
ಬೆಂಗಳೂರು: ರಾಜ್ಯದಲ್ಲಿ ಸಾಮಾಜಿಕ ಸಾಮರಸ್ಯವನ್ನು ಕದಡುವ ಹಾಗೂ ದ್ವೇಷ ಹರಡುವ ವ್ಯಕ್ತಿಗಳು ಮತ್ತು ಸಂಘಟನೆಗಳಿಗೆ ಬಿಸಿ ಮುಟ್ಟಿಸುವ ಉದ್ದೇಶದ “ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿದೇಯಕ-2025″ಕ್ಕೆ ವಿಧಾನಸಭೆಯಲ್ಲಿ ಗುರುವಾರ ಅಂಗೀಕಾರ ದೊರೆಯಿತು. ಈ ಮೂಲಕ ದ್ವೇಷ ಭಾಷಣ ತಡೆಗೆ ಪ್ರತ್ಯೇಕ ಕಾನೂನು ರೂಪಿಸಿದ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ.
ವಿದೇಯಕದ ಕುರಿತು ಸದನದಲ್ಲಿ ಮಾತನಾಡಿದ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು, “ಇತ್ತೀಚಿನ ದಿನಗಳಲ್ಲಿ ಸಮಾಜಕ್ಕೆ ನೋವಾಗುವ ರೀತಿಯಲ್ಲಿ ಪ್ರಚೋದನಾಕಾರಿ ಮಾತುಗಳನ್ನು ಆಡುವ ಪ್ರವೃತ್ತಿ ಹೆಚ್ಚಾಗಿದೆ. ಇದರ ನೇರ ಪರಿಣಾಮವಾಗಿ ಸಮಾಜದಲ್ಲಿ ಕೊಲೆ, ಹೊಡೆದಾಟಗಳಂತಹ ಅಹಿತಕರ ಘಟನೆಗಳು ಸಂಭವಿಸುತ್ತಿವೆ. ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವುದು ಮತ್ತು ದ್ವೇಷ ಭಾಷಣಗಳನ್ನು ನಿಯಂತ್ರಿಸುವುದು ಸರ್ಕಾರದ ಆದ್ಯತೆಯಾಗಿದ್ದು, ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕಾನೂನು ತರಲಾಗಿದೆ,” ಎಂದು ಸ್ಪಷ್ಟಪಡಿಸಿದರು.
ದ್ವೇಷ ಭಾಷಣದ ವ್ಯಾಪ್ತಿ:
ಧರ್ಮ, ಜನಾಂಗ, ಜಾತಿ, ಸಮುದಾಯ, ಲಿಂಗ, ಲೈಂಗಿಕ ದೃಷ್ಟಿಕೋನ, ಜನ್ಮಸ್ಥಳ, ವಾಸಸ್ಥಳ, ಭಾಷೆ, ಅಂಗವೈಕಲ್ಯ ಅಥವಾ ಬುಡಕಟ್ಟು ಆಧಾರದ ಮೇಲೆ ಮಾಡುವ ಯಾವುದೇ ರೀತಿಯ ಪಕ್ಷಪಾತ ಅಥವಾ ನಿಂದನೆಯನ್ನು ‘ದ್ವೇಷ ಭಾಷಣ’ ಎಂದು ಈ ಕಾನೂನಿನ ಅಡಿ ವರ್ಗೀಕರಿಸಲಾಗಿದೆ. ಇಂತಹ ಭಾಷಣಗಳ ಪ್ರಸರಣ, ಪ್ರಕಟಣೆ ಅಥವಾ ಪ್ರಚಾರ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ವಿವರಿಸಿದರು.
ಜಾಮೀನು ರಹಿತ ಪ್ರಕರಣ ಮತ್ತು ಕಠಿಣ ಶಿಕ್ಷೆ:
ಹೊಸ ಕಾನೂನಿನ ಪ್ರಕಾರ, ದ್ವೇಷ ಭಾಷಣದಡಿ ದಾಖಲಾಗುವ ಪ್ರಕರಣಗಳು ಜಾಮೀನು ರಹಿತ (Non-bailable) ಆಗಿರಲಿವೆ. ಶಿಕ್ಷೆಯ ಪ್ರಮಾಣ ಈ ಕೆಳಗಿನಂತಿರಲಿದೆ:
- ಮೊದಲ ಬಾರಿ ಅಪರಾಧ ಎಸಗಿದರೆ: ಕನಿಷ್ಠ 1 ವರ್ಷದಿಂದ ಗರಿಷ್ಠ 7 ವರ್ಷದವರೆಗೆ ಜೈಲು ಶಿಕ್ಷೆ ಮತ್ತು 50 ಸಾವಿರ ರೂ. ದಂಡ.
- ಅಪರಾಧ ಪುನರಾವರ್ತನೆಯಾದರೆ: ಕನಿಷ್ಠ 2 ವರ್ಷದಿಂದ ಗರಿಷ್ಠ 7 ವರ್ಷದವರೆಗೆ ಜೈಲು ಶಿಕ್ಷೆ ಮತ್ತು 1 ಲಕ್ಷ ರೂ. ದಂಡ ವಿಧಿಸಲು ಅವಕಾಶವಿದೆ.
ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಲು ಈ ಕಾನೂನು ಮೈಲಿಗಲ್ಲಾಗಲಿದೆ ಎಂದು ಡಾ. ಜಿ. ಪರಮೇಶ್ವರ ಈ ಸಂದರ್ಭದಲ್ಲಿ ಭರವಸೆ ನೀಡಿದರು.

