
ಧಾರವಾಡ: ಸಪ್ತಾಪುರ ವಿವೇಕಾನಂದ ಸರ್ಕಲ್ ಬಳಿ ಇರುವ ಸೈನಿಕ ಮೆಸ್ ಮಾಲೀಕ, ಮಾಜಿ ಸೈನಿಕ ರಾಮಪ್ಪ ನಿಪ್ಪಾಣಿ ಅವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಇಬ್ಬರು ಪೊಲೀಸ್ ಸಿಬ್ಬಂದಿಗಳನ್ನು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಎಎಸ್‌ಐ, ಕಾನ್‌ಸ್ಟೆಬಲ್ ಅಮಾನತು
ಹಲ್ಲೆ ನಡೆಸಿದ್ದ ಆರೋಪಕ್ಕೆ ಗುರಿಯಾಗಿರುವ ಎಎಸ್‌ಐ ವಿದ್ಯಾನಂದ ಸುಬೇದಾರ್ ಹಾಗೂ ಪೊಲೀಸ್ ಕಾನ್‌ಸ್ಟೆಬಲ್ ರಾಜಪ್ಪ ಕಣಬೂರ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕರ್ತವ್ಯದಿಂದ ಅಮಾನತು ಮಾಡಲಾಗಿದೆ. ಪೊಲೀಸ್ ಆಯುಕ್ತರ ಈ ನಿರ್ಧಾರಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ಘಟನೆ ವಿವರ
ಕಳೆದ ಭಾನುವಾರ ರಾತ್ರಿ, ಮೆಸ್ ಮಾಲೀಕರಾದ ಮಾಜಿ ಸೈನಿಕ ರಾಮಪ್ಪ ನಿಪ್ಪಾಣಿ ಮತ್ತು ಅವರ ಕುಟುಂಬದ ಕೆಲ ಸದಸ್ಯರು ಮೆಸ್‌ನಲ್ಲಿ ಊಟ ಮಾಡುತ್ತ ಕುಳಿತಿದ್ದರು. ಈ ಸಂದರ್ಭದಲ್ಲಿ ಅಲ್ಲಿಗೆ ಆಗಮಿಸಿದ ಎಎಸ್‌ಐ ಸುಬೇದಾರ್, “ಇಷ್ಟು ತಡವಾದರೂ ಮೆಸ್ ಏಕೆ ಬಂದ್ ಮಾಡಿಲ್ಲ” ಎಂದು ಪ್ರಶ್ನಿಸಿದ್ದಾರೆ.
ಈ ಕುರಿತು ಮಾಜಿ ಸೈನಿಕ ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದ್ದು, ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಈ ವೇಳೆ, ಸಿಟ್ಟಿಗೆದ್ದ ಪೊಲೀಸರು, ಮಾಜಿ ಸೈನಿಕ ರಾಮಪ್ಪ ಅವರ ಮೇಲೆ ಹೆಲ್ಮೆಟ್ ಹಾಗೂ ಬಡಿಗೆಯಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಪರಿಣಾಮವಾಗಿ, ತೀವ್ರವಾಗಿ ಗಾಯಗೊಂಡ ರಾಮಪ್ಪ ನಿಪ್ಪಾಣಿ ಅವರನ್ನು ಕೂಡಲೇ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಆಯುಕ್ತರ ಭೇಟಿ, ತನಿಖೆಗೆ ಭರವಸೆ
ಘಟನೆ ನಡೆದ ಕೂಡಲೇ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿದ್ದರು. ತಮ್ಮ ಸಿಬ್ಬಂದಿಯ ಈ ಅನಪೇಕ್ಷಿತ ವರ್ತನೆಯಿಂದ ಸ್ವತಃ ಆಯುಕ್ತರೇ ಬೇಸರ ವ್ಯಕ್ತಪಡಿಸಿದ ಜೊತೆಗೆ, ಘಟನೆಯ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳುವ ಭರವಸೆಯನ್ನೂ ನೀಡಿದ್ದರು.
ಆ ಭರವಸೆಯಂತೆ, ಇದೀಗ ಹಲ್ಲೆ ನಡೆಸಿದ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಅಲ್ಲದೆ, ಈ ಘಟನೆ ಸಂಬಂಧ ನಿಸ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

