ಸರಕಾರಿ ಕರ್ತವ್ಯ ನಿರತ ಮಹಿಳಾ ಪಿಎಸ್‌ಐ ಮೇಲೆ ಭೀಕರ ಹಲ್ಲೆ; ಕೊಲೆ ಯತ್ನ, ಕಚ್ಚಿ ಗಾಯ: ಎಫ್‌ಐಆರ್ ದಾಖಲು, ಆರೋಪಿ ಬಂಧನ

Spread the love

ನವಲಗುಂದ: ಪೊಲೀಸ್ ಇಲಾಖೆಯ ಕರ್ತವ್ಯ ನಿರತ ಮಹಿಳಾ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ (ಪಿಎಸ್‌ಐ) ಮೇಲೆ ವ್ಯಕ್ತಿಯೊಬ್ಬ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಅ 19, ರಂದು ನವಲಗುಂದದಲ್ಲಿ ನಡೆದಿದೆ. ಆರೋಪಿಯು ಪಿಎಸ್‌ಐ ಅವರ ಹಣೆಗೆ ಬೈಕ್ ಕೀಲಿಯಿಂದ ಹೊಡೆದು, ಕುತ್ತಿಗೆ ಹಿಸುಕಿ ಕೊಲೆಗೆ ಯತ್ನಿಸಿ, ಬಲಗಾಲಿಗೆ ಕಚ್ಚಿ ಗಂಭೀರ ಗಾಯ ಮಾಡಿದ್ದಾನೆ ಎಂದು ಎಫ್‌ಐಆರ್ (ಪ್ರಥಮ ಮಾಹಿತಿ ವರದಿ) ನಲ್ಲಿ ಉಲ್ಲೇಖಿಸಲಾಗಿದೆ.

ಎಫ್‌ಐಆರ್‌ನಿಂದ ತಿಳಿದು ಬಂದ ಘಟನೆ ವಿವರ:
ಅ: 19, ರಂದು ಮಧ್ಯಾಹ್ನ 02:45 ಗಂಟೆ ಸುಮಾರಿಗೆ ನವಲಗುಂದ ಬಸ್ ನಿಲ್ದಾಣದ ಬಳಿಯ ರಸ್ತೆಯ ಮೇಲೆ, ಆರ್.ಎಸ್.ಎಸ್. ಪಥಸಂಚಲನದ ಭದ್ರತಾ ಕರ್ತವ್ಯಕ್ಕೆ ನೇಮಕವಾಗಿದ್ದ ಪಿಎಸ್‌ಐ ಅವರು ಸಿಬ್ಬಂದಿ ಜೊತೆ ಜನರನ್ನು ಪರಿಶೀಲಿಸುವ ಕೆಲಸದಲ್ಲಿ ನಿರತರಾಗಿದ್ದರು.

ಈ ವೇಳೆ, ದ್ಯಾಮನಗೌಡ ತಂದೆ ಶಿವನಗೌಡ ಕುಲಕರ್ಣಿ (31), ಸಾ: ಗುಡಿಸಾಗರ, ತಾ: ನವಲಗುಂದ ಎಂಬ ಆರೋಪಿಯು ತನ್ನ ಮೋಟಾರ್ ಸೈಕಲ್ (KA-25-HF-5229) ನಲ್ಲಿ ಬಂದಿದ್ದಾನೆ.

ದ್ವೇಷದಿಂದ ಹಲ್ಲೆ:
ಆರೋಪಿಯ ಸಹೋದರಿಯು ಹಿಂದೆ ನವಲಗುಂದ ಪೊಲೀಸ್ ಠಾಣೆಯಲ್ಲಿ ನೀಡಿದ್ದ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರ ಸಿಟ್ಟಿನಿಂದ ದ್ಯಾಮನಗೌಡನು ಪೊಲೀಸರ ಮೇಲೆ ದ್ವೇಷ ಸಾಧಿಸಿದ್ದನು.

ಹಲ್ಲೆಯ ಸ್ವರೂಪ – ಎಫ್‌ಐಆರ್ ಪ್ರಕಾರ:
ಪೊಲೀಸರ ಮೇಲಿನ ದ್ವೇಷದಿಂದ ಪ್ರೇರಿತನಾದ ಆರೋಪಿಯು, ಕರ್ತವ್ಯದಲ್ಲಿದ್ದ ಮಹಿಳಾ ಪಿಎಸ್‌ಐ ಅವರಿಗೆ ಏಕಾಏಕಿ ತಡೆದು, “ಲೇ ನಿಮ್ಮೂರ ಪೋಲಿಸರೇ, ನನ್ನ ಮೇಲೆ ಕೇಸ್ ಮಾಡಿ ತ್ರಾಸು ಕೊಡುತೀರಿ, ನಿಮ್ಮನ್ನ ಸುಮ್ಮನೇ ಬಿಡುದಿಲ್ಲಾ” ಎಂದು ಜೋರಾಗಿ ಅವಾಚ್ಯವಾಗಿ ನಿಂದಿಸಿದ್ದಾನೆ.

ಅಲ್ಲದೆ, ಒಮ್ಮೆಲೆ ಆಕ್ರಮಣ ಮಾಡಿದ ಆರೋಪಿಯು ತನ್ನ ಬೈಕ್ ಕೀಲಿಯಿಂದ ಪಿಎಸ್‌ಐ ಅವರ ಹಣೆಗೆ ಬಲವಾಗಿ ಹೊಡೆದು ಭಾರಿ ರಕ್ತಗಾಯ ಪಡಿಸಿದ್ದಾನೆ. ತದನಂತರ ಕುತ್ತಿಗೆಯನ್ನು ಹಿಸುಕಿ ಕೊಲೆ ಮಾಡಲು ಪ್ರಯತ್ನಿಸಿದ್ದು ಮಾತ್ರವಲ್ಲದೆ, ಅಮಾನವೀಯವಾಗಿ ಪಿಎಸ್‌ಐ ಅವರ ಬಲಗಾಲಿಗೆ ಬಾಯಿ ಹಾಕಿ ಬಲವಾಗಿ ಕಚ್ಚಿ ಗಾಯ ಮಾಡಿದ್ದಾನೆ.

ಹಲ್ಲೆಯ ಸಂದರ್ಭದಲ್ಲಿ ಆರೋಪಿಯು ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು, ಜೀವಬೆದರಿಕೆ ಹಾಕಿದ್ದಾನೆ. ಅಲ್ಲದೆ, ಸಾರ್ವಜನಿಕವಾಗಿ ಮಹಿಳಾ ಪಿಎಸ್‌ಐ ಅವರ ಘನತೆಗೆ ಕುಂದುಂಟು ಮಾಡಿದ ಅಪರಾಧವನ್ನೂ ಎಸಗಿದ್ದಾನೆ ಎಂದು ಎಫ್‌ಐಆರ್ ಪ್ರತಿಯಲ್ಲಿ ದಾಖಲಾಗಿದೆ.

ಘಟನೆಯ ನಂತರ ಪಿಎಸ್‌ಐ ಅವರು ನವಲಗುಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಹಿರಿಯ ಅಧಿಕಾರಿಗಳು ಪ್ರಕರಣ ದಾಖಲಿಸಿ, ಆರೋಪಿ ದ್ಯಾಮನಗೌಡ ಕುಲಕರ್ಣಿ ಅವರನ್ನು ಬಂಧಿಸಿದ್ದಾರೆ. ಗಾಯಗೊಂಡಿರುವ ಮಹಿಳಾ ಪಿಎಸ್‌ಐ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಪೊಲೀಸರ ಮೇಲಿನ ಈ ಅಮಾನವೀಯ ಹಲ್ಲೆ ಪ್ರಕರಣವು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

Leave a Reply

Your email address will not be published. Required fields are marked *