
ಬೆಂಗಳೂರು: ರಾಜ್ಯ ಸರ್ಕಾರ ಕೈಗೊಂಡಿರುವ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಗಣತಿ (ಜಾತಿಗಣತಿ) ಕಾರ್ಯವು ವಿಪಕ್ಷಗಳಿಂದ ವಿರೋಧ ಮತ್ತು ಶಿಕ್ಷಕರಿಂದ ತಾಂತ್ರಿಕ ಸಮಸ್ಯೆಗಳ ಕಾರಣಕ್ಕೆ ನಿಧಾನವಾಗಿದ್ದ ಹಿನ್ನೆಲೆಯಲ್ಲಿ, ಸರ್ಕಾರವು ಗಣತಿದಾರರಾದ ಶಿಕ್ಷಕರಿಗೆ ಗೌರವ ಸಂಭಾವನೆ ನಿಗದಿಪಡಿಸಿ ಇಂದು (ಸೆ. 26) ಹಣ ಬಿಡುಗಡೆ ಮಾಡಿದೆ.
1,20,728 ಸಮೀಕ್ಷಾದಾರರಿಗೆ ತಲಾ ಐದು ಸಾವಿರ ರೂಪಾಯಿನಂತೆ ಸರ್ಕಾರ ರಿಲೀಸ್ ಮಾಡಿದೆ. ಜೊತೆಗೆ, ಪ್ರತಿ ಮನೆ ಸಮೀಕ್ಷೆಗೆ ₹100 ರಂತೆ ನಿಗದಿಪಡಿಸಿ, ಹಿಂದುಳಿದ ಆಯೋಗವು ಈ ಹಣವನ್ನು ಎಲ್ಲಾ ಜಿಲ್ಲಾಧಿಕಾರಿಗಳ ಖಾತೆಗೆ ವರ್ಗಾವಣೆ ಮಾಡಿದೆ. ಇದರಿಂದ ಸಮೀಕ್ಷೆ ಎಂದರೆ ಸುಸ್ತಾಗಿದ್ದ ಶಿಕ್ಷಕರಿಗೆ ಕೊಂಚ ನೆಮ್ಮದಿ ಸಿಕ್ಕಂತಾಗಿದೆ.
ಅ. 7ರೊಳಗೆ ಜಾತಿಗಣತಿ ಕಾರ್ಯ ಪೂರ್ಣಗೊಳಿಸಿ: ಸಿಎಂ ಸಿದ್ದರಾಮಯ್ಯ ಸೂಚನೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಸೆ. 26) ಬೆಳಗ್ಗೆ ‘ಕೃಷ್ಣಾ’ದಲ್ಲಿ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಜಾತಿಗಣತಿ ಪ್ರಗತಿ ಕುರಿತು ಮಾಹಿತಿ ಪಡೆದು, ಅಕ್ಟೋಬರ್ 7 ರೊಳಗೆ ಗಣತಿ ಕಾರ್ಯವನ್ನು ಪೂರ್ಣಗೊಳಿಸಲು ಸ್ಪಷ್ಟ ಸೂಚನೆ ನೀಡಿದರು.
“ರಾಜ್ಯಾದ್ಯಂತ ಸಮೀಕ್ಷೆ ಕಾರ್ಯ ಆರಂಭವಾಗಿದ್ದು, ಆರಂಭದಲ್ಲಿ ಕೆಲವು ತಾಂತ್ರಿಕ ತೊಂದರೆಗಳಿದ್ದವು. ಈಗ ಎಲ್ಲ ಸಮಸ್ಯೆ ಬಗೆಹರಿಸಲಾಗಿದೆ. ಇಂದಿನಿಂದ ಸಮೀಕ್ಷೆ ಕಾರ್ಯವನ್ನು ಚುರುಕುಗೊಳಿಸಲು ಕ್ರಮ ಕೈಗೊಳ್ಳಿ,” ಎಂದು ಸಿಎಂ ಸೂಚಿಸಿದರು.
ಪ್ರಗತಿ ವಿವರ: ರಾಜ್ಯದಲ್ಲಿ ಒಟ್ಟು 1,43,81,702 ಕುಟುಂಬಗಳ ಸಮೀಕ್ಷೆ ನಡೆಸಬೇಕಾಗಿದ್ದು, ಇದುವರೆಗೆ 2,76,016 ಕುಟುಂಬಗಳ ಸಮೀಕ್ಷೆ ಪೂರ್ಣಗೊಂಡಿದೆ. ಸಮೀಕ್ಷೆ ಕಾರ್ಯಕ್ಕೆ 1,20,728 ಗಣತಿದಾರರನ್ನು ನಿಯೋಜಿಸಲಾಗಿದೆ.
ಜಿಲ್ಲಾಧಿಕಾರಿಗಳಿಗೆ ಸಿಎಂ ನಿರ್ದೇಶನಗಳು:
ಸಮೀಕ್ಷೆಗೆ ಯಾವುದೇ ತಾಂತ್ರಿಕ ತೊಂದರೆಗಳು ಉಂಟಾಗದಂತೆ ಎಚ್ಚರಿಕೆ ವಹಿಸಿ, ತಕ್ಷಣ ಅದನ್ನು ಬಗೆಹರಿಸಲು ಕ್ರಮ ಕೈಗೊಳ್ಳಬೇಕು.
ಸಮೀಕ್ಷೆ ನಿಧಾನಗತಿಯಲ್ಲಿರುವ ಜಿಲ್ಲೆಗಳಲ್ಲಿ ಕಾರ್ಯ ಚುರುಕುಗೊಳಿಸಿ.
ಅಗತ್ಯವಿರುವ ಕಡೆ ಅನುದಾನಿತ ಶಾಲೆಗಳ ಶಿಕ್ಷಕರ ಸೇವೆಯನ್ನು ಬಳಸಿಕೊಳ್ಳಬೇಕು.
ಸಮೀಕ್ಷೆ ಮೇಲ್ವಿಚಾರಣೆಗೆ ಪ್ರತಿ ತಾಲೂಕಿಗೆ ಜಿಲ್ಲಾ ಮಟ್ಟದ ಅಧಿಕಾರಿಯನ್ನು ನೋಡಲ್ ಅಧಿಕಾರಿಯಾಗಿ ನೇಮಕ ಮಾಡಿ.
ಪ್ರತಿ ದಿನ ಜಿಲ್ಲಾವಾರು ಕನಿಷ್ಠ ಶೇಕಡಾ 10ರಷ್ಟು ಸಮೀಕ್ಷೆ ಗುರಿ ಸಾಧಿಸಬೇಕು.
ಸಮೀಕ್ಷೆ ಕಾರ್ಯದಲ್ಲಿ ನಿರ್ಲಕ್ಷ್ಯ ವಹಿಸುವ ಗಣತಿದಾರರ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ಸಿಎಂ ತಾಕೀತು ಮಾಡಿದರು.
ಪ್ರಾದೇಶಿಕ ಆಯುಕ್ತರು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಸಹ ಪ್ರಗತಿಯ ಪರಿಶೀಲನೆ ನಡೆಸುವಂತೆ ಸಿಎಂ ಸೂಚಿಸಿದರು.

