
ಕೌಟುಂಬಿಕ ಕಲಹ ಕೊಲೆಯಲ್ಲಿ ಅಂತ್ಯ: ಓರ್ವನ ಸಾವು,
ಹುಬ್ಬಳ್ಳಿ: ಕೌಟುಂಬಿಕ ಕಲಹದ ಹಿನ್ನೆಲೆ ಕುಂದಗೋಳ ತಾಲ್ಲೂಕಿನ ಕಡಪಟ್ಟಿ ಗ್ರಾಮದಲ್ಲಿ ಕೊಲೆಯೊಂದು ನಡೆದಿದೆ. ಸಣ್ಣ ಜಗಳ ದೊಡ್ಡದಾಗಿ, ಒಬ್ಬ ವ್ಯಕ್ತಿಯ ತಲೆಗೆ ಇಟ್ಟಿಗೆಯಿಂದ ಬಲವಾಗಿ ಹೊಡೆದು ಕೊಲೆ ಮಾಡಲಾಗಿದೆ. ಮೃತರನ್ನು ರುದ್ರಪ್ಪ ಅವಾರಿ ಎಂದು ಗುರುತಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಮೂವರ ವಿರುದ್ದ ಎಪ್ ಆಯ್ ಆರ್ ದಾಖಲಾಗಿದೆ.
ಸುಮಾರು ಐದು ವರ್ಷಗಳ ಹಿಂದೆ ಆರೋಪಿ ಪ್ರಕಾಶ್ ಮತ್ತು ಆತನ ಪತ್ನಿಯ ನಡುವೆ ನಡೆದ ಜಗಳದ ನಂತರ ಅವಳು ಮನೆ ಬಿಟ್ಟು ಹೋಗಿದ್ದರು. ಇತ್ತೀಚೆಗೆ ಅವಳು ಮನೆಗೆ ಮರಳಿದ್ದರು. ಅವಳ ಪೋಷಕರು ಮತ್ತು ಪತಿ ರುದ್ರಪ್ಪ ಅವರೊಂದಿಗೆ ಪ್ರಕಾಶ್ ನಿರಂತರವಾಗಿ ಜಗಳವಾಡುತ್ತಿದ್ದ. ಈ ಜಗಳ ವಿಕೋಪಕ್ಕೆ ಹೋಗಿ ಕೊಲೆಯಲ್ಲಿ ಅಂತ್ಯವಾಗಿದೆ.
ಆಗಸ್ಟ್ 9, ಸಂಜೆ 5 ಗಂಟೆಯ ಸುಮಾರಿಗೆ ರುದ್ರಪ್ಪ ಅವರು ತಮ್ಮ ಸಹೋದರ ಗುರುಶಿದ್ದಪ್ಪ ಅವರ ಮನೆಯ ಮುಂದೆ ಕುಳಿತಿದ್ದಾಗ,ಪ್ರಶಾಂತ, ಮಲ್ಲಿಕಾರ್ಜುನ, ಒರ್ವ ಮಹಿಳೆ ಸೇರಿ ಮೂವರು ಆರೋಪಿಗಳು ಏಕಾಏಕಿ ಅಲ್ಲಿಗೆ ಆಗಮಿಸಿ ಜಗಳ ಶುರು ಮಾಡಿದ್ದಾರೆ. “ಅವರ ಜೊತೆ ಯಾಕೆ ಮಾತನಾಡುತ್ತಿದ್ದೀರಿ?” ಎಂದು ಪ್ರಶ್ನಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಜಗಳಕ್ಕಿಳಿದಿದ್ದಾರೆ. ಇದನ್ನು ತಡೆಯಲು ಮುಂದಾದ ರುದ್ರಪ್ಪ ಮತ್ತು ಗುರುಶಿದ್ದಪ್ಪ ಅವರ ಮೇಲೆ ಹಲ್ಲೆ ನಡೆಸಿದ್ದಾರೆ.
ಆರೋಪಿ ಪ್ರಶಾಂತ್, ತಾನು “ನಿಮ್ಮನ್ನು ಕೊಲ್ಲದೆ ಬಿಡುವುದಿಲ್ಲ” ಎಂದು ಬೆದರಿಸಿ, ಅಲ್ಲೇ ಇದ್ದ ಇಟ್ಟಿಗೆಯಿಂದ ರುದ್ರಪ್ಪ ಅವರ ತಲೆಯ ಹಿಂಭಾಗಕ್ಕೆ ಬಲವಾಗಿ ಹೊಡೆದಿದ್ದಾನೆ. ಇದರಿಂದ ರುದ್ರಪ್ಪ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಅದೇ ಸಮಯದಲ್ಲಿ, ಉಳಿದ ಇಬ್ಬರು ಆರೋಪಿಗಳು ಗುರುಶಿದ್ದಪ್ಪ ಅವರ ಮೇಲೆ ಹಲ್ಲೆ ಮಾಡಿ, ಎಲ್ಲರೂ ಸೇರಿ ಜೀವ ಬೆದರಿಕೆ ಹಾಕಿದ್ದಾರೆ.
ಗಂಭೀರವಾಗಿ ಗಾಯಗೊಂಡ ರುದ್ರಪ್ಪ ಅವರನ್ನು ಕೂಡಲೇ ಕುಂದಗೋಳ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅದೇ ದಿನ ರಾತ್ರಿ 10 ಗಂಟೆಗೆ ರುದ್ರಪ್ಪ ಮೃತಪಟ್ಟಿದ್ದಾರೆ.
ಈ ಸಂಬಂಧ, ಪೊಲೀಸರು ಮೂವರು ಆರೋಪಿಗಳಾದ ಪ್ರಶಾಂತ್ (25), ಮಲ್ಲಿಕಾರ್ಜುನ (55), ಮತ್ತು ಒಬ್ಬ ಮಹಿಳೆ (48) ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ನಡೆಸುತ್ತಿದ್ದಾರೆ.

