ಧಾರವಾಡ : ನ.21: ಚಿತ್ರಕಲಾ ಶಿಲ್ಪಿ ಶ್ರೀ ಡಿ.ವಿ. ಹಾಲಭಾವಿ ಅವರ ಸ್ಮರಣಾರ್ಥ ಸ್ಥಾಪಿಸಲಾಗಿರುವ ರಾಷ್ಟ್ರೀಯ ಸ್ಮಾರಕ (ರಿ) ಟ್ರಸ್ಟ್ನ ವತಿಯಿಂದ ನವೆಂಬರ್ 29, 2025 ರಂದು ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ಕುಲಪುರೋಹಿತ ಆಲೂರ ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಅಂದು ಸಂಜೆ 5 ಗಂಟೆಗೆ ನಡೆಯಲಿರುವ ಈ ಸಮಾರಂಭದಲ್ಲಿ ಚಿತ್ರಕಲಾ ಶಿಲ್ಪಿ ಶ್ರೀ ಡಿ.ವಿ. ಹಾಲಭಾವಿ ಅವರ ಜನ್ಮದಿನದ ಪ್ರಯುಕ್ತ ಪ್ರಶಸ್ತಿಗಳನ್ನು ವಿತರಿಸಲಾಗುವುದು. ಕಾರ್ಯಕ್ರಮದ ಅಂಗವಾಗಿ ಶುಭಾಂಗಿ ಜಾಧವ ಅವರ ಗಾಯನ ಕಾರ್ಯಕ್ರಮವನ್ನು ಸಹ ಆಯೋಜಿಸಲಾಗಿದೆ.
2025ನೇ ಸಾಲಿನ ಪ್ರಶಸ್ತಿಗಳಿಗೆ ಬೆಂಗಳೂರಿನ ಹಿರಿಯ ಚಿತ್ರಕಲಾವಿದ ಬಿ. ಜಿ. ಗುಜಾರಪ್ಪ ಅವರನ್ನು ಜೀವಮಾನ ಸಾಧನೆಯ ಕುಂಚ ಕಲಾತಪಸ್ವಿ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕಲಬುರ್ಗಿಯ ಚಿತ್ರಕಲಾವಿದ ಚಂದ್ರಹಾಸ ವೈ. ಜಾಲಿಹಾಳ ಅವರಿಗೆ ಕುಂಚ ಕಲಾಶ್ರೀ ರಾಷ್ಟ್ರೀಯ ಪ್ರಶಸ್ತಿ ನೀಡಲಾಗುತ್ತಿದೆ. ಇದರ ಜೊತೆಗೆ, ಯುವ ಕಲಾವಿದರಾದ ದೀಪಾಲಿ ಸಂದೇಶಖುಲೆ. ಎಸ್ ಮತ್ತು ನಾಮದೇವ ಪಟ್ಟೇಕರ ಅವರಿಗೆ ಯುವ ಕುಂಚ ಕಲಾಶ್ರೀ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು. ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಮುನ್ನ, ನವೆಂಬರ್ 28, 2025 ರಂದು ಬೆಳಿಗ್ಗೆ 11 ಗಂಟೆಗೆ ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯದ ಆರ್ಟ್ ಗ್ಯಾಲರಿಯಲ್ಲಿ ಪ್ರಶಸ್ತಿಗೆ ಭಾಜನರಾದ ಕಲಾವಿದರಿಂದ ವಿಶೇಷ ಪ್ರಾತ್ಯಕ್ಷಿಕೆ (Demonstration) ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಟ್ರಸ್ಟ್ನ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭವನ್ನು ಡಾ. ಲೋಹಿತ್ ನಾಯ್ಕರ್ ಅವರು ನೆರವೇರಿಸಲಿದ್ದಾರೆ. ಟ್ರಸ್ಟ್ ಅಧ್ಯಕ್ಷ ಬಿ. ಮಾರುತಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾಧಿಕಾರಿ ದಿವ್ಯ ಪ್ರಭು, ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಬೆಳಗಾವಿ ವಿಭಾಗದ ಜಂಟಿ ನಿರ್ದೇಶಕ ಕೆ. ಎಚ್. ಚನ್ನೂರ ಅತಿಥಿಗಳಾಗಿ ಆಗಮಿಸಲಿದ್ದಾರೆ. ಡಾ. ಜಗದೀಶ ಕೊಪ್ಪ ಅವರು ಅಭಿನಂದನಾ ಪರ ಮಾತನಾಡಲಿದ್ದಾರೆ. ಹಿರಿಯ ಕಲಾವಿದರಾದ ಸುರೇಶ ಹಾಲಭಾವಿ ಅವರು ಹಾಗೂ ಟ್ರಸ್ಟ್ನ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.

