

ಚಿಕ್ಕಮಗಳೂರು: ಅಜ್ಜಂಪುರ ತಾಲೂಕಿನ ತಡಗ ಗ್ರಾಮದಲ್ಲಿ ಅಸಹ್ಯಕರ ಘಟನೆಯೊಂದು ಬೆಳಕಿಗೆ ಬಂದಿದ್ದು, ತನ್ನ ಪ್ರಿಯಕರನೊಂದಿಗೆ ಸೇರಿಕೊಂಡು ಸೊಸೆಯೊಬ್ಬಳು ರಾಗಿ ಮುದ್ದೆಯಲ್ಲಿ ನಿದ್ರೆ ಮಾತ್ರೆ ಬೆರೆಸಿ ಅತ್ತೆಯನ್ನು ಕೊಲೆ ಮಾಡಿರುವ ಭೀಕರ ಘಟನೆ ಬಯಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸೊಸೆ ಅಶ್ವಿನಿ ಮತ್ತು ಆಕೆಯ ಪ್ರಿಯಕರ ಆಂಜನೇಯನನ್ನು ಬಂಧಿಸಿ, ಕಳವು ಮಾಡಿದ್ದ ಚಿನ್ನಾಭರಣಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಘಟನೆಯೇನು?
ಆಗಸ್ಟ್ 10ರಂದು ಅತ್ತೆ ದೇವಿರಮ್ಮ ಮೃತಪಟ್ಟಾಗ, ಕುಟುಂಬದವರು ಇದೊಂದು ಸಹಜ ಸಾವು ಎಂದು ತಿಳಿದು ಅಂತ್ಯಸಂಸ್ಕಾರ ನಡೆಸಿದ್ದರು. ಆದರೆ, ಕೆಲವೇ ದಿನಗಳಲ್ಲಿ ಮನೆಯಲ್ಲಿದ್ದ ₹20 ಲಕ್ಷ ಮೌಲ್ಯದ ಚಿನ್ನಾಭರಣಗಳು ಕಾಣೆಯಾಗಿದ್ದವು. ಗಾಬರಿಗೊಂಡ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದರು.
ಪೊಲೀಸರ ತನಿಖೆ ವೇಳೆ ಸೊಸೆ ಅಶ್ವಿನಿ ನೀಡಿದ ಹೇಳಿಕೆಗಳು ಗೊಂದಲಮಯವಾಗಿದ್ದವು. ಇದರಿಂದ ಅನುಮಾನಗೊಂಡ ಪೊಲೀಸರು ತೀವ್ರ ವಿಚಾರಣೆ ನಡೆಸಿದಾಗ, ಆಕೆ ಚಿನ್ನಾಭರಣ ಕಳವು ಮಾಡಿರುವುದನ್ನು ಒಪ್ಪಿಕೊಂಡಿದ್ದಾಳೆ.
ಕೊಲೆ ರಹಸ್ಯ ಬಯಲು
ಚಿನ್ನಾಭರಣ ಕಳವು ಪ್ರಕರಣದ ತನಿಖೆ ವೇಳೆ ಮತ್ತೊಂದು ಆಘಾತಕಾರಿ ಸತ್ಯಾಂಶ ಹೊರಬಿದ್ದಿದೆ. ತಾನು ಮತ್ತು ತನ್ನ ಪ್ರಿಯಕರ ಆಂಜನೇಯ ಸೇರಿ, ರಾಗಿ ಮುದ್ದೆಯಲ್ಲಿ ನಿದ್ರೆ ಮಾತ್ರೆ ಬೆರೆಸಿ ಅತ್ತೆ ದೇವಿರಮ್ಮ ಅವರನ್ನು ಕೊಲೆ ಮಾಡಿರುವುದಾಗಿ ಅಶ್ವಿನಿ ಬಾಯಿಬಿಟ್ಟಿದ್ದಾಳೆ. ಈ ವಿಚಾರ ತಿಳಿದ ಕುಟುಂಬಸ್ಥರು ಆಘಾತಕ್ಕೊಳಗಾಗಿದ್ದಾರೆ. ಅಶ್ವಿನಿ ಮನೆಯಲ್ಲಿದ್ದ ಸುಮಾರು ₹20 ಲಕ್ಷ ಮೌಲ್ಯದ 218 ಗ್ರಾಂ ಚಿನ್ನಾಭರಣಗಳನ್ನು ಕಳವು ಮಾಡಿ ಪ್ರಿಯಕರನಿಗೆ ನೀಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ಪೊಲೀಸರು ಕದ್ದ ಮಾಲು ಹಾಗೂ ₹16 ಲಕ್ಷ ಮೌಲ್ಯದ ಟಿಟಿ ವಾಹನವನ್ನು ವಶಕ್ಕೆ ಪಡೆದಿದ್ದಾರೆ.
ಪೊಲೀಸರು ದೇವಿರಮ್ಮ ಅವರ ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲು ಮುಂದಾಗಿದ್ದು, ಗುರುವಾರ (ಆಗಸ್ಟ್ 28) ಈ ಕಾರ್ಯ ನಡೆಸಲು ನಿರ್ಧರಿಸಿದ್ದಾರೆ. ಹಣ ಮತ್ತು ಆಸ್ತಿಗಾಗಿ ಹೆತ್ತವರನ್ನು ಕಡೆಗಣಿಸುವ ಈ ಜಗತ್ತಿನಲ್ಲಿ, ವರದಕ್ಷಿಣೆ ಮತ್ತು ದುರಾಸೆಗೆ ಸಂಬಂಧಗಳನ್ನು ಕಡಿದುಕೊಳ್ಳುವ ಈ ಕರಾಳ ಮನಸ್ಸುಗಳು ಸಮಾಜಕ್ಕೆ ದೊಡ್ಡ ಪಿಡುಗಾಗಿವೆ.

