ಬ್ಯಾಂಕರ್‌ಗಳಿಗೆ ಸಹಾಯಧನ ವಿತರಣೆಗೆ ಚುರುಕು ನೀಡುವಂತೆ ಸಿಇಒ ಭುವನೇಶ್ವರ ಪಾಟೀಲ ಸೂಚನೆ

Spread the love

ಧಾರವಾಡ: ಸಕಾಲಕ್ಕೆ ಸಾಲ ಮತ್ತು ಸಹಾಯಧನ ವಿತರಣೆ ಮಾಡದ ಬ್ಯಾಂಕುಗಳ ವಿರುದ್ಧ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಭುವನೇಶ ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದರು. ಸೆಪ್ಟೆಂಬರ್ 22ರಂದು ನಡೆದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಮಿತಿ (ಡಿಎಲ್‌ಆರ್‌ಸಿ) ಸಭೆಯಲ್ಲಿ ಬ್ಯಾಂಕರ್‌ಗಳಿಗೆ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ವಿಳಂಬ ಮಾಡದೆ ಶೀಘ್ರವಾಗಿ ಅನುಷ್ಠಾನಗೊಳಿಸುವಂತೆ ಖಡಕ್ ಸೂಚನೆ ನೀಡಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, “ಸಾಮಾಜಿಕ ಭದ್ರತಾ ಯೋಜನೆಗಳಾದ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (ಪಿಎಂಜೆಜೆಬಿವೈ) ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (ಪಿಎಂಎಸ್‌ಬಿವೈ)ಗಳಲ್ಲಿ ಜಿಲ್ಲೆಯ ಎಲ್ಲಾ ಅರ್ಹ ಜನರನ್ನು ತಕ್ಷಣ ಸೇರ್ಪಡೆಗೊಳಿಸಬೇಕು. ಈ ಬಗ್ಗೆ ಯಾವುದೇ ಕಾರಣಕ್ಕೂ ವಿಳಂಬ ಮಾಡಬೇಡಿ” ಎಂದು ಒತ್ತಿ ಹೇಳಿದರು. ಅಲ್ಲದೆ, ಕಡಿಮೆ ಸಾಲ-ಠೇವಣಿ ಅನುಪಾತ (ಸಿಡಿ ಅನುಪಾತ) ಹೊಂದಿರುವ ಬ್ಯಾಂಕುಗಳು ಆದ್ಯತಾ ವಲಯಕ್ಕೆ ಹೆಚ್ಚಿನ ಸಾಲ ವಿತರಣೆ ಮಾಡಬೇಕು ಎಂದು ಹೇಳಿದರು.

ಸಭೆಯಲ್ಲಿ ಲೀಡ್ ಬ್ಯಾಂಕ್‌ನ ಜಿಲ್ಲಾ ಮುಖ್ಯ ವ್ಯವಸ್ಥಾಪಕ ಬಸವರಾಜ ಗಡಾದವರ, ಬ್ಯಾಂಕ್ ಆಫ್ ಬರೋಡಾದ ಉಪ-ಪ್ರಾದೇಶಿಕ ವ್ಯವಸ್ಥಾಪಕ ಅಮರೇಶ್ ಗೌಡ, ಆರ್.ಬಿ.ಐ. ಎಜಿಎಂ ಬುಬುಲ್ ಬೊರ್ಲೋಯಿ, ನಬಾರ್ಡ್ ಎಜಿಎಂ ಮಯೂರ್ ಕಾಂಬಳೆ, ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ಪ್ರಾದೇಶಿಕ ವ್ಯವಸ್ಥಾಪಕ ಚಂದ್ರಶೇಖರ ಪಾಟೀಲ್ ಹಾಗೂ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ಸೇರಿದಂತೆ ಹಲವು ಬ್ಯಾಂಕ್ ಮತ್ತು ಸರ್ಕಾರಿ ಅಧಿಕಾರಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *