
ಧಾರವಾಡ: ಬಡತನದಲ್ಲಿ ಹುಟ್ಟಿ, ಸ್ವಂತ ಪ್ರಯತ್ನದಿಂದ ಉನ್ನತ ಸ್ಥಾನಕ್ಕೇರಿ ಸಮಾಜದ ಉದ್ಧಾರಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟ ಸರ್. ಸಿದ್ಧಪ್ಪ ಕಂಬಳಿ ಅವರು ಮರೆಯಲಾಗದ ಮಹಾನುಭಾವರು ಎಂದು ಅಧ್ಯಾಪಕರಾದ ಡಾ. ಈರಣ್ಣ ಇಂಜಗನೇರಿ ಅಭಿಪ್ರಾಯ ವ್ಯಕ್ತಪಡಿಸಿದರು.
ಕರ್ನಾಟಕ ವಿದ್ಯಾವರ್ಧಕ ಸಂಘವು ಸರ್. ಸಿದ್ಧಪ್ಪ ಕಂಬಳಿ ಪ್ರತಿಷ್ಠಾನ ದತ್ತಿ ಅಂಗವಾಗಿ ಆಯೋಜಿಸಿದ್ದ ‘ಸರ್. ಸಿದ್ಧಪ್ಪ ಕಂಬಳಿ ಅವರ ಸಾಮಾಜಿಕ ನ್ಯಾಯ’ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಕಂಬಳಿ ಅವರು ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ ಅಸಾಮಾನ್ಯರಾಗಿ ಬೆಳೆದವರು. ಆಗಿನ ಮುಂಬೈ ಸರ್ಕಾರದಲ್ಲಿ ಏಳು ಪ್ರಮುಖ ಮಂತ್ರಿ ಖಾತೆಗಳನ್ನು ಸಮರ್ಥವಾಗಿ ನಿರ್ವಹಿಸಿದ ಅವರು, ಶೋಷಿತರು, ಬಡವರು ಹಾಗೂ ದುರ್ಬಲರಿಗೆ ಧ್ವನಿಯಾಗಿ ಸಾಮಾಜಿಕ ನ್ಯಾಯ ಒದಗಿಸಲು ಪ್ರಯತ್ನಿಸಿದರು.
ಪ್ಲೇಟೋನ ಕಲ್ಯಾಣ ರಾಜ್ಯ ಹಾಗೂ ಬಸವಣ್ಣನವರ ಸಮಾನತೆಯ ಕಲ್ಪನೆಯನ್ನು ತಮ್ಮ ಬದುಕಿನಲ್ಲಿ ಸಾಕಾರಗೊಳಿಸಿದ ಧೀಮಂತರು. ಅವರ ಸಾರ್ವಜನಿಕ ಬದುಕು ಪಾರದರ್ಶಕವಾಗಿದ್ದು, ನಿಷ್ಠೆ, ಪ್ರಾಮಾಣಿಕತೆ ಮತ್ತು ಬದ್ಧತೆಗೆ ಸಾಕ್ಷಿಯಾಗಿತ್ತು ಎಂದು ಡಾ. ಇಂಜಗನೇರಿ ಹೇಳಿದರು.
ಸಾರ್ವಜನಿಕರ ಸಾಧನೆಯ ಹರಿಕಾರ
ಸರ್. ಸಿದ್ಧಪ್ಪ ಕಂಬಳಿ ಪ್ರತಿಷ್ಠಾನದ ಅಧ್ಯಕ್ಷರಾದ ಪ್ರೊ. ಶಶಿಧರ ತೋಡಕರ ಮಾತನಾಡಿ, “ಸಾರ್ವಜನಿಕ ಜೀವನದಲ್ಲಿ ಒಬ್ಬ ವ್ಯಕ್ತಿ ಪ್ರಯತ್ನವಿದ್ದರೆ ಏನೆಲ್ಲಾ ಸಾಧಿಸಬಹುದೆಂಬುದನ್ನು ಸಿದ್ಧಪ್ಪ ಕಂಬಳಿ ಅವರು ಸಾಧಿಸಿ ತೋರಿಸಿದರು. ಅವರು ಕೇವಲ ಸಾಮಾಜಿಕ ನ್ಯಾಯದ ಪರಿಪಾಲಕರು ಮಾತ್ರವಲ್ಲದೆ, ದುರ್ಬಲರಿಗೆ ಶಕ್ತಿ ತುಂಬಿದವರಾಗಿದ್ದರು” ಎಂದು ಹೇಳಿದರು.
ಕ.ವಿ.ವ ಸಂಘದ ಅಧ್ಯಕ್ಷರಾದ ಚಂದ್ರಕಾಂತ ಬೆಲ್ಲದ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು
ಶಂಕರ ಕುಂಬಿ ಸ್ವಾಗತಿಸಿದರು. ವೀರಣ್ಣ ಒಡ್ಡೀನ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಮತಿ ವಿಶ್ವೇಶ್ವರಿ ಬ. ಹಿರೇಮಠ ಕಾರ್ಯಕ್ರಮ ನಿರೂಪಿಸಿ, ವಂದನಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಬಸವಪ್ರಭು ಹೊಸಕೇರಿ, ಶಂಕರ ಹಲಗತ್ತಿ, ಸತೀಶ ತುರಮರಿ, ಡಾ. ಧನವಂತ ಹಾಜವಗೋಳ, ಶಿವಶರಣ ಕಲಬಶೆಟ್ಟರ, ಡಾ. ಸದಾಶಿವ ಮರ್ಜಿ, ಪ್ರೊ. ಜೆ. ಎಂ. ನಾಗಯ್ಯ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

