

ಮೈಸೂರು: ಜಡಗಟ್ಟಿರುವ ಸಮಾಜದಲ್ಲಿ ಪರಿವರ್ತನೆಯಾಗಬೇಕಾದರೆ, ಹೆಚ್ಚು ಜನರಿಗೆ ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರ ತತ್ವ ಆದರ್ಶಗಳು ಪರಿಚಿತವಾಗಬೇಕು. ಪ್ರತಿಯೊಬ್ಬರೂ ತಮ್ಮಲ್ಲಿರುವ ಗುಲಾಮಗಿರಿಯ ಮನಸ್ಥಿತಿಯನ್ನು ಕಿತ್ತೊಗೆದು ಮನುಷ್ಯರಾಗಬೇಕು. ಪ್ರೀತಿಯಿಂದ ದ್ವೇಷವನ್ನು ಗೆಲ್ಲುವ ಮೂಲಕ ಸಮ ಸಮಾಜ ನಿರ್ಮಾಣಕ್ಕೆ ನಾಂದಿ ಹಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು.
ಅವರು ಇಂದು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ‘ಬೌದ್ಧ ಮಹಾ ಸಮ್ಮೇಳನ ಮತ್ತು ಮಾನವ ಮೈತ್ರಿಯ ಪಯಣ 2025’ ಅಂತರಾಷ್ಟ್ರೀಯ ಬೌದ್ಧ ಸಾಂಸ್ಕೃತಿಕ ಸಂಗಮ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಸಮಾನತೆಯೇ ಆರ್ಥಿಕ ಶಕ್ತಿ:
ಸಮಾನ ಅವಕಾಶಗಳು ಇಲ್ಲದ ಕಾರಣ ಅಸಮಾನತೆ ನಿರ್ಮಾಣವಾಗಿದೆ. ಪ್ರತಿಯೊಬ್ಬರೂ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಶಕ್ತಿ ಹೊಂದಿದರೆ ಮಾತ್ರ ಸಮಾನತೆ ಸಾಧ್ಯವಾಗುತ್ತದೆ ಎಂದು ಅಂಬೇಡ್ಕರ್ ಅವರು ಪ್ರತಿಪಾದಿಸಿದ್ದರು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಬದ್ಧವಾಗಿದೆ. ಎಸ್‌ಸಿಎಸ್‌ಪಿ/ಟಿಎಸ್‌ಪಿ ಯೋಜನೆಗಾಗಿ $42 ಸಾವಿರ ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದೇವೆ. ಸಮಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರಿಗೂ ಆರ್ಥಿಕ ಶಕ್ತಿ ಅನಿವಾರ್ಯವಾಗಿದ್ದು, ನಮ್ಮ ಸರ್ಕಾರ ಗುತ್ತಿಗೆಗಳಲ್ಲಿ ಮೀಸಲಾತಿಯನ್ನು ತಂದಿದೆ. ಸರ್ವೋಚ್ಚ ನ್ಯಾಯಾಲಯವು ಬಡ್ತಿಯಲ್ಲಿ ಮೀಸಲಾತಿಯನ್ನು ನೀಡದಿದ್ದರೂ, ಸಮಿತಿ ರಚಿಸಿ ಅದರ ವರದಿಯ ಆಧಾರದ ಮೇಲೆ ಬಡ್ತಿಯಲ್ಲಿ ಮೀಸಲಾತಿಯನ್ನು ಜಾರಿಗೆ ತಂದಿದ್ದು ನಮ್ಮ ಸರ್ಕಾರದ ಸಾಧನೆಯಾಗಿದೆ ಎಂದು ಸಿಎಂ ವಿವರಿಸಿದರು.
ಭಾಗ್ಯಗಳಿಂದ ಮಹಿಳೆಯರಿಗೆ ಶಕ್ತಿ:
ಸಮಾನತೆಯ ಜಾಗೃತಿಯ ಜೊತೆಗೆ ಪೂರಕ ಕಾರ್ಯಕ್ರಮಗಳಿದ್ದರೆ ಮಾತ್ರ ಆರ್ಥಿಕ ಹಾಗೂ ಸಾಮಾಜಿಕ ಶಕ್ತಿ ಬರುತ್ತದೆ. ಅಸಮಾನತೆಯನ್ನು ಹೋಗಲಾಡಿಸುವ ದೃಷ್ಟಿಯಿಂದಲೇ ನಮ್ಮ ಅಧಿಕಾರದ ಅವಧಿಯಲ್ಲಿ ‘ಭಾಗ್ಯ’ಗಳು ಮತ್ತು ‘ಗ್ಯಾರಂಟಿ’ ಯೋಜನೆಗಳನ್ನು ನೀಡಲಾಗಿದೆ. ಇದಕ್ಕೆ ಉದಾಹರಣೆಯಾಗಿ, ಶಕ್ತಿ ಯೋಜನೆಯಿಂದಾಗಿ ಒಂದು ದಿನದಲ್ಲಿ ಹಾಸನಾಂಬೆ ದರ್ಶನಕ್ಕೆ ಭೇಟಿ ನೀಡಿದ ಒಟ್ಟು 9 ಲಕ್ಷ ಪ್ರಯಾಣಿಕರ ಪೈಕಿ ಶೇ.70 ರಷ್ಟು ಮಹಿಳೆಯರೇ ಇದ್ದರು. ಇದರಿಂದ ದೇವಸ್ಥಾನ, ಕೆಲಸದ ಸ್ಥಳಗಳಿಗೆ ಮಹಿಳೆಯರು ಓಡಾಡುವಂತಾಗಿ ಸ್ವಾವಲಂಬಿಗಳಾಗಿದ್ದಾರೆ ಎಂದು ನುಡಿದರು.
ಮನುವಾದಿಗಳ ವಿರುದ್ಧ ಕಿಡಿ:
ಸಮಾಜದಲ್ಲಿ ಜಾತಿ ವ್ಯವಸ್ಥೆ ಆಳವಾಗಿ ಬೇರೂರಿದೆ. ಕೆಲವು ಮನುವಾದಿಗಳ ಸಂಚಿನಿಂದ ಇಂದಿಗೂ ಸಮಾಜದಲ್ಲಿ ಬದಲಾವಣೆ ಸಾಧ್ಯವಾಗಿಲ್ಲ ಎಂದು ಸಿದ್ದರಾಮಯ್ಯ ಅವರು ಕಿಡಿ ಕಾರಿದರು. ಸಮಾಜದಲ್ಲಿ ಬದಲಾವಣೆ ತರುವ ನಮ್ಮ ಪ್ರಯತ್ನಕ್ಕೆ ಹಲವು ತೊಡಕುಗಳು ಎದುರಾಗುತ್ತವೆ. ಮೌಢ್ಯಗಳು, ಕಂದಾಚಾರಗಳ ನಿಗ್ರಹಕ್ಕೆ ನಮ್ಮ ಸರ್ಕಾರ ಕಾನೂನು ರೂಪಿಸಿದೆ. ಅಲ್ಲದೆ, ಸಚಿವ ಪ್ರಿಯಾಂಕ್ ಖರ್ಗೆಯವರು ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಸಂಘಸಂಸ್ಥೆಗಳು ತಮ್ಮ ಚಟುವಟಿಕೆಗಳನ್ನು ನಡೆಸದಂತೆ ನಿರ್ಬಂಧ ಕೋರಿ ಪತ್ರ ಬರೆದ ಹಿನ್ನೆಲೆ, ತಮಿಳುನಾಡಿನಲ್ಲಿ ಈ ದಿಸೆಯಲ್ಲಿ ತೆಗೆದುಕೊಂಡಿರುವ ಕ್ರಮದ ಬಗ್ಗೆ ವರದಿ ನೀಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿಗಳು ಮಾಹಿತಿ ನೀಡಿದರು.
ಪರಧರ್ಮ ಸಹಿಷ್ಣುತೆ ಮತ್ತು ಸಹಬಾಳ್ವೆಯನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಂಡರೆ ಮಾತ್ರ ದೇಶದಲ್ಲಿ ಶಾಂತಿ, ಅಹಿಂಸೆ ಮತ್ತು ಸತ್ಯ ನೆಲೆಗೊಳ್ಳಲು ಸಾಧ್ಯ. ಬುದ್ಧ, ಬಸವಣ್ಣನವರ ತತ್ವಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅವರು ಪುನರುಚ್ಚರಿಸಿದರು.

