ಧಾರವಾಡ: ಸಾರ್ವಜನಿಕರಲ್ಲಿ ಉಳಿತಾಯದ ಮನೋಭಾವ ಬೆಳೆಸಲು ಹಾಗೂ ಸುರಕ್ಷಿತ ಹೂಡಿಕೆಗೆ ಅವಕಾಶ ಕಲ್ಪಿಸಲು ಭಾರತೀಯ ಅಂಚೆ ಇಲಾಖೆಯು ಇದೀಗ ‘ಉಳಿತಾಯ ಸಂಕಲ್ಪ’ ಅಭಿಯಾನವನ್ನು ಜಾರಿಗೊಳಿಸಿದೆ. ಭಾರತ ಸರ್ಕಾರದ ಭರವಸೆಯೊಂದಿಗೆ ಕಾರ್ಯನಿರ್ವಹಿಸುತ್ತಿರುವ ಅಂಚೆ ಕಚೇರಿ ಉಳಿತಾಯ ಬ್ಯಾಂಕ್ (POSB), ಗ್ರಾಹಕರಿಗೆ ಅತ್ಯಂತ ವಿಶ್ವಾಸಾರ್ಹ ಮತ್ತು ಲಾಭದಾಯಕ ಹೂಡಿಕೆ ಯೋಜನೆಗಳನ್ನು ಪರಿಚಯಿಸುತ್ತಿದ್ದು, ಇದರ ಸದುಪಯೋಗ ಪಡೆಯುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.
ಅಂಚೆ ಕಚೇರಿಗಳ ವಿವಿಧ ಯೋಜನೆಗಳಲ್ಲಿ ಹೂಡಿಕೆ ಮಾಡುವುದರಿಂದ ಗ್ರಾಹಕರು ತಮ್ಮ ಹಣಕ್ಕೆ ಹೆಚ್ಚಿನ ಭದ್ರತೆಯೊಂದಿಗೆ ನಿಯಮಿತ ಬಡ್ಡಿ ಹಾಗೂ ನಿರಂತರ ಆದಾಯವನ್ನು ಪಡೆಯಬಹುದಾಗಿದೆ. ವಿಶೇಷವಾಗಿ ಗ್ರಾಮೀಣ ಮತ್ತು ದೂರದ ಪ್ರದೇಶಗಳ ಜನರಿಗೂ ಈ ಸೌಲಭ್ಯಗಳು ತಲುಪುತ್ತಿದ್ದು, ಆಧುನಿಕ ಬ್ಯಾಂಕಿಂಗ್ ವ್ಯವಸ್ಥೆಗಳಾದ ಎಟಿಎಂ, ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಹಾಗೂ NEFT/RTGS ಸೌಲಭ್ಯಗಳನ್ನು ಸಹ ಅಂಚೆ ಇಲಾಖೆ ಒದಗಿಸುತ್ತಿದೆ. ಇದು ಸಾಮಾನ್ಯ ಬ್ಯಾಂಕಿಂಗ್ ಸೇವೆಯಷ್ಟೇ ವೇಗವಾಗಿ ಮತ್ತು ಸುಲಭವಾಗಿ ಲಭ್ಯವಿರುವುದು ವಿಶೇಷ.
ಇದಲ್ಲದೆ, ಆರ್ಥಿಕ ಭದ್ರತೆಯ ದೃಷ್ಟಿಯಿಂದ ಅಂಚೆ ಉಳಿತಾಯ ಖಾತೆದಾರರು ಕಡಿಮೆ ಪ್ರೀಮಿಯಂ ದರದಲ್ಲಿ ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) ಹಾಗೂ ಪ್ರಧಾನಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ (PMJJBY) ಅಡಿ ನೋಂದಾಯಿಸಿಕೊಳ್ಳಲು ಅವಕಾಶವಿದೆ. ಈ ಮೂಲಕ ಅನಿರೀಕ್ಷಿತ ಸಂದರ್ಭಗಳಲ್ಲಿ ಕುಟುಂಬಕ್ಕೆ ಆರ್ಥಿಕ ಆಸರೆ ಸಿಗಲಿದೆ. ಆರ್ಥಿಕ ಒಳಗೊಳ್ಳುವಿಕೆಯನ್ನು ಹೆಚ್ಚಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ ಈ ಅಭಿಯಾನದಡಿ, ಸಾರ್ವಜನಿಕರು ತಮ್ಮ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಿ ಹೊಸ ಖಾತೆ ತೆರೆಯುವ ಮೂಲಕ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕೆಂದು ಅಧಿಕಾರಿಗಳು ತಿಳಿಸಿದ್ದಾರೆ.

