
ಕಲಬುರ್ಗಿ: ಸಾಲವಾಗಿ ನೀಡಿದ್ದ ಹಣವನ್ನು ವಾಪಸ್ ಕೇಳಿದ್ದಕ್ಕೆ ಶಾಲಾ ಶಿಕ್ಷಕಿಯೊಬ್ಬರನ್ನು ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿ, ಸಾಕ್ಷಿ ನಾಶಕ್ಕಾಗಿ ಶವವನ್ನು ಸುಟ್ಟು ಹಾಕಿದ್ದ ಭೀಕರ ಘಟನೆಗೆ ಸಂಬಂಧಿಸಿದಂತೆ ಕಮಲಾಪುರ ಪೊಲೀಸರು ಕೇವಲ 24 ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚಿಂಚೋಳಿ ತಾಲೂಕಿನ ಭುಂಯರ್ ಗ್ರಾಮದ ನಿವಾಸಿ ಅಮರ್ ಕುಡ್ಡಳ್ಳಿ ಬಂಧಿತ ಆರೋಪಿಯಾಗಿದ್ದು, ಜ್ಯೋತಿ ಕಪಾಳೆ ಎಂಬುವವರೇ ಕೊಲೆಯಾದ ದುರ್ದೈವಿ ಶಿಕ್ಷಕಿ.
ಪೊಲೀಸ್ ಮೂಲಗಳ ಪ್ರಕಾರ, ಅಮರ್ ಮತ್ತು ಜ್ಯೋತಿ ಮೊದಲಿನಿಂದಲೂ ಪರಿಚಿತರಾಗಿದ್ದು ಸ್ನೇಹಿತರಾಗಿದ್ದರು. ಈ ಸ್ನೇಹದ ಹಿನ್ನೆಲೆಯಲ್ಲಿ ಅಮರ್ ತನ್ನ ಕಷ್ಟದ ಸಮಯದಲ್ಲಿ ಜ್ಯೋತಿಯವರಿಂದ ಲಕ್ಷಾಂತರ ರೂಪಾಯಿ ಸಾಲ ಪಡೆದು ನಂದಿನಿ ಪಾರ್ಲರ್ ಆರಂಭಿಸಿದ್ದನು. ಇತ್ತೀಚೆಗೆ ಜ್ಯೋತಿಯವರು ತಾನು ನೀಡಿದ್ದ ಹಣವನ್ನು ವಾಪಸ್ ನೀಡುವಂತೆ ಅಮರ್‌ನನ್ನು ಒತ್ತಾಯಿಸಿದ್ದರು. ಹಣ ಹಿಂದಿರುಗಿಸಲು ಮನಸ್ಸಿಲ್ಲದ ಆರೋಪಿಯು ಜ್ಯೋತಿಯವರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದನು.
ಐದು ದಿನಗಳ ಹಿಂದೆ “ಹಣ ಕೊಡುತ್ತೇನೆ” ಎಂದು ನಂಬಿಸಿ ಜ್ಯೋತಿಯವರನ್ನು ತನ್ನ ಕಾರಿನಲ್ಲಿ ಕರೆದೊಯ್ದ ಆರೋಪಿ, ಮಧ್ಯರಾತ್ರಿ ಒಂದು ಗಂಟೆಯ ಸುಮಾರಿಗೆ ಹೆದ್ದಾರಿಯಲ್ಲಿ ಕಾರನ್ನು ನಿಲ್ಲಿಸಿ ಚಾಕುವಿನಿಂದ ಇರಿದು ಅವರನ್ನು ಹತ್ಯೆ ಮಾಡಿದ್ದಾನೆ. ತದನಂತರ ಕೃತ್ಯದ ಸಾಕ್ಷ್ಯವನ್ನು ನಾಶಪಡಿಸುವ ಉದ್ದೇಶದಿಂದ ಕಲಮೂಡ ಬಳಿ ಮೃತದೇಹಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದನು. ಶನಿವಾರ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಶವದ ತನಿಖೆ ಕೈಗೆತ್ತಿಕೊಂಡ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಹೆಡೆಮುರಿ ಕಟ್ಟಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡೂರು ಶ್ರೀನಿವಾಸಲು ಹಾಗೂ ಹೆಚ್ಚುವರಿ ಎಸ್ಪಿ ಮಹೇಶ್ ಮೇಘಣ್ಣನವರ್ ಮಾರ್ಗದರ್ಶನದಲ್ಲಿ, ಸಿಪಿಐ ಶಿವಶಂಕರ್ ಸಾಹು ಮತ್ತು ಪಿಎಸ್ಐ ಸುಖಾನಂದ ಸಿಂಗೆ ನೇತೃತ್ವದ ತಂಡವು ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ. ತಂಡದಲ್ಲಿ ಸಿಬ್ಬಂದಿಗಳಾದ ಉಪೇಂದ್ರ, ಹುಸೇನ್ ಪಟೇಲ್, ರಾಕೇಶ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು. ಬಂಧಿತ ಆರೋಪಿಯಿಂದ ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದೆ.

