
ಬೆಂಗಳೂರು: ಸಿನಿಮಾ ಕೇವಲ ಮನರಂಜನೆಗೆ ಸೀಮಿತವಾಗದೆ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಶಕ್ತಿಯುತ ಮಾಧ್ಯಮವಾಗಬೇಕು. ಸಮಾಜದಲ್ಲಿ ಅಸಮಾನತೆ ಅಸ್ತಿತ್ವದಲ್ಲಿದ್ದು, ಮಹಿಳೆಯರು, ಹಿಂದುಳಿದವರು, ರೈತರು ಹಾಗೂ ದಲಿತ ಸಮುದಾಯಗಳು ಇಂದಿಗೂ ಅಸಮಾನತೆಯ ಸಂಕಷ್ಟವನ್ನು ಎದುರಿಸುತ್ತಿವೆ. ಈ ಸಮುದಾಯಗಳ ಬೆಳವಣಿಗೆ ಮತ್ತು ಬದಲಾವಣೆಗೆ ಆತ್ಮವಿಶ್ವಾಸ ತುಂಬುವ ರೀತಿಯಲ್ಲಿ ಸಿನಿಮಾ ಮಾಧ್ಯಮ ಕಾರ್ಯನಿರ್ವಹಿಸಿದಾಗ ಅದರ ಆಶಯ ಮತ್ತು ಉದ್ದೇಶ ಸಾರ್ಥಕವಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಆಯೋಜಿಸಿದ್ದ “17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ”ದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಡಾ. ರಾಜಕುಮಾರ್ ಅವರ ಸಿನಿಮಾಗಳಲ್ಲಿ ಸಮಾಜದ ಮೇಲಿನ ಜವಾಬ್ದಾರಿಯನ್ನು ಸ್ಪಷ್ಟವಾಗಿ ಕಾಣಬಹುದಾಗಿತ್ತು. ಅಂತಹ ಮೌಲ್ಯಯುತ ಚಿಂತನೆಗಳು ಇಂದಿನ ಸಿನಿಮಾಗಳಲ್ಲಿಯೂ ಪ್ರತಿಬಿಂಬಿಸಬೇಕೆಂದು ಅಭಿಪ್ರಾಯಪಟ್ಟರು.

ವಿಶ್ವದ ಇತರೆ ಸಮಾಜಗಳು, ವಿವಿಧ ದೇಶಗಳ ಜನಜೀವನ, ಸಂಸ್ಕೃತಿ ಹಾಗೂ ಸಮಾನತೆಯ ತತ್ವಗಳನ್ನು ಅರ್ಥ ಮಾಡಿಕೊಳ್ಳಲು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳು ಉತ್ತಮ ವೇದಿಕೆಯಾಗುತ್ತವೆ. ನಾವು ಪ್ರಥಮವಾಗಿ ಮತ್ತು ಅಂತಿಮವಾಗಿ ಮನುಷ್ಯರು ಎಂಬ ಅರಿವಿನೊಂದಿಗೆ ಪ್ರತಿಯೊಬ್ಬರನ್ನೂ ಪ್ರೀತಿಯಿಂದ ಕಾಣುವ ಮೂಲಕ ಸಮಸಮಾಜ ನಿರ್ಮಾಣಕ್ಕೆ ಮುಂದಾಗಬೇಕು. ಈ ನಿಟ್ಟಿನಲ್ಲಿ ಚಲನಚಿತ್ರಗಳು ಪ್ರಮುಖ ಮಾಧ್ಯಮವಾಗಿ ಕೆಲಸ ಮಾಡಬೇಕೆಂದು ಮುಖ್ಯಮಂತ್ರಿ ಹೇಳಿದರು.
ಇತರೆ ದೇಶಗಳಲ್ಲಿ ಆಚರಣೆಯಲ್ಲಿರುವ ಮಾನವೀಯ ಸಂಬಂಧಗಳು ಹಾಗೂ ಸಮಸಮಾಜದ ಪರಿಕಲ್ಪನೆಗಳನ್ನು ಅರ್ಥ ಮಾಡಿಕೊಳ್ಳಲು ಚಲನಚಿತ್ರಗಳು ಸಹಕಾರಿಯಾಗುತ್ತವೆ. ಸಮಾಜಮುಖಿ ಸಿನಿಮಾ ಮಾಡುವವರಿಗೆ ಹಾಗೂ ಚಿತ್ರೋದ್ಯಮದ ಅಭಿವೃದ್ಧಿಗೆ ಸರ್ಕಾರ ಸದಾ ಸಿದ್ಧವಿದ್ದು, ಅಗತ್ಯವಿರುವ ಎಲ್ಲಾ ರೀತಿಯ ನೆರವು ನೀಡಲು ಬದ್ಧವಾಗಿದೆ ಎಂದು ಅವರು ಭರವಸೆ ನೀಡಿದರು.
ಚಿತ್ರೋತ್ಸವದ ರಾಯಭಾರಿಯಾಗಿರುವ ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಕೇವಲ ಸಿನಿಮಾಗೆ ಸೀಮಿತರಾಗದೇ ಸಾಮಾಜಿಕ ಹೋರಾಟಗಳಲ್ಲಿ ಮುಂಚೂಣಿಯಲ್ಲಿರುವುದು ಅಭಿನಂದನೀಯ. ಶೋಷಿತರು, ರೈತರು, ದಲಿತರು, ಹಿಂದುಳಿದವರು ಹಾಗೂ ಸಂವಿಧಾನದ ಆಶಯಗಳ ಪರವಾಗಿ ಅವರು ನಡೆಸುತ್ತಿರುವ ಹೋರಾಟ ಅನುಕರಣೀಯವಾಗಿದೆ ಎಂದು ಮುಖ್ಯಮಂತ್ರಿ ಶ್ಲಾಘಿಸಿದರು.
ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಆಯೋಜಿಸಿದ್ದ ವರ್ಣರಂಜಿತ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು “17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ”ವನ್ನು ಅಧಿಕೃತವಾಗಿ ಉದ್ಘಾಟಿಸಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಶಾಸಕ ಅರ್ಶದ್ ರಿಜ್ವಾನ್ ಅವರು ಅಧ್ಯಕ್ಷತೆ ವಹಿಸಿದ್ದರು. ಸಭಾಪತಿ ಬಸವರಾಜ ಹೊರಟ್ಟಿ, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್, ಈ ಸಾಲಿನ BIFFes ರಾಯಭಾರಿ ಪ್ರಕಾಶ್ ರಾಜ್, ಖ್ಯಾತ ನಟಿ ರುಕ್ಮಿಣಿ ವಸಂತ್, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಂ. ನರಸಿಂಹಲು, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ವಾರ್ತಾ ಮತ್ತು ಪ್ರಚಾರ ಇಲಾಖೆ ಆಯುಕ್ತ ಹೇಮಂತ್ ನಿಂಬಾಳ್ಕರ್, ಚಲನಚಿತ್ರ ಅಕಾಡೆಮಿ ಸದಸ್ಯ ಚಿದಾನಂದ ಪಟೇಲ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

