
ಧರ್ಮಸ್ಥಳ ವಿರುದ್ಧ ದೊಡ್ಡ ಷಡ್ಯಂತ್ರ: ಡಿಸಿಎಂ ಡಿ.ಕೆ. ಶಿವಕುಮಾರ್
ಬೆಂಗಳೂರು: ಧರ್ಮಸ್ಥಳ ಕ್ಷೇತ್ರ ಮತ್ತು ಅಲ್ಲಿನ ಧರ್ಮಾಧಿಕಾರಿಗಳ ವಿರುದ್ಧ ದೊಡ್ಡ ಷಡ್ಯಂತ್ರ ನಡೆದಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ. ಇದನ್ನು ರಾಜಕೀಯವಾಗಿ ತಿರುಗಿಸಬಾರದು ಎಂದು ಅವರು ಕೋರಿದ್ದಾರೆ. ವಿಧಾನಸಭೆಯಲ್ಲಿ ಹಾಗೂ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳದ ಆಡಳಿತ ಮಂಡಳಿ ಮೇಲೆ ಕಪ್ಪುಚುಕ್ಕೆ ತರಲು ವ್ಯವಸ್ಥಿತವಾಗಿ ಹುನ್ನಾರ ನಡೆದಿದೆ ಎಂದು ಹೇಳಿದರು.
ಷಡ್ಯಂತ್ರ ಮತ್ತು ಸರ್ಕಾರದ ನಿಲುವು
“ನಾನು ಧರ್ಮಸ್ಥಳ ಕ್ಷೇತ್ರದ ಮೇಲೆ ನಂಬಿಕೆ ಇಟ್ಟಿರುವವನು. ಧರ್ಮಾಧಿಕಾರಿಗಳ ಆಚಾರ ವಿಚಾರಗಳ ಬಗ್ಗೆ ನನಗೆ ಅರಿವಿದೆ. ಈ ಪ್ರಕರಣದಲ್ಲಿ ಏನಾಗಿದೆ ಎಂಬುದನ್ನು ಗೃಹ ಸಚಿವರು ಸದನದಲ್ಲಿ ವಿವರಿಸುತ್ತಾರೆ” ಎಂದು ಶಿವಕುಮಾರ್ ತಿಳಿಸಿದರು. “ಲಕ್ಷಾಂತರ ಭಕ್ತಾದಿಗಳು ಈ ಕ್ಷೇತ್ರವನ್ನು ನಂಬಿದ್ದಾರೆ. ಇಲ್ಲಿ ಅನ್ನದಾಸೋಹ ಆರಂಭವಾದಾಗ ದೇಶದಲ್ಲಿ ಇಂತಹ ವ್ಯವಸ್ಥೆಗಳು ಇರಲಿಲ್ಲ. ಈ ವಿಚಾರವನ್ನು ರಾಜಕೀಯಗೊಳಿಸಬೇಡಿ” ಎಂದು ಮನವಿ ಮಾಡಿದರು.
“ಈ ಪ್ರಕರಣದಲ್ಲಿ ಕಾಂಗ್ರೆಸ್ ಯಾಕೆ ಹಸ್ತಕ್ಷೇಪ ಮಾಡುತ್ತದೆ? ಅಲ್ಲಿನ ಆಂತರಿಕ ಸಮಸ್ಯೆಯಿಂದ ಯಾರೋ ಒಬ್ಬರು ಆರೋಪ ಮಾಡಿದ್ದಾರೆ. ನಮ್ಮ ಪಕ್ಷದಲ್ಲಿಯೇ ಶಿವಲಿಂಗೇಗೌಡ, ಅಶೋಕ್ ರೈ ಸೇರಿದಂತೆ ಅನೇಕ ಶಾಸಕರು ಧರ್ಮಸ್ಥಳದ ಪರ ಧ್ವನಿ ಎತ್ತಿದ್ದಾರೆ” ಎಂದು ಅವರು ಸ್ಪಷ್ಟಪಡಿಸಿದರು. “ಭಕ್ತ ಮತ್ತು ಭಗವಂತನ ನಡುವಿನ ಸಂಬಂಧ ಹಾಳಾಗಬಾರದು. ಧರ್ಮಾಧಿಕಾರಿಗಳು ಮೊದಲಿನಿಂದಲೂ ಸಾಮಾಜಿಕ ಸೇವೆ ಮಾಡುತ್ತಿದ್ದು, ಅವರ ಮೇಲೆ ನಮಗೆ ಯಾವುದೇ ಅನುಮಾನವಿಲ್ಲ. ನಾವು ಅವರ ಧಾರ್ಮಿಕ ಕೆಲಸಗಳ ಬೆನ್ನಿಗೆ ನಿಲ್ಲುತ್ತೇವೆ” ಎಂದರು.
ಎಸ್ಐಟಿ ತನಿಖೆ ಕುರಿತು
“ಯಾರೋ ಒಬ್ಬ ಮುಸುಕುಧಾರಿ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ ಪರಿಣಾಮ ಈ ಪರಿಸ್ಥಿತಿ ಉಂಟಾಗಿದೆ. ಇಂತಹ ಹೇಳಿಕೆಗಳ ನಂತರ ಸರ್ಕಾರ ಸುಮ್ಮನಿರಲು ಸಾಧ್ಯವೇ?” ಎಂದು ಶಿವಕುಮಾರ್ ಪ್ರಶ್ನಿಸಿದರು. “ಅಪಪ್ರಚಾರ ಮಾಡಿ ಜನರನ್ನು ದಾರಿತಪ್ಪಿಸುತ್ತಿರುವವರ ವಿರುದ್ಧ ತನಿಖೆ ನಡೆಸಿ, ಕಾನೂನು ಕ್ರಮ ಕೈಗೊಳ್ಳಬೇಕೆಂದು ನಾವು ಹೇಳಿದ್ದೇವೆ. ಮುಖ್ಯಮಂತ್ರಿಗಳು ಕೂಡ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಧರ್ಮಸ್ಥಳದ ಪರಂಪರೆ ಮತ್ತು ಧರ್ಮದ ಬಗ್ಗೆ ನಮಗೂ ಹೆಚ್ಚು ಕಾಳಜಿ ಇದೆ” ಎಂದು ಅವರು ತಿಳಿಸಿದರು.
ಈ ಪ್ರಕರಣವು ಕೇವಲ ‘ಖಾಲಿ ಟ್ರಂಕ್’ ಅಷ್ಟೇ, ಸದ್ದು ಜಾಸ್ತಿ ಮಾಡುತ್ತಿದೆ. ಯಾರು ತಪ್ಪು ಮಾಡುತ್ತಾರೋ ಅವರಿಗೆ ಶಿಕ್ಷೆಯಾಗಬೇಕು, ಆದರೆ ಏನೂ ಇಲ್ಲದೇ ಈ ರೀತಿ ಕಥೆ ಸೃಷ್ಟಿ ಮಾಡಲಾಗಿದೆ. ನ್ಯಾಯಾಲಯದಲ್ಲಿ ಈ ವಿಚಾರ ಬಂದ ನಂತರ, ಅದನ್ನು ಸರಿಯಾದ ರೀತಿಯಲ್ಲಿ ತನಿಖೆ ಮಾಡಲು ಎಸ್‌ಐಟಿ ರಚಿಸಲಾಗಿದೆ. ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿನ ವಿಭಿನ್ನ ವ್ಯಾಖ್ಯಾನಗಳಿಂದ ಧರ್ಮಾಧಿಕಾರಿಗಳಿಗೆ ಅನ್ಯಾಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಬಿಜೆಪಿಯ ಆರೋಪಕ್ಕೆ ಪ್ರತಿಕ್ರಿಯೆ
ಧರ್ಮಸ್ಥಳಕ್ಕೆ ಮಸಿ ಬಳಿಯಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂಬ ಬಿಜೆಪಿಯ ಆರೋಪದ ಬಗ್ಗೆ ಕೇಳಿದಾಗ, “ಕಾಂಗ್ರೆಸ್ ಪಕ್ಷ ಯಾವುದೇ ಸಂದರ್ಭದಲ್ಲಿಯೂ ಧರ್ಮಸ್ಥಳ ಅಥವಾ ಇತರ ಧಾರ್ಮಿಕ ಕ್ಷೇತ್ರಗಳ ಗೌರವ, ಸ್ವಾಭಿಮಾನ ಮತ್ತು ನಂಬಿಕೆಗೆ ಧಕ್ಕೆ ತರುವುದಿಲ್ಲ. ನ್ಯಾಯ ಮತ್ತು ಧರ್ಮದ ವಿಚಾರದಲ್ಲಿ ನಾವು ಎಲ್ಲರನ್ನೂ ಸಮಾನವಾಗಿ ನೋಡುತ್ತೇವೆ” ಎಂದು ಶಿವಕುಮಾರ್ ಹೇಳಿದರು.
ದರ್ಶನ್ ಜಾಮೀನು ರದ್ದು ಕುರಿತು
ಕೊಲೆ ಆರೋಪ ಪ್ರಕರಣದಲ್ಲಿ ನಟ ದರ್ಶನ್ ಅವರ ಜಾಮೀನನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿರುವ ಬಗ್ಗೆ ಕೇಳಿದಾಗ, “ನನಗೆ ಈಗಷ್ಟೇ ಈ ವಿಚಾರ ತಿಳಿಯಿತು. ಮುಖ್ಯಮಂತ್ರಿಗಳು ಸದನದ ವೇಳೆ ಇದನ್ನು ತಿಳಿಸಿದರು. ನನಗೆ ಶಾಕ್ ಆಯಿತು. ನ್ಯಾಯಾಲಯದ ತೀರ್ಪಿನ ಬಗ್ಗೆ ನಾವು ಮಾತನಾಡಲು ಬರುವುದಿಲ್ಲ” ಎಂದು ಅವರು ಪ್ರತಿಕ್ರಿಯಿಸಿದರು.

