ಯೂಟ್ಯೂಬರ್ ಮುಕಳೆಪ್ಪ ವಿವಾದ: ಮುಂಡಗೋಡ ನೋಂದಣಾಧಿಕಾರಿ ಕಚೇರಿಗೇ ಬೀಗ! ಮುಕಳೆಪ್ಪ-ಗಾಯತ್ರಿ ಮದುವೆ ದಾಖಲೆ ವಿವಾದ; ಸಿಬ್ಬಂದಿ ನಾಪತ್ತೆ, ಸಾರ್ವಜನಿಕರ ಪರದಾಟ

Spread the love

ಮುಂಡಗೋಡ: ಸುಳ್ಳು ದಾಖಲೆ ಸೃಷ್ಟಿಸಿ ಹಿಂದೂ ಯುವತಿಯನ್ನು ವಿವಾಹವಾಗಿದ್ದಾರೆ ಎನ್ನಲಾದ ಯೂಟ್ಯೂಬರ್ ಮುಕಳೆಪ್ಪ (Mukaleppa) ಅವರ ಪ್ರಕರಣವು ಇದೀಗ ಸರ್ಕಾರಿ ಅಧಿಕಾರಿಗಳ ಕುತ್ತಿಗೆಗೆ ಸುತ್ತಿಕೊಂಡಿದೆ. ಈ ವಿವಾದದ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದ ವಿವಾಹ ನೋಂದಣಾಧಿಕಾರಿ ಕಚೇರಿಗೇ ಬೀಗ ಜಡಿದು ಸಿಬ್ಬಂದಿ ನಾಪತ್ತೆಯಾಗಿರುವ ಆತಂಕಕಾರಿ ವಿದ್ಯಮಾನ ನಡೆದಿದೆ.

ಸುಳ್ಳು ದಾಖಲೆ ನೀಡಿ ವಿವಾಹ ನಡೆದಿರುವುದು ಬಯಲಾದ ಬೆನ್ನಲ್ಲೇ, ವಿವಾಹ ನೋಂದಣಿ ಮಾಡಿಕೊಟ್ಟಿದ್ದ ಕಚೇರಿ ಸಿಬ್ಬಂದಿ ವಿರುದ್ಧವೂ ದೂರು ದಾಖಲಾಗಿತ್ತು. ಹೀಗಾಗಿ, ಬುಧವಾರದಂದು ನೋಂದಣಾಧಿಕಾರಿ ಹಾಗೂ ಸಿಬ್ಬಂದಿ ಕಚೇರಿಗೆ ಗೈರು ಹಾಜರಾಗಿದ್ದು, ಇಡೀ ಕಚೇರಿಗೆ ಬೀಗ ಹಾಕಲಾಗಿದೆ.

ನೋಂದಣಾಧಿಕಾರಿ ಕಚೇರಿಗೇ ಬೀಗ: ಸಾರ್ವಜನಿಕರ ಪರದಾಟ
ಮುಕಳೆಪ್ಪ ಮತ್ತು ಯುವತಿ ಗಾಯಿತ್ರಿ ಅವರ ಮದುವೆ ಒಂದೇ ದಿನದಲ್ಲಿ, ಅಂದರೆ ಜೂನ್ 3ರಂದು, ಅವರ ಬಾಡಿಗೆ ನೋಂದಣಿ ದಾಖಲಾದ ದಿನವೇ, ನೆರವೇರಿತ್ತು. ನೋಂದಣಾಧಿಕಾರಿ ಹೇಮಾ ಅವರು ನಿಯಮಬಾಹಿರವಾಗಿ ವಿವಾಹ ನೋಂದಣಿ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.

ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 22ರಂದು ಶ್ರೀರಾಮ ಸೇನೆ ಕಾರ್ಯಕರ್ತರೊಂದಿಗೆ ಆಗಮಿಸಿದ್ದ ಗಾಯಿತ್ರಿ ಅವರ ತಾಯಿ ಶಿವಕ್ಕ ಅವರು ಕಚೇರಿಗೆ ಮುತ್ತಿಗೆ ಹಾಕಿ ಹೇಮಾರವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ಇದಲ್ಲದೇ, ಮುಂಡಗೋಡು ಠಾಣೆಯಲ್ಲಿ ನೋಂದಣಾಧಿಕಾರಿ ಹೇಮಾ ಸೇರಿ ಒಟ್ಟು ಏಳು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಪ್ರಕರಣ ದಾಖಲಾದ ಬಳಿಕ ಬುಧವಾರ ಕಚೇರಿಗೆ ಬಂದ ಸಾರ್ವಜನಿಕರು ಬೀಗ ಜಡಿದ ನೋಂದಣಾಧಿಕಾರಿ ಕಚೇರಿ ನೋಡಿ ವಾಪಸಾಗಬೇಕಾಯಿತು. ಕಚೇರಿ ಸಮಯದಲ್ಲಿ ಸರ್ಕಾರಿ ಕಚೇರಿಗೆ ಸಿಬ್ಬಂದಿಯೇ ಇಲ್ಲದೆ ಬೀಗ ಹಾಕಿರುವ ಕುರಿತು ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾಲ್ವರು ಸಿಬ್ಬಂದಿ ನಾಪತ್ತೆ: ತಹಶೀಲ್ದಾರ್ ಮೌನ
ನೋಂದಣಿ ಕಚೇರಿಯಲ್ಲಿ ಅಧಿಕಾರಿಯೊಂದಿಗೆ ಒಟ್ಟು ನಾಲ್ಕು ಜನ ಸಿಬ್ಬಂದಿ ಇರಬೇಕಿತ್ತು. ಆದರೆ ಇಡೀ ಕಚೇರಿಗೆ ಬೀಗ ಜಡಿದಿರುವುದು ಅನುಮಾನಕ್ಕೆ ಎಡೆ ಮಾಡಿದೆ. ನೋಂದಣಾಧಿಕಾರಿ ಹೇಮಾಗೆ ಆರೋಗ್ಯ ಸರಿಯಿಲ್ಲ ಎಂಬ ಸಬೂಬು ನೀಡಲಾಗಿದ್ದರೂ, ಉಳಿದ ಸಿಬ್ಬಂದಿ ಎಲ್ಲಿಗೆ ಹೋದರು ಎಂಬ ಪ್ರಶ್ನೆಗೆ ತಹಶೀಲ್ದಾರ್ ಕೂಡ ಮೌನ ವಹಿಸಿರುವುದು ಸ್ಥಳೀಯರ ಆಕ್ರೋಶ ಹೆಚ್ಚಿಸಿದೆ. ಕಚೇರಿಗೆ ಬೀಗ ಹಾಕಿರುವ ಬಗ್ಗೆ ಸ್ಥಳೀಯರು ತಹಶೀಲ್ದಾರ್‌ಗೆ ದೂರು ಸಹ ನೀಡಿದ್ದಾರೆ.

ಇಂದು ಪ್ರಮೋದ್ ಮುತಾಲಿಕ್ ಭೇಟಿ, ಪ್ರತಿಭಟನೆ ಸಾಧ್ಯತೆ
ಈ ಎಲ್ಲ ಬೆಳವಣಿಗೆಗಳ ಮಧ್ಯೆ, ಇಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಇದೇ ಕಚೇರಿಗೆ ಭೇಟಿ ನೀಡಿ, ಮುಕಳೆಪ್ಪ ವಿವಾಹಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸುವ ಸಾಧ್ಯತೆಯಿದೆ. ಮಾತ್ರವಲ್ಲ, ಈ ಸಂಬಂಧ ಪ್ರತಿಭಟನೆ ಮಾಡುವ ಸಾಧ್ಯತೆಗಳೂ ದಟ್ಟವಾಗಿವೆ. ಇದು ವಿವಾಹ ನೋಂದಣಿ ಮಾಡಿದ ಅಧಿಕಾರಿ ಹೇಮಾ ಅವರಿಗೆ ಮತ್ತಷ್ಟು ಸಮಸ್ಯೆ ತಂದೊಡ್ಡಬಹುದು.

ಏತನ್ಮಧ್ಯೆ, ಯೂಟ್ಯೂಬರ್ ಮುಕಳೆಪ್ಪ ಮತ್ತು ಗಾಯಿತ್ರಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿ, ‘ಲವ್ ಜಿಹಾದ್ ಎಲ್ಲಾ ಸುಳ್ಳು, ನಾವು ಪರಸ್ಪರ ಪ್ರೀತಿಸಿ ವಿವಾಹವಾಗಿದ್ದೇವೆ, ನಮ್ಮನ್ನು ಬದುಕಲು ಬಿಡಿ’ ಎಂದು ಮನವಿ ಮಾಡಿದ್ದಾರೆ. ಆದರೆ, ಯುವತಿ ತಾಯಿ ಶಿವಕ್ಕ ಹಾಗೂ ಶ್ರೀರಾಮ ಸೇನೆಯವರು ಈ ಪ್ರಕರಣವನ್ನು ಸುಲಭವಾಗಿ ಕೈಬಿಡುವ ಲಕ್ಷಣಗಳು ಕಾಣಿಸುತ್ತಿಲ್ಲ. ಮುಂದೇ ಎನಾಗಯತ್ತೋ ಕಾದು ನೋಡಬೇಕು

Leave a Reply

Your email address will not be published. Required fields are marked *