ಮನೆ ಮುಂದೆ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶ: ಹೊನ್ನಾವರದಲ್ಲಿ ದಂಪತಿ ದಾರುಣ ಸಾವು

Spread the love


ಹೊನ್ನಾವರ (ಉತ್ತರ ಕನ್ನಡ): ತಾಲೂಕಿನ ಕಾಸರಕೋಡು ಗ್ರಾಮದ ವಿನಾಯಕ ಕೇರಿಯಲ್ಲಿ ಮನೆಯ ಮುಂದೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ದಂಪತಿ ಸ್ಥಳದಲ್ಲಿಯೇ ಮೃತಪಟ್ಟಿರುವ ದಾರುಣ ಘಟನೆ ಭಾನುವಾರ ಸಂಭವಿಸಿದೆ.

ಸಂತೋಷ ಗೌಡ (ಗಂಡ) ಮತ್ತು ಸೀತಾ ಗೌಡ (ಪತ್ನಿ) ಮೃತ ದುರ್ದೈವಿಗಳು.

ಘಟನೆ ವಿವರ:
ಭಾನುವಾರ ಸಂಜೆ ವೇಳೆಗೆ ಸಂತೋಷ ಗೌಡ ಅವರು ಮನೆಯ ಮುಂಭಾಗದಲ್ಲಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ಗಮನಿಸದೆ ಸ್ಪರ್ಶಿಸಿದ್ದಾರೆ. ತಕ್ಷಣವೇ ವಿದ್ಯುತ್ ಪ್ರವಹಿಸಿ ಅವರು ಒದ್ದಾಡುವುದನ್ನು ಕಂಡ ಪತ್ನಿ ಸೀತಾ ಅವರು, ಪತಿಯನ್ನು ರಕ್ಷಿಸಲು ಧಾವಿಸಿದ್ದಾರೆ. ಈ ವೇಳೆ, ಪತಿ ಸಂತೋಷ ಅವರನ್ನು ರಕ್ಷಿಸಲು ಪ್ರಯತ್ನಿಸಿದ ಸೀತಾಗೂ ವಿದ್ಯುತ್ ಪ್ರವಹಿಸಿದ್ದು, ದಂಪತಿಗಳು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಸ್ಥಳೀಯರ ಆಕ್ರೋಶ:
ಘಟನೆಯಿಂದಾಗಿ ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಈ ಘಟನೆ ಸಂಭವಿಸಿದೆ ಎಂದು ಆರೋಪಿಸಿದ್ದಾರೆ. ಹಳೆಯ ಮತ್ತು ತುಂಡಾಗಿ ಬೀಳುವ ಸ್ಥಿತಿಯಲ್ಲಿದ್ದ ವಿದ್ಯುತ್ ತಂತಿಗಳ ಬಗ್ಗೆ ದೂರು ನೀಡಿದ್ದರೂ ಹೆಸ್ಕಾಂ ಸಿಬ್ಬಂದಿ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ದಂಪತಿಗಳ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಹೊನ್ನಾವರ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮತ್ತು ಹೆಸ್ಕಾಂ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Leave a Reply

Your email address will not be published. Required fields are marked *