

ಬೆಂಗಳೂರು: ಹಿಂದುಳಿದ ವರ್ಗಗಳಿಗೆ ‘ಹಾವನೂರು ವರದಿಯು ಬೈಬಲ್’ ಇದ್ದಂತೆ. ಅಂಬೇಡ್ಕರ್ ಕನಸಿನ ಮೀಸಲಾತಿ ಮತ್ತು ಸಾಮಾಜಿಕ ನ್ಯಾಯಕ್ಕೆ ನನ್ನ ಕೊನೆಯುಸಿರು ಇರುವವರೆಗೂ ಬದ್ಧನಾಗಿರುತ್ತೇನೆ. ನಮ್ಮ ಸರ್ಕಾರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಗಣತಿಯ ವರದಿಯನ್ನು ಒಪ್ಪಿಕೊಂಡು ಜಾರಿಗೊಳಿಸಲು ಸಿದ್ಧವಿದ್ದು, ಮೀಸಲಾತಿ ಪ್ರಮಾಣವನ್ನು ಶೇ 70-75ಕ್ಕೆ ಹೆಚ್ಚಿಸುವ ಬಗ್ಗೆಯೂ ಆಸಕ್ತಿ ಹೊಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಕಟಿಸಿದರು. ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ “ಎಲ್.ಜಿ. ಹಾವನೂರು ವರದಿಯ ಸುವರ್ಣ ಮಹೋತ್ಸವ” ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಹಿಂದುಳಿದವರು, ದಲಿತರು ಸೇರಿದಂತೆ ಶೂದ್ರ ಸಮುದಾಯದವರು ತಮ್ಮ ವಿರೋಧಿಗಳಾದ ಬಿಜೆಪಿ, ಆರ್.ಎಸ್.ಎಸ್ ಮತ್ತು ಎಬಿವಿಪಿ ಸೇರುತ್ತಿರುವ ಕುರಿತು ತೀವ್ರ ಬೇಸರ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು, ದೇವರು ಮತ್ತು ಧರ್ಮದ ಹೆಸರಿನಲ್ಲಿ ಸಾಯುತ್ತಿರುವವರು ನಮ್ಮ ಹಿಂದುಳಿದವರೇ. ಸ್ವಾರ್ಥಕ್ಕಾಗಿ ಬಿಜೆಪಿ-ಆರ್.ಎಸ್.ಎಸ್ ಸೇರಿ, ಅವರೇ ಮೂಲ ಆರ್.ಎಸ್.ಎಸ್ ನವರಿಗಿಂತಲೂ ಹೆಡಗೆವಾರ್ ರೀತಿ ಮಾತನಾಡುತ್ತಾರೆ. ಬಿಜೆಪಿ-ಆರ್.ಎಸ್.ಎಸ್ ಸಿದ್ಧಾಂತ ಹಿಂದುಳಿದವರ ಶತ್ರು ಎಂದು ಗೊತ್ತಿದ್ದೂ ಹೋಗಿ ಸೇರುತ್ತಿರುವುದು ದುರ್ದೈವ ಎಂದರು. ಹಿಂದುಳಿದವರು ಇನ್ನೂ ಗುಲಾಮಗಿರಿ ಮನಸ್ಥಿತಿಯಿಂದ ಹೊರಗೆ ಬಂದಿಲ್ಲ. ಮೇಲು ಜಾತಿಯ ಬಡವರನ್ನು ಬಹುವಚನದಿಂದ ಕರೆಯುವುದು ಮತ್ತು ಕೆಳ ಜಾತಿಯ ಶ್ರೀಮಂತರನ್ನು ಏಕವಚನದಲ್ಲಿ ಕರೆಯುವುದೇ ಗುಲಾಮಿ ಮನಸ್ಥಿತಿಯ ಸಂಕೇತ ಎಂದು ಅವರು ವಿಶ್ಲೇಷಿಸಿದರು.
ಹಾವನೂರು ವರದಿಯನ್ನು ದೇವರಾಜ ಅರಸರು ಹಿಂದುಳಿದವರ ಬೈಬಲ್ ಎಂದು ಕರೆದಿದ್ದರು. ಸುಪ್ರೀಂಕೋರ್ಟ್ ಸಹ ಈ ವರದಿಯನ್ನು ಅಪಾರವಾಗಿ ಮೆಚ್ಚಿಕೊಂಡಿದೆ. ಸಾಮಾನ್ಯ ಪರಿಶಿಷ್ಟ ಕುಟುಂಬದಲ್ಲಿ ಹುಟ್ಟಿ, ಬೇಡರ ಜಾತಿಯ ಮೊದಲ ವಕೀಲರಾಗಿದ್ದ ಹಾವನೂರು ಅವರಿಗೆ ಅವಕಾಶ ಸಿಕ್ಕಿದ್ದರಿಂದ ತಮ್ಮ ಸಾಮರ್ಥ್ಯವನ್ನು ತೋರಿಸಲು ಸಾಧ್ಯವಾಯಿತು. ಪ್ರತಿಭೆ ಯಾರ ಸ್ವತ್ತೂ ಅಲ್ಲ, ಅವಕಾಶ ಸಿಕ್ಕಾಗ ಹೊರಗೆ ಬರುತ್ತದೆ ಎಂದು ಮುಖ್ಯಮಂತ್ರಿ ಪ್ರತಿಪಾದಿಸಿದರು.
ತಮ್ಮ ರಾಜಕೀಯ ಜೀವನದ ಅನುಭವ ಹಂಚಿಕೊಂಡ ಅವರು, “ನಾನು ಹಣಕಾಸು ಮಂತ್ರಿಯಾದಾಗ, ‘ಈ ಸಿದ್ದರಾಮಯ್ಯಂಗೆ ನೂರು ಕುರಿ ಎಣಿಸೋಕೆ ಬರಲ್ಲ ಬಜೆಟ್ ಮಂಡಿಸ್ತಾರಾ’ ಎಂದು ಪತ್ರಿಕೆಯೊಂದು ಬರೆದಿತ್ತು. ಇದನ್ನು ನಾನು ಸವಾಲಾಗಿ ಸ್ವೀಕರಿಸಿ 16 ಬಜೆಟ್ ಮಂಡಿಸಿದೆ, 17ನೇ ಬಜೆಟನ್ನೂ ಮಂಡಿಸುತ್ತೇನೆ. ನನಗೆ ಅವಕಾಶ ಸಿಕ್ಕಿದ್ದರಿಂದಲೇ ಇಷ್ಟೆಲ್ಲಾ ಮಾಡಲು ಸಾಧ್ಯವಾಯಿತು. ಆದ್ದರಿಂದ ದಮನಿತ ಜಾತಿಗಳಿಗೆ ಅವಕಾಶ ಮುಖ್ಯ” ಎಂದು ಹೇಳಿದರು. 1991ರಲ್ಲಿ ಲೋಕಸಭೆಗೆ ಸ್ಪರ್ಧಿಸಿ ಸೋತಾಗ ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿ ಪರವಾಗಿ ಹಾವನೂರು ಅವರೇ ವಾದಿಸಿದ್ದರು. ಆ ಸಂದರ್ಭದಲ್ಲಿ ಅವರೊಂದಿಗೆ ಆತ್ಮೀಯತೆ ಬೆಳೆಯಿತು ಎಂದರು.
ಡಾ. ಬಿ.ಆರ್. ಅಂಬೇಡ್ಕರ್ ಅವರ ಮಾತಿನಂತೆ ಎಲ್ಲಿಯವರೆಗೂ ಜಾತಿ ವ್ಯವಸ್ಥೆ ಇರುತ್ತದೋ ಅಲ್ಲಿಯವರೆಗೂ ಮೀಸಲಾತಿ ಇರಬೇಕು. ನಮ್ಮಲ್ಲಿ ಶಿಕ್ಷಣ ಪ್ರಮಾಣ ಶೇ 68ರಷ್ಟಿದ್ದರೂ ಜಾತಿ ವ್ಯವಸ್ಥೆ ಇನ್ನಷ್ಟು ಗಟ್ಟಿಯಾಗುತ್ತಿದೆ. ಜಾತಿ ವ್ಯವಸ್ಥೆಯಿಂದ ಅನುಕೂಲ ಮಾಡಿಕೊಂಡವರು ಈ ವ್ಯವಸ್ಥೆಯನ್ನು ಗಟ್ಟಿಗೊಳಿಸುತ್ತಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ರಾಹುಲ್ ಗಾಂಧಿಯವರಿಗೆ ಸೈದ್ಧಾಂತಿಕ ಬದ್ಧತೆ ಇದ್ದಿದ್ದರಿಂದಲೇ ದೇಶಾದ್ಯಂತ ಜಾತಿ ಗಣತಿಗೆ ಒತ್ತಡ ಹೇರಿದರು. ಮೊನ್ನೆ ನನಗೂ “ಏನಾಯ್ತು ನಿಮ್ಮ ಗಣತಿ” ಎಂದು ಕೇಳಿದರು. ಅವರಿಗೆ ಸ್ಪಷ್ಟತೆ ಇರುವುದರಿಂದಲೇ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ ಜಾತಿ ಗಣತಿ ನಡೆಸುವಂತೆ ಮಾಡಿದ್ದಾರೆ. ನಮ್ಮ ಸರ್ಕಾರ ಕೂಡ ಈ ಗಣತಿಯನ್ನು ಒಪ್ಪಿಕೊಂಡು ಜಾರಿ ಮಾಡಲು ಬದ್ಧವಾಗಿದೆ ಎಂದು ಮುಖ್ಯಮಂತ್ರಿಗಳು ಪುನರುಚ್ಛರಿಸಿದರು.

