
ಧಾರವಾಡ (ಸೆ.19): ಉತ್ತರ ಕರ್ನಾಟಕದ ಜನಪ್ರಿಯ ಯೂಟ್ಯೂಬರ್ ಹಾಗೂ ಶಾರ್ಟ್ ವಿಡಿಯೋ ಸ್ಟಾರ್ ಕ್ವಾಜಾ ಅಲಿಯಾಸ್ ಮುಕಳೆಪ್ಪ ವಿರುದ್ಧ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮುಕಳೆಪ್ಪ ಸುಳ್ಳು ದಾಖಲೆ ನೀಡಿ ಹಿಂದೂ ಯುವತಿಯನ್ನು ಮದುವೆಯಾಗಿದ್ದಾನೆ ಮತ್ತು ತನ್ನ ವೀಡಿಯೊಗಳಲ್ಲಿ ಹಿಂದೂ ಧರ್ಮವನ್ನು ಅವಮಾನಿಸುತ್ತಿದ್ದಾನೆ ಎಂದು ಬಜರಂಗದಳದ ಕಾರ್ಯಕರ್ತರು ಗಂಭೀರ ಆರೋಪ ಮಾಡಿದ್ದಾರೆ.
ಸುಳ್ಳು ದಾಖಲೆ ಸೃಷ್ಟಿಸಿ ವಿವಾಹ ಆರೋಪ
ಬಜರಂಗದಳ ಕಾರ್ಯಕರ್ತರು ನೀಡಿದ ದೂರಿನ ಪ್ರಕಾರ, ಮುಕಳೆಪ್ಪ ಜೂನ್ 5, 2025 ರಂದು ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಗಾಯತ್ರಿ ಎಂಬ ಹಿಂದೂ ಯುವತಿಯನ್ನು ವಿವಾಹವಾಗಿದ್ದಾನೆ. ಈ ವಿವಾಹಕ್ಕಾಗಿ, ಆತ ತನ್ನ ವಿಳಾಸವನ್ನು ಶಿರಹಟ್ಟಿ ಗಾಂಧಿನಗರ ಎಂದು ನಮೂದಿಸಿ ನಕಲಿ ದಾಖಲೆಗಳನ್ನು ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ಮುಕಳೆಪ್ಪ ಹಿಂದೂ ಯುವತಿಯರನ್ನು ಪ್ರೀತಿಯ ಬಲೆಗೆ ಬೀಳಿಸಿ ವಂಚನೆ ಮಾಡುತ್ತಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಹಿಂದೂ ಧರ್ಮಕ್ಕೆ ಅವಮಾನ ಆರೋಪ
ಕ್ವಾಜಾ ಅಲಿಯಾಸ್ ಮುಕಳೆಪ್ಪ ಹೆಚ್ಚಾಗಿ ಹಿಂದೂ ಯುವತಿಯರೊಂದಿಗೆ ವಿಡಿಯೋಗಳನ್ನು ಮಾಡುತ್ತಾರೆ. ಆತನ ವೀಡಿಯೊಗಳಲ್ಲಿ ಹಿಂದೂ ಧರ್ಮ ಮತ್ತು ಆಚರಣೆಗಳನ್ನು ಅವಮಾನಿಸುವ ಅಂಶಗಳಿವೆ ಎಂದು ದೂರಿನಲ್ಲಿ ಹೇಳಲಾಗಿದೆ. ಹಿಂದುತ್ವ ಮತ್ತು ಹಿಂದೂ ಹೆಣ್ಣುಮಕ್ಕಳನ್ನು ಗುರಿಯಾಗಿಸಿಕೊಂಡು ಮುಕಳೆಪ್ಪ ಇಂತಹ ವೀಡಿಯೊಗಳನ್ನು ಮಾಡುತ್ತಿದ್ದಾನೆ ಎಂದು ಬಜರಂಗದಳದ ಸಂಚಾಲಕ ಸಿದ್ದು ಹಿರೇಮಠ ಮತ್ತು ಕಾರ್ಯಕರ್ತ ಶಂಕರ್ ಆರೋಪಿಸಿದ್ದಾರೆ. ಇಂತಹ ವೀಡಿಯೊಗಳು ಸಮಾಜದಲ್ಲಿ ಧಾರ್ಮಿಕ ಅಶಾಂತಿಯನ್ನು ಸೃಷ್ಟಿಸುತ್ತಿವೆ ಎಂದು ಅವರು ಹೇಳಿದ್ದಾರೆ.
ದಂಪತಿಯ ವಿಚಾರಣೆ
ದೂರು ದಾಖಲಾದ ನಂತರ, ಧಾರವಾಡ ಗ್ರಾಮೀಣ ಪೊಲೀಸರು ಮುಕಳೆಪ್ಪ ಮತ್ತು ಆತನ ಪತ್ನಿ ಗಾಯತ್ರಿಯನ್ನು ವಿಚಾರಣೆಗಾಗಿ ಠಾಣೆಗೆ ಕರೆಸಿದ್ದಾರೆ. ಈ ವೇಳೆ ಹಿಂದೂ ಸಂಘಟನೆಯ ಕಾರ್ಯಕರ್ತರು ಗಾಯತ್ರಿಯನ್ನು ಮನವೊಲಿಸಲು ಪ್ರಯತ್ನಿಸಿದಾಗ, ಆಕೆ ತನಗೆ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿ ಅವರ ಮನವಿಯನ್ನು ತಿರಸ್ಕರಿಸಿದ್ದಾಳೆ.
‘ಹಿಂದೂ ಹೆಣ್ಣುಮಕ್ಕಳು ಇಂತಹ ಮತಾಂದರಿಂದ ದೂರವಿರಬೇಕು’ ಎಂದು ಬಜರಂಗದಳದ ಕಾರ್ಯಕರ್ತರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಸದ್ಯ ಈ ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದು, ಮುಕಳೆಪ್ಪ ನೀಡಿದ ದಾಖಲೆಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತಿದ್ದಾರೆ.

