
ಕಲಬುರಗಿ: ನಗರದ ಹೊರವಲಯದ ನಾಗನಹಳ್ಳಿ ರಿಂಗ್ ರಸ್ತೆಯಲ್ಲಿ ಮಂಗಳವಾರ ಬೆಳಗ್ಗೆ ಸಿಮೆಂಟ್ ತುಂಬಿದ ಟ್ಯಾಂಕರ್ ಹಾಗೂ ಶಾಲಾ ಬಸ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಆರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
ಘಟನೆ ಬೆಳಗ್ಗೆ 8.30ರ ಸುಮಾರಿಗೆ ನಡೆದಿದೆ.
ಗಾಯಗೊಂಡ ವಿದ್ಯಾರ್ಥಿಗಳನ್ನು ಆದಿತ್ಯ (12), ಪ್ರೀತಂ ನಿಂಗಣ್ಣ (6), ಸುಪ್ರೀತ್ (9), ಸಾಯಿನಾಥ (13), ದಕ್ಷಿತ್ (7) ಮತ್ತು ವಿಕ್ರಾಂತ (14) ಎಂದು ಗುರುತಿಸಲಾಗಿದೆ. ಗಾಯಗೊಂಡ ಮಕ್ಕಳನ್ನು ನಗರದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಆದಿತ್ಯನನ್ನು ಕಾಮರೆಡ್ಡಿ ಆಸ್ಪತ್ರೆಗೆ, ಪ್ರೀತಂನನ್ನು ಬಿಲ್ವಾ ಆಸ್ಪತ್ರೆಗೆ ಮತ್ತು ಉಳಿದ ನಾಲ್ವರು ಮಕ್ಕಳನ್ನು ಬಸವೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಚಂದ್ರಕಾಂತ ಪಾಟೀಲ್ ಪಬ್ಲಿಕ್ ಶಾಲೆಗೆ ಸೇರಿದ ಶಾಲಾ ಬಸ್ ರಾಮಮಂದಿರ ಕಡೆಯಿಂದ ನಾಗನಹಳ್ಳಿ ರಿಂಗ್ ರಸ್ತೆಯತ್ತ ಬರುತ್ತಿತ್ತು. ಇದೇ ವೇಳೆ, ವಾಡಿಯಿಂದ ಸಿಮೆಂಟ್ ತುಂಬಿಕೊಂಡು ಬರುತ್ತಿದ್ದ ಟ್ಯಾಂಕರ್ ಬಸ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಶಾಲಾ ಬಸ್‌ನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಗಾಜುಗಳು ಪುಡಿಪುಡಿಯಾಗಿವೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಕಲಬುರಗಿ ನಗರ ಸಂಚಾರ ಪೊಲೀಸ್ ಠಾಣೆ-2ರಲ್ಲಿ ಪ್ರಕರಣ ದಾಖಲಾಗುವ ಸಾಧ್ಯತೆ ಇದೆ. ಸದ್ಯ ಪೊಲೀಸರು ಮುಂದಿನ ಕ್ರಮ ಕೈಗೊಳ್ಳುತ್ತಿದ್ದಾರೆ.

