​ಅಧಿಕಾರ ಹಂಚಿಕೆ ಗೊಂದಲ ಮಾಧ್ಯಮಗಳ ಸೃಷ್ಟಿ; ಫೆ.13 ರಂದು ಹಾವೇರಿಯಲ್ಲಿ ‘ಸಾಧನಾ ಸಮಾವೇಶ’: ಸಿಎಂ ಸಿದ್ದರಾಮಯ್ಯ

Spread the love

ಮೈಸೂರು: ಪಕ್ಷದಲ್ಲಿ ಅಧಿಕಾರ ಹಂಚಿಕೆಯ ಬಗ್ಗೆ ಯಾವುದೇ ಗೊಂದಲಗಳಿಲ್ಲ. ಇದೆಲ್ಲವೂ ಮಾಧ್ಯಮಗಳ ಸೃಷ್ಟಿಯಾಗಿದ್ದು, ಅಂತಿಮವಾಗಿ ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಾಗಿರುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

​ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಗೂಡ್ಲೂರಿಗೆ ತೆರಳುವ ಮಾರ್ಗಮಧ್ಯೆ ಅವರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರ ಹಂಚಿಕೆ ವಿಷಯದಲ್ಲಿ ಪಕ್ಷದ ಶಾಸಕರಿಗೆ ಯಾವುದೇ ಮಾಹಿತಿ ಇರುವುದಿಲ್ಲ. ಈ ವಿಚಾರದ ಬಗ್ಗೆ ನಾನು ಅಥವಾ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಷ್ಟೇ ಮಾತನಾಡಬೇಕು. ಆದರೆ, ಈ ವಿಷಯದಲ್ಲಿ ನಮ್ಮ ಪಕ್ಷದ ಶಾಸಕರಿಗಿಂತ ಮಾಧ್ಯಮಗಳೇ ಹೆಚ್ಚು ಆಸಕ್ತಿ ತೋರುತ್ತಿವೆ ಎಂದು ಅವರು ಮಾರ್ಮಿಕವಾಗಿ ನುಡಿದರು.

​ರಾಹುಲ್ ಗಾಂಧಿ ಅವರ ಭೇಟಿ ಕುರಿತು ಪ್ರತಿಕ್ರಿಯಿಸಿದ ಸಿಎಂ, ಅವರು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳುತ್ತಿದ್ದಾಗ ಸೌಹಾರಯುತವಾಗಿ ಭೇಟಿಯಾಗಿದ್ದೇನೆ. ಈ ಸಂದರ್ಭದಲ್ಲಿ ಯಾವುದೇ ರಾಜಕೀಯ ವಿಚಾರಗಳ ಬಗ್ಗೆ ಚರ್ಚೆ ನಡೆದಿಲ್ಲ. ಸಂಜೆ ಅವರು ದೆಹಲಿಗೆ ಹಿಂತಿರುಗುವಾಗಲೂ ಅವರನ್ನು ಭೇಟಿಯಾಗಿ ಬೀಳ್ಕೊಡುವುದಾಗಿ ತಿಳಿಸಿದರು.

ಮಾರ್ಚ್ ಮೊದಲ ವಾರ ಬಜೆಟ್:

ರಾಜ್ಯ ಬಜೆಟ್ ಮಂಡನೆ ಬಗ್ಗೆ ಮಾಹಿತಿ ನೀಡಿದ ಅವರು, ಬಹುತೇಕ ಮಾರ್ಚ್ ಮೊದಲ ವಾರದಲ್ಲಿ ಆಯವ್ಯಯ ಮಂಡಿಸಲಾಗುವುದು ಎಂದರು. ಇದೇ ವೇಳೆ, ಮುಖ್ಯಮಂತ್ರಿಯಾಗಿ ತಾವು ಅಧಿಕಾರ ವಹಿಸಿಕೊಂಡು ಸಾವಿರ ದಿನಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ, ಇದೇ ಫೆಬ್ರವರಿ 13ರಂದು ಹಾವೇರಿಯಲ್ಲಿ ಬೃಹತ್ ‘ಸಾಧನಾ ಸಮಾವೇಶ’ವನ್ನು ಆಯೋಜಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.

​ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಸರ್ಕಾರ ಸಂಪೂರ್ಣ ಸಿದ್ಧವಿದೆ. ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಿಂದ ಪಾಲಿಕೆ ಚುನಾವಣೆಗಳ ಫಲಿತಾಂಶದ ಮೇಲೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ. ರಾಜ್ಯದ ಜನರು ನಮ್ಮ ಆಡಳಿತವನ್ನು ಮೆಚ್ಚಿದ್ದು, ನಮಗೆ ಆಶೀರ್ವದಿಸುತ್ತಾರೆಂಬ ವಿಶ್ವಾಸವಿದೆ ಎಂದು ಮುಖ್ಯಮಂತ್ರಿಗಳು ಭರವಸೆ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *