಾಗಿದೆ. ಆದರೆ, ಈ ರೀತಿಯ ಕ್ರಮಗಳು ದುರಂತ ಸಂಭವಿಸಿದ ನಂತರ ಕೈಗೊಳ್ಳುವುದಲ್ಲ, ಬದಲಾಗಿ ಘಟನೆ ನಡೆಯದಂತೆ ತಡೆಯುವ ಜವಾಬ್ದಾರಿ ಇಲಾಖೆಗಳಿಗಿದೆ.

ಹೊಣೆಗಾರರ ಮೇಲೆ ಮೊಕದ್ದಮೆ ದಾಖಲಿಸಿ:
“ಇದು ಬರೀ ನಿರ್ಲಕ್ಷ್ಯವಲ್ಲ, ಬದಲಾಗಿ ಜನರ ಜೀವದ ಜೊತೆ ಮಾಡಿದ ಘೋರ ಅಪರಾಧ. ಕಾರಣಕರ್ತರಾದ ಅಧಿಕಾರಿಗಳನ್ನು ತಕ್ಷಣ ಅಮಾನತುಗೊಳಿಸಿ, ಅವರ ವಿರುದ್ಧ ಮೊಕದ್ದಮೆ ದಾಖಲಿಸಬೇಕು” ಎಂದು ಸಾಮಾಜಿಕ ಕಾರ್ಯಕರ್ತರು ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸದಸ್ಯರು ತೀವ್ರವಾಗಿ ಆಗ್ರಹಿಸಿದ್ದಾರೆ.

ಘಟನೆಯ ಕುರಿತು ಜಿಲ್ಲಾಡಳಿತ ಸಂಪೂರ್ಣ ತನಿಖೆ ನಡೆಸಿ, ಯಾರು ಹೊಣೆಗಾರರು ಎಂಬುದನ್ನು ಸ್ಪಷ್ಟಪಡಿಸಬೇಕು. ಭವಿಷ್ಯದಲ್ಲಿ ಇಂತಹ ಪ್ರಕರಣಗಳು ಮರುಕಳಿಸದಂತೆ ರಾಜ್ಯಾದ್ಯಂತ ಕೆರೆಗಳ ನೀರಿನ ಗುಣಮಟ್ಟವನ್ನು ಕಾಲಕಾಲಕ್ಕೆ ಪರಿಶೀಲಿಸುವ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಬೇಕು ಎಂಬುದು ಜನರ ಮತ್ತು ಸಂಘಟನೆಗಳ ಒತ್ತಾಯವಾಗಿದೆ.

ಚುನಾಯಿತರಾಗಿ ಆಯ್ಕೆಯಾದ ಜನ ಪ್ರತಿನಿಧಿಗಳೇ ನಿವಾದರೂ ಆ ಗ್ರಾಮಕ್ಕೆ ಭೇಟಿ ನೀಡಿ, ಅಲ್ಲಿನ ಜನರ ಜೀವದ ಜೋತೆ ಆಟವಾಡಲು ಕಾರಣಿ ಕರ್ತರಾದವರ ಮೇಲೆ ಯಾದ ಕ್ರಮ ಜರುಗಿಸುತ್ತಿರಿ ಎಂಬುದನ್ನು ಗ್ರಾಮಸ್ಥರು ಬಕ ಪಕ್ಷಿಯಂತೆ ಕಾದು ನೋಡುತ್ತಿದ್ದಾರೆ.?

ತಪ್ಪಿತಸ್ಥರ ವಿರುದ್ಧ ಜಿಲ್ಲಾಡಳಿತ ಹಾಗೂ ಜನಪ್ರತಿನಿದಿಗಳು ಯಾವ ಕಠಿಣ ಕ್ರಮ ಕೈಗೊಳ್ಳುತ್ತಾರೆ, ಎಂಬುದನ್ನು ಇಡೀ ರಾಜ್ಯವೇ ಕುತೂಹಲದಿಂದ ಎದುರು ನೋಡುತ್ತಿದೆ?

Leave a Reply

Your email address will not be published. Required fields are marked *