
ಧಾರವಾಡ: ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ನೂತನ ಕಟ್ಟಡ ಕಾಮಗಾರಿಯನ್ನು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಇಂದು ವೀಕ್ಷಿಸಿದರು. ಕಟ್ಟಡವನ್ನು 2026ರ ಜನವರಿ ತಿಂಗಳೊಳಗೆ ಪೂರ್ಣಗೊಳಿಸಿ, ಬಳಕೆಗೆ ನೀಡಬೇಕು ಎಂದು ನಿರ್ಮಾಣ ಸಂಸ್ಥೆಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳು ಕಾಲೇಜಿನ ಪ್ರಗತಿ, ಕಟ್ಟಡದ ಮೂಲಸೌಕರ್ಯ, ವಿದ್ಯಾರ್ಥಿನಿಯರ ಅಗತ್ಯಗಳು ಹಾಗೂ ತರಗತಿ ಸೌಲಭ್ಯಗಳನ್ನು ಪರಿಶೀಲಿಸಿದರು.
ಈ ಕುರಿತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸ್ಥಳದಲ್ಲೇ ಚರ್ಚೆ ನಡೆಸಿದರು.
ನಂತರ ಮಾತನಾಡಿದ ಅವರು, ಶೈಕ್ಷಣಿಕವಾಗಿ ಹೆಚ್ಚು ಉಪಯುಕ್ತವಾಗುವ ರೀತಿಯಲ್ಲಿ ಕಟ್ಟಡವನ್ನು ನಿರ್ಮಿಸಬೇಕು. ವಿದ್ಯಾರ್ಥಿನಿಯರಿಗೆ ಅಗತ್ಯವಿರುವ ಎಲ್ಲ ಸೌಕರ್ಯಗಳು ದೊರೆಯುವಂತೆ ನೋಡಿಕೊಳ್ಳಬೇಕು. ಶೀಘ್ರದಲ್ಲಿಯೇ ವ್ಯವಸ್ಥಿತವಾಗಿ ಕಟ್ಟಡ ನಿರ್ಮಾಣವನ್ನು ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಿದರು.
ಅಂದಾಜು 3.5 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಕಟ್ಟಡದಲ್ಲಿ ಮೂರು ಕೊಠಡಿಗಳು, ಒಂದು ಗ್ರಂಥಾಲಯ, ಒಂದು ಆಡಳಿತ ಕಚೇರಿ, ಒಂದು ಸಿಬ್ಬಂದಿ ಕೊಠಡಿ, ಒಂದು ಪ್ರಾಚಾರ್ಯರ ಕೊಠಡಿ, 8 ಶೌಚಾಲಯಗಳು ಮತ್ತು ವಿಕಲಚೇತನರಿಗಾಗಿ ಪ್ರತ್ಯೇಕ ಶೌಚಾಲಯ ಹಾಗೂ ಲಿಫ್ಟ್ ವ್ಯವಸ್ಥೆ ಇರಲಿದೆ ಎಂದು ತಿಳಿಸಿದರು.

