
ಬಾಳೆಹೊನ್ನೂರು: ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನಲ್ಲಿರುವ ಪ್ರತಿಷ್ಠಿತ ಕೇಂದ್ರೀಯ ಕಾಫಿ ಸಂಶೋಧನಾ ಸಂಸ್ಥೆಯ (ಸಿಸಿಆರ್ಐ) ನೂರನೇ ವರ್ಷದ ಶತಮಾನೋತ್ಸವ ಉದ್ಘಾಟನಾ ಸಮಾರಂಭವು ಶನಿವಾರ ಅತ್ಯಂತ ವಿಜೃಂಭಣೆಯಿಂದ ಜರುಗಿತು. ಕಾಫಿ ಮಂಡಳಿ ಹಾಗೂ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ವತಿಯಿಂದ ಆಯೋಜಿಸಲಾಗಿದ್ದ ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಹಾಗೂ ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ ಜೋಶಿ ಅವರು ಭಾಗವಹಿಸಿ ಮಾತನಾಡಿದರು. 1925 ರಲ್ಲಿ ಪ್ರಾರಂಭವಾದ ಈ ಸಂಸ್ಥೆಯು ಕಳೆದ ಒಂದು ಶತಮಾನದಿಂದ ಕಾಫಿ ಬೆಳೆಯ ಸುಧಾರಿತ ತಳಿಗಳ ಅಭಿವೃದ್ಧಿ, ರೋಗ-ಕೀಟ ನಿಯಂತ್ರಣ ಹಾಗೂ ಮಣ್ಣಿನ ಆರೋಗ್ಯ ಸುಧಾರಣೆಯಲ್ಲಿ ನಿರಂತರ ಸಂಶೋಧನೆ ನಡೆಸುವ ಮೂಲಕ ಭಾರತೀಯ ಕಾಫಿ ಕ್ಷೇತ್ರಕ್ಕೆ ಭದ್ರಬುನಾದಿ ಹಾಕಿದೆ ಎಂದು ಅವರು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಜಾರಿಯಾಗಿರುವ ‘ಆತ್ಮನಿರ್ಭರ ಭಾರತ’ ಮತ್ತು ‘ಮೇಕ್ ಇನ್ ಇಂಡಿಯಾ’ ಪರಿಕಲ್ಪನೆಯಡಿ ಕೃಷಿ ಹಾಗೂ ತೋಟಗಾರಿಕಾ ಸಂಶೋಧನೆಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಭಾರತೀಯ ಕಾಫಿಗೆ ಹೊಸ ಬಲ ಮತ್ತು ವಿಶ್ವಾಸ ಲಭಿಸುತ್ತಿದ್ದು, ಕಾಫಿ ಮೇಲಿನ ಜಿಎಸ್ಟಿ ದರವನ್ನು ಶೇ. 18 ರಿಂದ ಶೇ. 5ಕ್ಕೆ ಇಳಿಸುವ ಮೂಲಕ ಕೇಂದ್ರ ಸರ್ಕಾರವು ಕಾಫಿ ಬೆಳೆಗಾರರಿಗೆ ದೊಡ್ಡ ಮಟ್ಟದ ನೆರವು ನೀಡಿದೆ. ಭಾರತದ ಕಾಫಿ ಬೆಳೆಗಾರರು ವಿದೇಶಿ ನೆಲದಲ್ಲಿ ಅತ್ಯುತ್ತಮ ಮಾರುಕಟ್ಟೆ ಪ್ರದರ್ಶಿಸುವ ಮೂಲಕ ಜಾಗತಿಕವಾಗಿ ದೇಶದ ಹೆಸರನ್ನು ಎತ್ತಿ ಹಿಡಿಯಬೇಕು ಎಂದು ಅವರು ಕರೆ ನೀಡಿದರು.
ಸಂಸ್ಥೆಯ ಸ್ಥಾಪನೆಯ ನೂರನೇ ವರ್ಷದ ಸಂಭ್ರಮವನ್ನು “7 ಗೋಲ್ಡನ್ ಸೀಡ್ಸ್” ಎಂಬ ವಿಶೇಷ ಪರಿಕಲ್ಪನೆಯಡಿ ಆಚರಿಸಲಾಗುತ್ತಿದ್ದು, ಈ ಸಂದರ್ಭದಲ್ಲಿ ರೋಗ ನಿರೋಧಕ ಶಕ್ತಿ ಹೊಂದಿರುವ ಮತ್ತು ಹೆಚ್ಚಿನ ಇಳುವರಿ ನೀಡುವ ಎರಡು ಹೊಸ ಕಾಫಿ ತಳಿಗಳನ್ನು ಲೋಕಾರ್ಪಣೆ ಮಾಡಲಾಯಿತು.
ಈ ಸಮಾರಂಭದಲ್ಲಿ ಕರ್ನಾಟಕ ಸರ್ಕಾರದ ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್, ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ. ಪ್ರಾಣೇಶ್, ಸಂಸದ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕರಾದ ಟಿ.ಡಿ. ರಾಜೇಗೌಡ, ಹೆಚ್.ಡಿ. ತಮ್ಮಯ್ಯ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಉಪಸ್ಥಿತರಿದ್ದರು. ಇವರೊಂದಿಗೆ ಭಾರತ ಸರ್ಕಾರದ ವಾಣಿಜ್ಯ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ನಿತಿನ್ ಕುಮಾರ್ ಯಾದವ್, ಬೆಂಗಳೂರು ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ. ದಿನೇಶ್ ಸೇರಿದಂತೆ ಕಾಫಿ ಮಂಡಳಿಯ ಸದಸ್ಯರು ಹಾಗೂ ನೂರಾರು ಕಾಫಿ ಬೆಳೆಗಾರರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು.

