
ದಾವಣಗೆರೆ: ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಸೂರಗೊಂಡನಕೊಪ್ಪದ ಪವಿತ್ರ ಕ್ಷೇತ್ರ ಭಾಯಾಗಡ್ದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂತ ಸೇವಾಲಾಲ್ ಅವರ 287ನೇ ಜಯಂತ್ಯುತ್ಸವದ ವೇದಿಕೆಯು ರಾಜ್ಯ ಸರ್ಕಾರದ ವಿರುದ್ಧದ ಪ್ರತಿಭಟನಾ ಅಖಾಡವಾಗಿ ಮಾರ್ಪಟ್ಟಿತು. ಸಮಾರಂಭಕ್ಕೆ ಆಗಮಿಸಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಬಂಜಾರ ಸಮುದಾಯದ ಯುವಕರು ಕಪ್ಪು ಬಟ್ಟೆ ಪ್ರದರ್ಶಿಸುವ ಮೂಲಕ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸರ್ಕಾರಕ್ಕೆ ಭಾರಿ ಮುಜುಗರ ಉಂಟುಮಾಡಿದೆ.
ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಒಳಮೀಸಲಾತಿ ನೀತಿಯಿಂದ ಬಂಜಾರ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಆರೋಪಿಸಿರುವ ಪ್ರತಿಭಟನಾಕಾರರು, ಡಿಸಿಎಂ ವೇದಿಕೆಗೆ ಆಗಮಿಸುತ್ತಿದ್ದಂತೆಯೇ ಒಮ್ಮೆಲೇ ಎದ್ದುನಿಂತು ಕಪ್ಪು ಬಾವುಟ ಹಾಗೂ ಬಟ್ಟೆಗಳನ್ನು ಪ್ರದರ್ಶಿಸಿದರು. ಸರ್ಕಾರದ ಧೋರಣೆಯನ್ನು ಖಂಡಿಸಿ ಘೋಷಣೆಗಳನ್ನು ಕೂಗಿದ ಯುವಕರು, ಒಳಮೀಸಲಾತಿ ವಿರೋಧಿ ಭಿತ್ತಿಚಿತ್ರಗಳನ್ನು ಪ್ರದರ್ಶಿಸಿ ಸಭಾಂಗಣದಲ್ಲಿ ಗೊಂದಲದ ವಾತಾವರಣ ನಿರ್ಮಿಸಿದರು. ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು.
ಈ ವೇಳೆ ಮಧ್ಯಪ್ರವೇಶಿಸಿದ ಮಾಜಿ ಶಾಸಕ ಪಿ. ರಾಜೀವ್, ಉಪಮುಖ್ಯಮಂತ್ರಿಗಳಿಗೆ ಗೌರವ ನೀಡುವಂತೆ ಮನವಿ ಮಾಡುತ್ತಲೇ, ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿದರೆ ಸುಮ್ಮನಿರಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು. ಇತ್ತ ಸಭಿಕರನ್ನು ಸಮಾಧಾನಪಡಿಸಲು ಯತ್ನಿಸಿದ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಅವರ ಮಾತುಗಳಿಗೂ ಕಿವಿಗೊಡದ ಸಮುದಾಯದ ಜನರು, ಅವರ ಭಾಷಣಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಘೋಷಣೆಗಳನ್ನು ಕೂಗಿದರು. ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಸರ್ಕಾರದ ವಿರುದ್ಧ ಈ ಮಟ್ಟದ ಜನಾಕ್ರೋಶ ವ್ಯಕ್ತವಾಗಿರುವುದು ಆಡಳಿತಾರೂಢ ಕಾಂಗ್ರೆಸ್ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

