ಅಣ್ಣಿಗೇರಿಯ ಸರ್ವತೋಮುಖ ಅಭಿವೃದ್ಧಿಯೇ ನನ್ನ ಗುರಿ: ಶಾಸಕ ಎನ್.ಎಚ್. ಕೋನರಡ್ಡಿ ಸಂಕಲ್ಪ

Spread the love


ಅಣ್ಣಿಗೇರಿಯ ಸರ್ವತೋಮುಖ ಅಭಿವೃದ್ಧಿಯೇ ನನ್ನ ಗುರಿ: ಶಾಸಕ ಎನ್.ಎಚ್. ಕೋನರಡ್ಡಿ ಸಂಕಲ್ಪ

ಅಣ್ಣಿಗೇರಿ: ಅಣ್ಣಿಗೇರಿ ಪಟ್ಟಣವನ್ನು ಎಲ್ಲಾ ರಂಗಗಳಲ್ಲೂ ಅಭಿವೃದ್ಧಿಪಡಿಸಿ, ರಾಜ್ಯದಲ್ಲೇ ಒಂದು ಮಾದರಿ ನಗರವನ್ನಾಗಿ ಮಾಡುವುದೇ ನನ್ನ ಪ್ರಮುಖ ಗುರಿಯಾಗಿದೆ ಎಂದು ಶಾಸಕ ಎನ್.ಎಚ್. ಕೋನರಡ್ಡಿ ಅವರು ಹೇಳಿದರು.

ಸೋಮವಾರ ಪಟ್ಟಣದಲ್ಲಿ ನಗರಾಭಿವೃದ್ಧಿ ಇಲಾಖೆ, ಪೌರಾಡಳಿತ ನಿರ್ದೇಶನಾಲಯ ಹಾಗೂ ಪುರಸಭೆ ಅಣ್ಣಿಗೇರಿ ಇವುಗಳ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಸ್ವಚ್ಛ ಭಾರತ ಮಿಷನ್ 2.0 ಅಡಿಯಲ್ಲಿ ನಿರ್ಮಿಸಲಾದ ಸಾರ್ವಜನಿಕ ಶೌಚಾಲಯ ಉದ್ಘಾಟನೆ ಹಾಗೂ ಇಂದೋರ್ ಮಾದರಿಯ ಸ್ವಚ್ಛತಾ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪಟ್ಟಣದ ಸ್ವಚ್ಛತೆಯ ರಾಯಭಾರಿಯಾದ ದಾಸೋಹ ಮಠದ ಡಾ. ಶಿವಕುಮಾರ ಮಹಾಸ್ವಾಮೀಜಿಗಳ ನೇತೃತ್ವದಲ್ಲಿ ನಡೆದ ಈ ಜಾಥಾವು ಪ್ರಮುಖ ರಸ್ತೆಗಳ ಮೂಲಕ ಸಂಚರಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿತು.

ಸ್ವಾಮಿ ವಿವೇಕಾನಂದ ವೃತ್ತದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರು, ಪ್ಲಾಸ್ಟಿಕ್ ಮುಕ್ತ ಪರಿಸರ ಮತ್ತು ಹಸಿ-ಒಣ ಕಸದ ವೈಜ್ಞಾನಿಕ ವಿಂಗಡಣೆಗೆ ಸಾರ್ವಜನಿಕರು ಒತ್ತು ನೀಡಬೇಕು ಎಂದು ಕರೆ ನೀಡಿದರು. ಸುಮಾರು 21 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಸುಸಜ್ಜಿತ ಸಾರ್ವಜನಿಕ ಶೌಚಾಲಯವನ್ನು ಸಾರ್ವಜನಿಕರು ಶಿಸ್ತುಬದ್ಧವಾಗಿ ಬಳಕೆ ಮಾಡಿಕೊಂಡು ಸ್ವಚ್ಛತೆಯನ್ನು ಕಾಪಾಡಬೇಕು ಎಂದು ತಿಳಿಸಿದರು.

ಇದೇ ವೇಳೆ ಅಣ್ಣಿಗೇರಿಯ ಸರ್ಕಾರಿ ಕಾಲೇಜಿನಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿರುವ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ ಅವರು, ಶೈಕ್ಷಣಿಕ ಪ್ರಗತಿಗೆ ಎಲ್ಲರೂ ಕೈಜೋಡಿಸಬೇಕೆಂದು ಮನವಿ ಮಾಡಿದರು. ತಾಲೂಕು ತಹಶೀಲ್ದಾರ್ ಕಚೇರಿ ಕಟ್ಟಡಕ್ಕೆ ಈಗಾಗಲೇ 16 ಕೋಟಿ ರೂಪಾಯಿ ಮಂಜೂರಾತಿಯನ್ನು ಕೃಷ್ಣ ಬೈರೇಗೌಡರು ನೀಡಿದ್ದಾರೆ ಎಂಬ ಆಶಾದಾಯಕ ಮಾಹಿತಿಯನ್ನು ಹಂಚಿಕೊಂಡರು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಡಾ. ಶಿವಕುಮಾರ ಮಹಾಸ್ವಾಮಿಗಳು ಸ್ವಚ್ಛತಾ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಕೇವಲ ಮನೆ ಮತ್ತು ಮನಗಳನ್ನು ಸ್ವಚ್ಛ ಮಾಡಿದರೆ ಸಾಲದು, ನಮ್ಮ ಊರನ್ನೂ ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದ ಶ್ರೀಗಳು, ಯುವಕರು ಗುಟ್ಕಾ ಮತ್ತು ತಂಬಾಕುಗಳಂತಹ ಮಾದಕ ವ್ಯಸನಗಳಿಂದ ದೂರವಿರಬೇಕೆಂದು ಕಿವಿಮಾತು ಹೇಳಿದರು.

ಸರ್ಕಾರಿ ಕಾಲೇಜಿನ ಮಕ್ಕಳ ಸಂಖ್ಯೆ ಹೆಚ್ಚಿಸಲು ಅಗತ್ಯವಿದ್ದರೆ ತಾವೇ ಸ್ವತಃ ತರಗತಿಗಳನ್ನು ತೆಗೆದುಕೊಳ್ಳುವುದಾಗಿ ಘೋಷಿಸುವ ಮೂಲಕ ಶಿಕ್ಷಣದ ಮೇಲಿರುವ ಕಾಳಜಿಯನ್ನು ವ್ಯಕ್ತಪಡಿಸಿದರು. ನಂತರ ಪುರಸಭೆ ಅಧ್ಯಕ್ಷ ಶಿವಾನಂದ ಬೇಳಹಾರ ಮಾತನಾಡಿ, ಪಟ್ಟಣದ ಅಭಿವೃದ್ಧಿಗಾಗಿ ಪಕ್ಷಾತೀತವಾಗಿ ಶಾಸಕರೊಂದಿಗೆ ಕೈಜೋಡಿಸುವುದಾಗಿ ಭರವಸೆ ನೀಡಿದರು.

ವೇದಿಕೆಯಲ್ಲಿ ವಾರ್ಡ್ ಸದಸ್ಯ ಸಿ.ಜಿ. ನಾವಳ್ಳಿ ಮಾತನಾಡಿ, 30 ವರ್ಷಗಳಿಂದ ಶೌಚಾಲಯವಿಲ್ಲದೆ ಪರದಾಡುತ್ತಿದ್ದ ಭೂವಿ ಸಮಾಜದ ಜನರ ಕನಸನ್ನು ಶಾಸಕರು ಇಂದು ನನಸು ಮಾಡಿದ್ದಾರೆ ಎಂದರು. ಪ್ರಾಂಶುಪಾಲ ಎಸ್.ಎಸ್. ಹರ್ಲಾಪುರ ಅವರು ಶಾಸಕರ ಜನಪರ ಕಾರ್ಯಗಳನ್ನು ಶ್ಲಾಘಿಸಿದರು.

ಸಮಾರಂಭದಲ್ಲಿ ಪುರಸಭೆ ಮುಖ್ಯಾಧಿಕಾರಿ ವೈ.ಜಿ. ಗದ್ದಿಗೌಡರ, ಉಪಾಧ್ಯಕ್ಷ ನಾಗರಾಜ ದಳವಾಯಿ, ಗ್ಯಾರಂಟಿ ಸಮಿತಿ ಅಧ್ಯಕ್ಷ ಮಂಜುನಾಥ ಮಾಯಣ್ಣವರ, ಸವಿತಾ ಸಮಾಜದ ಚಂಬಣ್ಣ ಹಾಳದೋಟರ ಸೇರಿದಂತೆ ಅನೇಕ ಗಣ್ಯರು, ಪುರಸಭೆ ಸದಸ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಾಸಕ ಕೋನರಡ್ಡಿ, ಶ್ರೀಗಳು ಹಾಗೂ ಮುಖ್ಯಾಧಿಕಾರಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.


ವರದಿ: ಮಹಾಂತೇಶ ಹಕ್ಕರಕಿ.

Leave a Reply

Your email address will not be published. Required fields are marked *