
ಕೊಪ್ಪಳ:ಜಿಲ್ಲೆಯ ಗಂಗಾವತಿ ನಗರದಲ್ಲಿ ಬಿಜೆಪಿ ಯುವ ಮೋರ್ಚಾ ಮಂಡಲ ಅಧ್ಯಕ್ಷ ವೆಂಕಟೇಶ್ ಕುರುಬರ ಅವರ ಭೀಕರ ಕೊಲೆಯಿಂದ ಇಡೀ ನಗರವೇ ಬೆಚ್ಚಿಬಿದ್ದಿದೆ. ತಡರಾತ್ರಿ ಸಿನಿಮೀಯ ರೀತಿಯಲ್ಲಿ ದಾಳಿ ನಡೆಸಿದ ದುಷ್ಕರ್ಮಿಗಳು, ಮಾರಕಾಸ್ತ್ರಗಳಿಂದ ಕೊಚ್ಚಿ ವೆಂಕಟೇಶ್ ಅವರನ್ನು ಹತ್ಯೆ ಮಾಡಿದ್ದಾರೆ. ಈ ಸಂಬಂಧ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ಹಳೆಯ ದ್ವೇಷವೇ ಕೊಲೆಗೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಸಿನಿಮೀಯ ರೀತಿಯಲ್ಲಿ ಹತ್ಯೆ: 4 ಆರೋಪಿಗಳ ಬಂಧನ
ಗಂಗಾವತಿ ಮಂಡಲದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ವೆಂಕಟೇಶ್ ಕುರುಬರ ಅವರನ್ನು ನಿನ್ನೆ ತಡರಾತ್ರಿ ಸುಮಾರು 2 ಗಂಟೆ ಸುಮಾರಿಗೆ ದುಷ್ಕರ್ಮಿಗಳ ತಂಡ ಹತ್ಯೆ ಮಾಡಿದೆ. ರೈಚೂರು ರಸ್ತೆಯ ಲೀಲಾವತಿ ಆಸ್ಪತ್ರೆ ಮುಂಭಾಗದಲ್ಲಿ ವೆಂಕಟೇಶ್ ಅವರು ಸ್ನೇಹಿತರೊಂದಿಗೆ ಬೈಕ್‌ನಲ್ಲಿ ಬರುತ್ತಿದ್ದಾಗ, ಹಿಂದಿನಿಂದ ಬಂದ ಕಾರೊಂದು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಕಾರಿನಿಂದ ಇಳಿದ ದುಷ್ಕರ್ಮಿಗಳು, ವೆಂಕಟೇಶ್ ಅವರ ಮೇಲೆ ಮಚ್ಚುಗಳಿಂದ ಮನಸೋ ಇಚ್ಛೆ ಕೊಚ್ಚಿ ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಈ ಕೃತ್ಯ ಎಸಗಿದ ನಾಲ್ವರು ಯುವ ಆರೋಪಿಗಳಾದ ಭೀಮ್ ಅಲಿಯಾಸ್ ಭರತ್, ಸಲೀಂ, ವಿಜಯ್ ಮತ್ತು ಧನರಾಜ್ ಅವರು ಹತ್ಯೆ ಮಾಡಿದ ಬಳಿಕ ಪಕ್ಕದ ಬಳ್ಳಾರಿ ಜಿಲ್ಲೆಯ ಕಂಪ್ಲಿ ಪೊಲೀಸ್ ಠಾಣೆಗೆ ಶರಣಾಗಿದ್ದಾರೆ. ಈ ನಾಲ್ವರ ವಯಸ್ಸು 25 ದಾಟಿಲ್ಲ ಎಂಬುದು ಮತ್ತೊಂದು ಆಘಾತಕಾರಿ ಸಂಗತಿ. ಗಂಗಾವತಿ ಪೊಲೀಸರು ಶರಣಾದ ಆರೋಪಿಗಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಆದರೆ, ಈ ಹತ್ಯೆಯ ಪ್ರಮುಖ ಆರೋಪಿಗಳಾದ ರವಿ ಹಾಗೂ ಕಾರ್ತಿಕ ಸೇರಿ ಇನ್ನು ಕೆಲವರು ತಲೆಮರೆಸಿಕೊಂಡಿದ್ದು, ಪೊಲೀಸರು ಅವರಿಗಾಗಿ ಜಾಲ ಬೀಸಿದ್ದಾರೆ. ಬಂಧಿತರ ವಿಚಾರಣೆ ಬಳಿಕ ಹತ್ಯೆಯ ಹಿಂದಿನ ಸಂಪೂರ್ಣ ಸತ್ಯ ಮತ್ತು ಇತರೆ ಕೆಲವರ ಪಾತ್ರಗಳು ಬಯಲಾಗುವ ಸಾಧ್ಯತೆ ಇದೆ.
ಹಳೆಯ ದ್ವೇಷವೇ ಕೊಲೆಗೆ ಮೂಲ ಕಾರಣ
ಯುವ ನಾಯಕನ ಬರ್ಬರ ಕೊಲೆಗೆ ಹಳೆಯ ದ್ವೇಷವೇ ಮುಖ್ಯ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ. 2023ರಲ್ಲಿ ಗಂಗಾವತಿ ನಗರದಲ್ಲಿ ಇಸ್ಪೀಟ್ ವಿಚಾರಕ್ಕೆ ಸಂಬಂಧಿಸಿದಂತೆ ಒಂದು ಗ್ಯಾಂಗ್, ವೆಂಕಟೇಶ್‌ಗೆ ಬೇಕಾಗಿದ್ದ ಮಾರುತಿ ಎಂಬ ಯುವಕನ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆಗೆ ಪ್ರಯತ್ನಿಸಿತ್ತು. ಮಾರುತಿ ಅದೃಷ್ಟವಶಾತ್ ಬದುಕುಳಿದಿದ್ದರೂ, ಮೂರು ತಿಂಗಳ ಹಿಂದೆ ಸಾವನ್ನಪ್ಪಿದ್ದ.
ಈ ಕೊಲೆಯ ಸಂಚಿನ ಹಿಂದಿರುವುದು ಪ್ರಮುಖ ಆರೋಪಿ ರವಿ ಗ್ಯಾಂಗ್. ಅಚ್ಚರಿ ಎಂದರೆ, ಇಂದು ಹತ್ಯೆಯ ಪ್ರಮುಖ ಆರೋಪಿಯಾಗಿರುವ ರವಿ, ಒಂದು ಕಾಲದಲ್ಲಿ ವೆಂಕಟೇಶ್ ಅವರ ಶಿಷ್ಯನಾಗಿದ್ದ. ಅಲ್ಲದೆ, ಇಬ್ಬರೂ ಒಂದೇ ಸಮುದಾಯಕ್ಕೆ ಸೇರಿದವರು. 2023ರಲ್ಲಿ ಮಾರುತಿ ಹತ್ಯೆ ಯತ್ನ ನಡೆದಾಗ ವೆಂಕಟೇಶ್ ಅವರು ಮಾರುತಿಯ ಬೆನ್ನಿಗೆ ನಿಂತು, ಕೃತ್ಯ ಎಸಗಿದವರ ಬಂಧನವಾಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಈ ಘಟನೆಯಿಂದ ಆಕ್ರೋಶಗೊಂಡಿದ್ದ ರವಿ ಮತ್ತು ಆತನ ಸಹಚರರು, ಕಳೆದ ಎರಡು ವರ್ಷಗಳಿಂದ ಸೇಡು ತೀರಿಸಿಕೊಳ್ಳಲು ಹೊಂಚು ಹಾಕುತ್ತಿದ್ದರು. ಅದೇ ಹಳೆಯ ದ್ವೇಷವನ್ನು ಇಟ್ಟುಕೊಂಡು, ನಿನ್ನೆ ರಾತ್ರಿ ಪಕ್ಕಾ ಯೋಜನೆ ಮಾಡಿ ವೆಂಕಟೇಶ್ ಕುರುಬರ ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ ಎಂದು ತನಿಖಾ ಮೂಲಗಳು ತಿಳಿಸಿವೆ. ಗಂಗಾವತಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

