
ಬೆಂಗಳೂರ:ಕಲಬುರಗಿ ಅಧಃಪತನಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕೊಡುಗೆ ಹೆಚ್ಚಲ್ಲವೇ ಎಂದು ಶಾಸಕ ಸುನಿಲ್ ಕುಮಾರ್ ಮಾಡಿರುವ ಆರೋಪಕ್ಕೆ ತಿರುಗೇಟು ನೀಡುವ ಭರದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಎಡವಟ್ಟು ಹೇಳಿಕೆ ನೀಡುವ ಮೂಲಕ ಸುದ್ದಿಯಾಗಿದ್ದಾರೆ. ಬಿಜೆಪಿಯವರು ಕಲಬುರಗಿಗೆ ದನ ಕಾಯೋ ಮಂತ್ರಿ ಸ್ಥಾನ ಕೊಟ್ಟಿದ್ದೀರಿ ಅಷ್ಟೇ ಎಂದು ಹೇಳುವ ಮೂಲಕ ಪಶುಸಂಗೋಪನಾ ಇಲಾಖೆಯನ್ನು ದನ ಕಾಯೋಕೆ ಸೀಮಿತ ಎಂದು ಅಭಿಪ್ರಾಯಪಟ್ಟಿದ್ದಾರೆ.
ದನ ಕಾಯೋ ಮಂತ್ರಿ ಸ್ಥಾನ:
ಬಿಜೆಪಿ ಸರ್ಕಾರದಲ್ಲಿ ಕಲಬುರಗಿ, ಯಾದಗಿರಿ ಅಂತ ಬಂದಾಗ ಪಶು ಸಂಗೋಪನಾ ಇಲಾಖೆ ಫಿಕ್ಸ್ ಎಂದು ಹೇಳಿದ ಪ್ರಿಯಾಂಕ್ ಖರ್ಗೆ, “ಕಲಬುರಗಿಗೆ ದನ ಕಾಯೋ ಮಂತ್ರಿ ಸ್ಥಾನ ಕೊಟ್ಟಿದ್ದೀರ ಅಷ್ಟೇ” ಎಂದು ತಿರುಗೇಟು ನೀಡಿದ್ದಾರೆ. ಈ ಮೂಲಕ ಪಶು ಸಂಗೋಪನಾ ಇಲಾಖೆ ಕೇವಲ ದನ ಕಾಯುವ ಕೆಲಸಕ್ಕೆ ಸೀಮಿತ ಎಂಬ ಅರ್ಥದಲ್ಲಿ ಮಾತನಾಡಿದ್ದಾರೆ.
ಬಿಜೆಪಿಯವರಿಗೆ ಕಾಮನ್ ಸೆನ್ಸ್ ಇಲ್ಲ:
ಕಲಬುರಗಿ ಹಿಂದುಳಿದ ಜಿಲ್ಲೆ ಅಂತಲೇ 371 ವಿಧಿಯನ್ನು ತರಲಾಗಿದೆ. ಬಿಜೆಪಿಯವರು ಕಾಮನ್ ಸೆನ್ಸ್ ಇಲ್ಲದೆ ಮಾತನಾಡುತ್ತಾರೆ ಎಂದು ಪ್ರಿಯಾಂಕ್ ಖರ್ಗೆ ಟೀಕಿಸಿದರು. “ಕಲಬುರಗಿಗೆ ತಂದಿರುವ ಸೆಂಟ್ರಲ್ ಯೂನಿವರ್ಸಿಟಿಯನ್ನು ಆರ್ಎಸ್ಎಸ್ ಶಾಖೆ ಮಾಡಿಟ್ಟಿದ್ದಾರೆ. ಕಲಬುರಗಿಗೆ ಇದುವರೆಗೂ ಒಂದು ಸಚಿವ ಸ್ಥಾನ ಕೊಟ್ಟಿಲ್ಲ” ಎಂದು ಹರಿಹಾಯ್ದರು.
ಪಕ್ಷದ ಆದೇಶಕ್ಕೆ ಬದ್ಧ:
ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ, “ಎಲ್ಲವೂ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಪಕ್ಷ ಏನು ಹೇಳುತ್ತದೋ ಅದನ್ನೇ ನಾವು ಮಾಡುತ್ತೇವೆ. ಇದು ತ್ಯಾಗ ಅಲ್ಲ, ಫಾಲೋವಿಂಗ್ ದಿ ಆರ್ಡರ್ (ಆದೇಶ ಪಾಲಿಸುವುದು). ಪಕ್ಷದಿಂದ ನಾನೇ ಹೊರತು, ನನ್ನಿಂದ ಪಕ್ಷ ಅಲ್ಲ” ಎಂದರು. “ಬಿ ಫಾರಂ ಬೇಕಾದಾಗ ಪಕ್ಷ ಬೇಕು, ಚುನಾವಣೆ ಗೆಲ್ಲಬೇಕು ಅಂದಾಗ ಪಕ್ಷ ಬೇಕು, ಪಕ್ಷ ಹೇಳಿದಾಗ ಎಲ್ಲ ಕೆಲಸಕ್ಕೂ ನಾವು ಸಿದ್ಧರಿದ್ದೇವೆ. ನಾನೇ ಇರಬಹುದು, ಕೃಷ್ಣ ಭೈರೇಗೌಡ ಇರಬಹುದು, ದಿನೇಶ್ ಇರಬಹುದು. ಪಕ್ಷ ಸೂಚನೆ ಕೊಟ್ಟರೆ ಎಲ್ಲ ಕೆಲಸವನ್ನೂ ಮಾಡಬೇಕಾಗುತ್ತದೆ” ಎಂದು ಸಚಿವ ಸ್ಥಾನ ಬದಲಾವಣೆಯ ಸೂಚನೆ ನೀಡಿದರು. “ನಾಳೆ ಚಿತ್ತಾಪುರ ಬೇಡ ಉತ್ತರ ಕನ್ನಡದಿಂದ ಸ್ಪರ್ಧೆ ಮಾಡು ಎಂದರೆ ನಾನು ಅದಕ್ಕೂ ಸಿದ್ಧವಾಗಿರಬೇಕಾಗುತ್ತದೆ” ಎಂದು ಸಚಿವರು ನುಡಿದರು.
ಆರ್ಎಸ್ಎಸ್ಗೆ ಪ್ರಶ್ನೆ:
ಆರ್ಎಸ್ಎಸ್ ಬಗ್ಗೆ ಮಾತನಾಡಿದ ಅವರು, ಸರ್ದಾರ್ ಪಟೇಲ್ ಅವರಿಂದ ಹಿಡಿದು ಇಂದಿರಾ ಗಾಂಧಿ ಅವರ ತನಕ ದೊಡ್ಡ ಮನಸ್ಸು ಮಾಡಿ ಇವರು ಈ ತರ ಬೆಳೆದಿದ್ದಾರೆ. “ಎಲ್ಲ ಹಿಂದುಳಿದ ವರ್ಗದವರು, ದಲಿತರನ್ನು ಕಾಲಾಳುಗಳ ಕೆಲಸ ಮಾಡಲು ಇಟ್ಟುಕೊಂಡಿದ್ದಾರೆ. ಆರ್ಎಸ್ಎಸ್ನಲ್ಲಿ ಜಾತಿ ಅನ್ನೋದು ಇಲ್ಲ, ಎಲ್ಲರನ್ನೂ ನಾವು ಕರೆದುಕೊಳ್ಳುತ್ತೇವೆ ಅಂತ ಮಹಾನುಭಾವ ಹೇಳುತ್ತಿದ್ದ. ಆದರೆ ಕೇವಲ ಆಳಾಗಿ ಕರೆದುಕೊಳ್ಳುತ್ತಾರೆ” ಎಂದರು. “ಸರಸಂಘಚಾಲಕರನ್ನಾಗಿ ಒಬ್ಬ ಮಹಿಳೆ ಅಥವಾ ದಲಿತರಿಗೆ ಮಾಡಿ, ಅದು ಯಾಕೆ ಒಂದೇ ಒಂದು ಕಮ್ಯುನಿಟಿಗೆ ಸೀಮಿತ?” ಎಂದು ಪ್ರಶ್ನಿಸಿದರು.
ವಿಧಾನಸಭೆಯಲ್ಲಿನ ಘಟನೆ ನೆನಪು:
“ಮುಸ್ಲಿಮರು ಮತ್ತು ದಲಿತರು ಒಂದು ದಿನ ಆರ್ಎಸ್ಎಸ್ ಒಪ್ಪಬೇಕಾಗುತ್ತೆ ಅಂತ ಕಾಗೇರಿ ಸಾಹೇಬ್ರು ಸ್ಪೀಕರ್ ಇದ್ದಾಗ ನನಗೆ ಹೇಳಿದ್ರು. ಮೋಹನ್ ಭಾಗವತರನ್ನ ಇಳಿಸಿ ದಲಿತರಿಗೆ ಮಾಡಿ ಅಂತ ನಾನು ಹೇಳಿದೆ. ಆಗ ಕೋಲಾಹಲ ಆಯ್ತು. ಅಸೆಂಬ್ಲಿ ಮುಂದಕ್ಕೆ ಹಾಕಿದ್ದರು” ಎಂದು ಪ್ರಿಯಾಂಕ್ ಖರ್ಗೆ ನೆನಪಿಸಿಕೊಂಡರು.

