

ಧಾರವಾಡ: ಕಲಾವಿದ ಶ್ರೀ ಬಿ. ಮಾರುತಿ ದತ್ತಿ ಅಂಗವಾಗಿ ಕರ್ನಾಟಕ ವಿದ್ಯಾವರ್ಧಕ ಸಂಘವು, ‘ಚಿತ್ತಾರ ಚೇತನ’ ಪ್ರಶಸ್ತಿ ಪ್ರದಾನ ಹಾಗೂ ಮೂರು ದಿನಗಳ ಚಿತ್ರಕಲಾ ಪ್ರದರ್ಶನವನ್ನು ಸೆಪ್ಟೆಂಬರ್ ೧೩ರಂದು ಸಂಜೆ ೬ ಗಂಟೆಗೆ ಸಂಘದ ಚಿತ್ರಕಲಾ ಪ್ರದರ್ಶನ ಸಭಾಭವನದಲ್ಲಿ ಹಮ್ಮಿಕೊಂಡಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ.ವಿ.ವ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ವಹಿಸುವರು. ತುಮಕೂರಿನ ಹಿರಿಯ ಕಲಾವಿದ
ಪ್ರಭು ಹರಸೂರು ಪ್ರಶಸ್ತಿ ಪ್ರದಾನ ಮಾಡುವರು. ಮುಖ್ಯ ಅತಿಥಿಗಳಾಗಿ ಧಾರವಾಡ ಆಕಾಶವಾಣಿ ನಿವೃತ್ತ ನಿರ್ದೇಶಕ ಸಿ. ಯು. ಬೆಳ್ಳಕ್ಕಿ ಹಾಗೂ ಮೈಸೂರಿನ ಹಿರಿಯ ಸಾಹಿತಿ ಡಾ. ಜಗದೀಶ ಕೊಪ್ಪ ಆಗಮಿಸುವರು.
ಈ ಬಾರಿ ಧಾರವಾಡ ಜಿಲ್ಲೆಯ ಮುಗದ ಗ್ರಾಮದ ಯುವ ಕಲಾವಿದ ಬಸವರಾಜ ತಳವಾರ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಹಿರಿಯ ಕಲಾವಿದ ಬಿ. ಮಾರುತಿ ಅವರು ಉಪಸ್ಥಿತರಿರುವರು.
ಚಿತ್ರಕಲೆಗೆ ತಮ್ಮ ಬದುಕು ಅರ್ಪಿಸಿದ ಬಿ. ಮಾರುತಿ ಚಿತ್ರಕಲೆಗಾಗಿಯೇ ತಮ್ಮ ಬದುಕನ್ನು ಅರ್ಪಿಸಿಕೊಂಡಿರುವ ಹಿರಿಯ ಕಲಾವಿದ ಬಿ. ಮಾರುತಿಯವರು, ಸಾಮಾನ್ಯ ರೈತ ಕುಟುಂಬದಿಂದ ಬಂದವರು. ಬಾಲ್ಯದಿಂದಲೂ ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿದ್ದ ಇವರು, ಹೊಸಪೇಟೆಯ ಪರಿಸರ, ಜನಪದ ಸಂಸ್ಕೃತಿ, ಐತಿಹಾಸಿಕ ಹಂಪೆಯ ಗತವೈಭವ ಹಾಗೂ ಪ್ರಕೃತಿಯ ಕಲ್ಲುಬಂಡೆಗಳಿಂದ ಸ್ಫೂರ್ತಿ ಪಡೆದವರು. ತಮ್ಮ ಸುದೀರ್ಘ ೫೧ ವರ್ಷಗಳ ಸಾಧನೆಯ ಮೂಲಕ ಕರ್ನಾಟಕದ ಪ್ರಮುಖ ಚಿತ್ರಕಲಾವಿದರಾಗಿ ಗುರುತಿಸಲ್ಪಟ್ಟಿದ್ದಾರೆ.
ದಶಕಗಳಿಂದ ಧಾರವಾಡವನ್ನು ಕಲಾ ಭೂಮಿಕೆಯನ್ನಾಗಿಸಿಕೊಂಡಿರುವ ಇವರು ತಮ್ಮ ‘ಚಿತ್ತಾರ ಕಲಾ ಬಳಗ’ ಸಂಸ್ಥೆಯೊಂದಿಗೆ ಹುಬ್ಬಳ್ಳಿ-ಧಾರವಾಡ ಮಹಾನಗರದ ಸೌಂದರ್ಯ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಚಿತ್ರಕಲಾ ಶಿಲ್ಪ ಶ್ರೀ ಡಿ.ವಿ. ಹಾಲಭಾವಿ ರಾಷ್ಟ್ರೀಯ ಸ್ಮಾರಕ ಟ್ರಸ್ಟಿನ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಯುವ ಕಲಾವಿದರಿಗೆ ನಿರಂತರವಾಗಿ ಪ್ರೋತ್ಸಾಹ ನೀಡುತ್ತಾ ಬಂದಿರುವ ಇವರಿಗೆ “ಕರ್ನಾಟಕ ಲಲಿತಕಲಾ ಅಕಾಡೆಮಿ ಗೌರವ ಪ್ರಶಸ್ತಿ” ಸೇರಿದಂತೆ ಅನೇಕ ಪ್ರಶಸ್ತಿಗಳು ಸಂದಿವೆ. ಬಿ. ಮಾರುತಿ ಅವರ ಜೀವನದ ಕುರಿತು ಸಾಕ್ಷ್ಯಚಿತ್ರಗಳು ಹಾಗೂ ವಿಶೇಷ ಸಂದರ್ಶನಗಳು ವಿವಿಧ ವಾಹಿನಿಗಳಲ್ಲಿ ಪ್ರಸಾರಗೊಂಡಿವೆ. ಇವರ ಮಗ ದೀಪಕ್ ಬಿ. ಅವರು ತಮ್ಮ ತಂದೆಯ ಹೆಸರಿನಲ್ಲಿ ಈ ದತ್ತಿ ಸ್ಥಾಪಿಸಿ, ಯುವ ಕಲಾವಿದರಿಗೆ ಪ್ರಶಸ್ತಿ ನೀಡಲು ನೆರವಾಗಿದ್ದಾರೆ.
‘ಚಿತ್ತಾರ ಚೇತನ’ ಪ್ರಶಸ್ತಿ ಪಡೆದವರು
- ಕು. ಕಿರಣ್ ಎ. ಶೇರಖಾನೆ, ಹುಬ್ಬಳ್ಳಿ (೨೦೧೮)
- ಶ್ರೀ ವಿಶ್ವೇಶ್ವರ ಎಂ. ಪಟಗಾರ, ಕುಮಟಾ (೨೦೧೯)
- ಕು. ಟಿ. ಎನ್. ಜಾಲಿಹಾಳ, ಕೊಪ್ಪಳ (೨೦೨೦)
- ಶ್ರೀಮತಿ ನಯನಾ ಬಾಬುರಾವ್, ಕಲಬುರಗಿ (೨೦೨೧)
- ಕು. ವಿನ್ಯಾಸ ಕಾಟೇನಹಳ್ಳಿ, ಧಾರವಾಡ (೨೦೨೨)
- ಕು. ಸೌಜನ್ಯಾ ಕರಡೋಣಿ, ಧಾರವಾಡ (೨೦೨೩)
- ಶ್ರೀ ಸಂತೋಷ ಪತ್ತಾರ, ಕೊಪ್ಪಳ (೨೦೨೪)
ಸಾಹಿತಿಗಳು, ಕಲಾವಿದರು, ಚಿಂತಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಕೋರಿದ್ದಾರೆ.

