ಮಾದಕ ವಸ್ತು ತಡೆದಿದ್ದಕ್ಕೆ ಜೈಲರ್‌ ಮೇಲೆ ಖೈದಿಗಳಿಂದ ಮಾರಣಾಂತಿಕ ಹಲ್ಲೆ: ಕಾರವಾರ ಜೈಲಿನಲ್ಲಿ ಭೀಕರ ಘಟನೆ

Spread the love


ಮಾದಕ ವಸ್ತು ತಡೆದಿದ್ದಕ್ಕೆ ಜೈಲರ್‌ ಮೇಲೆ ರೌಡಿಗಳ ಮಾರಣಾಂತಿಕ ಹಲ್ಲೆ: ಕಾರವಾರ ಜೈಲಿನಲ್ಲಿ ಭೀಕರ ಘಟನೆ

ಕಾರವಾರ (ಉತ್ತರಕನ್ನಡ): ಜಿಲ್ಲಾ ಕಾರಾಗೃಹದಲ್ಲಿ ಮಾದಕ ವಸ್ತುಗಳ ಪೂರೈಕೆ ಮತ್ತು ಬಳಕೆಗೆ ಸಂಪೂರ್ಣವಾಗಿ ಕಡಿವಾಣ ಹಾಕಿದ ಹಿನ್ನೆಲೆಯಲ್ಲಿ, ರೊಚ್ಚಿಗೆದ್ದ ಮಂಗಳೂರಿನ ಮೂಲದ ಇಬ್ಬರು ಕುಖ್ಯಾತ ರೌಡಿಗಳು ಜೈಲರ್ ಮತ್ತು ಇತರ ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಗಂಭೀರ ಘಟನೆ ಕಾರವಾರದ ಜಿಲ್ಲಾ ಕಾರಾಗೃಹದಲ್ಲಿ ವರದಿಯಾಗಿದೆ. ಜೈಲರ್ ಕಲ್ಲಪ್ಪ ಗಸ್ತಿ ಸೇರಿದಂತೆ ಕರ್ತವ್ಯ ನಿರತ ಇತರೆ ಮೂವರು ಸಿಬ್ಬಂದಿ ಮೇಲೆ ಈ ದಾಳಿ ನಡೆದಿದೆ.

ಜೈಲಿನಲ್ಲಿ ಮಾದಕ ಪದಾರ್ಥಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿ, ತಪಾಸಣೆಯನ್ನು ಬಿಗಿಗೊಳಿಸಿದ ಜೈಲರ್ ಕಲ್ಲಪ್ಪ ಗಸ್ತಿ ಅವರ ಕ್ರಮವನ್ನು ಸಹಿಸದ ಆರೋಪಿಗಳು, ಸಿಬ್ಬಂದಿಗಳೊಂದಿಗೆ ತಗಾದೆ ತೆಗೆದಿದ್ದಾರೆ. ಮಾತುಕತೆ ವಿಕೋಪಕ್ಕೆ ಹೋಗಿ, ಆರೋಪಿಗಳು ಜೈಲರ್ ಮತ್ತು ಸಿಬ್ಬಂದಿಯ ಬಟ್ಟೆ ಹರಿದು ಮನಬಂದಂತೆ ಭೀಕರವಾಗಿ ಥಳಿಸಿದ್ದಾರೆ.

ಈ ಕೃತ್ಯ ಎಸಗಿದವರು ಮಂಗಳೂರು ಮೂಲದ ಕುಖ್ಯಾತ ರೌಡಿಗಳಾದ ಮೊಹ್ಮದ್ ಅಬ್ದುಲ್ ಫಯಾನ್ ಮತ್ತು ಕೌಶಿಕ ನಿಹಾಲ್ ಎಂದು ಗುರುತಿಸಲಾಗಿದೆ. ಹಲ್ಲೆಗೊಳಗಾದ ಜೈಲರ್ ಕಲ್ಲಪ್ಪ ಗಸ್ತಿ ಮತ್ತು ಸಿಬ್ಬಂದಿಯನ್ನು ತಕ್ಷಣವೇ ಚಿಕಿತ್ಸೆಗಾಗಿ ಕಾರವಾರದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಮಾಹಿತಿ ತಿಳಿದ ಕೂಡಲೇ 20ಕ್ಕೂ ಹೆಚ್ಚು ಪೊಲೀಸರು ಸ್ಥಳಕ್ಕೆ ಧಾವಿಸಿ, ಪರಿಸ್ಥಿತಿಯನ್ನು ಪರಿಶೀಲಿಸಿ ನಿಯಂತ್ರಣಕ್ಕೆ ತಂದಿದ್ದಾರೆ.

ದಾಳಿ ನಡೆಸಿದ ಕೈದಿಗಳಾದ ಮೊಹ್ಮದ್ ಅಬ್ದುಲ್ ಫಯಾನ್ ಮತ್ತು ಕೌಶಿಕ ನಿಹಾಲ್ ಅವರು ಡಕಾಯತಿ ಸೇರಿದಂತೆ 12ಕ್ಕೂ ಹೆಚ್ಚು ಗಂಭೀರ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದಾರೆ. ಮೂಲತಃ ಮಂಗಳೂರು ಜೈಲಿನಲ್ಲಿ ಹೆಚ್ಚುವರಿಯಾಗಿದ್ದ ಈ ಕೈದಿಗಳನ್ನು ಇತ್ತೀಚೆಗೆ ಕಾರವಾರ ಜಿಲ್ಲಾ ಕಾರಾಗೃಹಕ್ಕೆ ವರ್ಗಾಯಿಸಲಾಗಿತ್ತು.

ಕಳೆದ ಕೆಲವು ದಿನಗಳಿಂದ ಜೈಲಿನಲ್ಲಿ ಮಾದಕ ಪದಾರ್ಥಗಳನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿತ್ತು ಎನ್ನಲಾಗಿದೆ. ಜೈಲಿನೊಳಗೆ ಕರ್ತವ್ಯ ನಿರತ ಸಿಬ್ಬಂದಿ ಮೇಲೆ ಈ ರೀತಿ ಹಲ್ಲೆ ನಡೆದಿರುವುದು ಕಾರಾಗೃಹದ ಸುರಕ್ಷತೆ ಮತ್ತು ಕೈದಿಗಳ ಮೇಲಿನ ಹಿಡಿತದ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಪೊಲೀಸ್ ಇಲಾಖೆ ಘಟನೆ ಕುರಿತು ಹೆಚ್ಚಿನ ತನಿಖೆ ಮುಂದುವರೆಸಿದೆ.


Leave a Reply

Your email address will not be published. Required fields are marked *