ಬೆಂಗಳೂರು:ಬಿಪಿಎಲ್ ಕಾರ್ಡ್ ದುರುಪಯೋಗಕ್ಕೆ ಕಡಿವಾಣ: 12 ಲಕ್ಷಕ್ಕೂ ಹೆಚ್ಚು ಅನುಮಾನಾಸ್ಪದ ಪಡಿತರ ಚೀಟಿಗಳು ಪತ್ತೆ

Spread the love

ಬಿಪಿಎಲ್ ಕಾರ್ಡ್ ದುರುಪಯೋಗಕ್ಕೆ ಕಡಿವಾಣ: 12 ಲಕ್ಷಕ್ಕೂ ಹೆಚ್ಚು ಅನುಮಾನಾಸ್ಪದ ಪಡಿತರ ಚೀಟಿಗಳು ಪತ್ತೆ

ಬೆಂಗಳೂರು: ಬಿಪಿಎಲ್ ಕಾರ್ಡ್‌ಗಳನ್ನು ಆರ್ಥಿಕವಾಗಿ ಬಡವರಿಗಾಗಿ ಸರ್ಕಾರವು ಕಲ್ಪಿಸಿರುವ ಸೌಲಭ್ಯಗಳಲ್ಲಿ ಪ್ರಮುಖವಾದದ್ದು. ಆದರೆ ರಾಜ್ಯದಲ್ಲಿ ಅನರ್ಹರು ನಕಲಿ ದಾಖಲೆ ಸೃಷ್ಟಿಸಿ ಬಿಪಿಎಲ್ ಕಾರ್ಡ್ ಪಡೆದು ದುರುಪಯೋಗ ಮಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.

ರಾಜ್ಯದಲ್ಲಿ ವಿತರಣೆಗೊಂಡಿರುವ 1.17 ಕೋಟಿ ಬಿಪಿಎಲ್ ಕಾರ್ಡ್‌ಗಳಲ್ಲಿ 12 ಲಕ್ಷಕ್ಕೂ ಹೆಚ್ಚು ಪಡಿತರ ಚೀಟಿಗಳು ಶಂಕಾಸ್ಪದವೆಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಪತ್ತೆಹಚ್ಚಿದೆ. ಇದರಿಂದ ಬಡವರಿಗೆ ಸಿಗಬೇಕಾದ ಪಡಿತರ ಹಾಗೂ ಸರ್ಕಾರಿ ಸೌಲಭ್ಯಗಳು ಅನರ್ಹರ ಕೈಗೆ ಹೋಗುತ್ತಿರುವುದಾಗಿ ಆರೋಪ ಕೇಳಿಬಂದಿದೆ.

ಕಂಪನಿಗಳ ಡೈರೆಕ್ಟರ್‌ಗಳಿಗೂ ಬಿಪಿಎಲ್ ಕಾರ್ಡ್!
ಪರಿಶೀಲನೆಯಲ್ಲಿ ಹಲವಾರು ಅಚ್ಚರಿಯ ಸಂಗತಿಗಳು ಬಹಿರಂಗಗೊಂಡಿವೆ. ರಾಜ್ಯದ 19,690 ಬಿಪಿಎಲ್ ಕಾರ್ಡ್‌ಗಳು ಕಂಪನಿಗಳ ನಿರ್ದೇಶಕರ ಹೆಸರಲ್ಲಿ ದಾಖಲಾಗಿದೆ. ಇನ್ನು ವಾರ್ಷಿಕ 25 ಲಕ್ಷ ರೂ.ಗಿಂತ ಹೆಚ್ಚು ವಹಿವಾಟು ನಡೆಸುತ್ತಿರುವ 2,684 ಜನರೂ ಬಿಪಿಎಲ್ ಕಾರ್ಡ್ ಪಡೆದುಕೊಂಡಿದ್ದಾರೆ. ಕೆಲವರು ಮೃತಪಟ್ಟವರ ಹೆಸರಿನಲ್ಲಿ ಕಾರ್ಡ್ ಪಡೆದು ಪ್ರತಿ ತಿಂಗಳು ರೇಷನ್‌ ಅಂಗಡಿಗಳಲ್ಲಿ ಪಡಿತರ ಪಡೆಯುತ್ತಿರುವುದೂ ಪತ್ತೆಯಾಗಿದೆ.

ಅನರ್ಹರ ಪಟ್ಟಿ ಹೀಗಿದೆ
• ಇ-ಕೆವೈಸಿ ಮಾಡಿಸದವರು – 6,16,196
• ವಾರ್ಷಿಕ 20 ಲಕ್ಷ ರೂ.ಗಿಂತ ಹೆಚ್ಚು ಆದಾಯ ಹೊಂದಿದವರು – 5,13,613
• ಅಂತಾರಾಜ್ಯ ಪಡಿತರ ಚೀಟಿದಾರರು – 57,864
• 5 ಹೆಕ್ಟೇರ್‌ಗಿಂತ ಹೆಚ್ಚು ಜಮೀನು ಹೊಂದಿರುವವರು – 33,456
• 6 ತಿಂಗಳಿನಿಂದ ರೇಷನ್ ಪಡೆಯದವರು – 19,893
• ಕಂಪನಿಗಳ ಡೈರೆಕ್ಟರ್‌ಗಳು – 19,690
• 25 ಲಕ್ಷ ರೂ.ಗಿಂತ ಹೆಚ್ಚು ವಹಿವಾಟು ನಡೆಸಿದವರು – 2,684
• ಮೃತ ಸದಸ್ಯರ ಹೆಸರಲ್ಲಿ ಪತ್ತೆಯಾದವರು – 1,446

ಹೊರ ರಾಜ್ಯದವರಿಗೂ ಕಾರ್ಡ್!
ರಾಜ್ಯದಲ್ಲಿ ನೆಲೆಸಿರುವ ಹೊರ ರಾಜ್ಯದ 57,864 ಜನರು ನಕಲಿ ದಾಖಲೆ ಸೃಷ್ಟಿಸಿ ಬಿಪಿಎಲ್ ಕಾರ್ಡ್ ಪಡೆದುಕೊಂಡಿರುವುದೂ ಬಹಿರಂಗವಾಗಿದೆ. ಇವರು ಪ್ರತಿ ತಿಂಗಳು ಪಡಿತರ ಪಡೆಯುತ್ತಿರುವುದರಿಂದ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಉಂಟಾಗುತ್ತಿದೆ.

ಇ-ಕೆವೈಸಿ ಕಡ್ಡಾಯ
ಈ ದುರುಪಯೋಗ ತಡೆಗಟ್ಟಲು ಆಹಾರ ಇಲಾಖೆ ರೇಷನ್ ಕಾರ್ಡ್‌ಗೆ ಇ-ಕೆವೈಸಿ ಕಡ್ಡಾಯ ಮಾಡಿದೆ. ಇದರ ಮೂಲಕ ನಕಲಿ ಕಾರ್ಡ್‌ಗಳ ಅಸಲಿ ಆಟ ಬಯಲಾಗುತ್ತಿದ್ದು, ಅರ್ಹರಿಗೆ ಸೌಲಭ್ಯ ತಲುಪುವಲ್ಲಿ ಸಹಕಾರಿಯಾಗುತ್ತಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಒಟ್ಟಿನಲ್ಲಿ, ಈ ಕ್ರಮದಿಂದ ಬಡವರಿಗೆ ನ್ಯಾಯ ಸಿಗುವ ನಿರೀಕ್ಷೆಯಿದ್ದು, ಅನರ್ಹರಿಗೆ ಸರ್ಕಾರದಿಂದ ದೊರೆಯುತ್ತಿದ್ದ ಸೌಲಭ್ಯಕ್ಕೆ ಕಡಿವಾಣ ಬೀಳಲಿದೆ.


Leave a Reply

Your email address will not be published. Required fields are marked *