

ಧಾರವಾಡ, ಅ.10: ರಾಜ್ಯ ಸರ್ಕಾರದ ಅಭಿವೃದ್ಧಿ ಕೆಲಸಗಳ ಭೂಮಿ ಪೂಜೆ ಕಾರ್ಯಕ್ರಮದ ವೇದಿಕೆಯಲ್ಲಿ ಕುರಾನ್ ಪಠಣ ಮಾಡಿಸಿರುವುದನ್ನು ಖಂಡಿಸಿ, ಭಾರತೀಯ ಜನತಾ ಪಾರ್ಟಿ (ಬಿಜೆಪಿ) ವತಿಯಿಂದ ಧಾರವಾಡದಲ್ಲಿ ವಿನೂತನ ಪ್ರತಿಭಟನೆ ನಡೆಯಿತು.
ಮುಸ್ಲಿಂ ಸಮುದಾಯದ ಓಲೈಕೆಗಾಗಿ ಸರ್ಕಾರಿ ಅಧಿಕಾರಿಗಳನ್ನು ದುರುಪಯೋಗಪಡಿಸಿಕೊಂಡು, ಸರ್ಕಾರಿ ಯಂತ್ರವನ್ನು ರಾಜಕೀಯವಾಗಿ ಉಪಯೋಗಿಸಿದ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಲು ಬಿಜೆಪಿ ಕಾರ್ಯಕರ್ತರು ಬಿಳಿ ಪಂಜಿ ಹಾಗೂ ಬಿಳಿ ಅಂಗಿ ಧರಿಸಿ ಹೋಮ ಪೂಜೆ ನಡೆಸುವ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆದ ಈ ಪ್ರತಿಭಟನೆಯನ್ನು ಶಾಸಕ ಅರವಿಂದ ಬೆಲ್ಲದ ನೇತೃತ್ವದಲ್ಲಿ ಆಯೋಜಿಸಲಾಗಿತ್ತು. ಅವರು ಮಾತನಾಡಿ, “ಹುಬ್ಬಳ್ಳಿಯಲ್ಲಿ ನಡೆದ ಸರ್ಕಾರದ ಅಭಿವೃದ್ಧಿ ಕಾರ್ಯಗಳ ಭೂಮಿ ಪೂಜೆ ವೇದಿಕೆಯಲ್ಲಿ ಕುರಾನ್ ಪಠಣ ಮಾಡಿಸುವ ಮೂಲಕ ಕಾಂಗ್ರೆಸ್ ಸರ್ಕಾರವು ಒಂದು ಸಮುದಾಯದ ಓಲೈಕೆ ರಾಜಕಾರಣವನ್ನು ಮುಂದುವರೆಸಿದೆ. ಸರ್ಕಾರದ ಈ ನಡೆ ಪಕ್ಷಪಾತದಾಗಿದೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅವರು ಮುಂದುವರಿದು, “ಕಾರ್ಯಕ್ರಮದಲ್ಲಿ ಭಾಗವಹಿಸಿದ ಜಿಲ್ಲಾ ಪಂಚಾಯತ್ ಸಿಇಒ ಹಾಗೂ ಪಾಲಿಕೆ ಆಯುಕ್ತರು ಶಿಷ್ಟಾಚಾರ ಉಲ್ಲಂಘಿಸಿ ಕಾಂಗ್ರೆಸ್ ಪಕ್ಷದ ಏಜೆಂಟ್ಗಳಂತೆ ವರ್ತಿಸಿದ್ದಾರೆ. ಸರ್ಕಾರಿ ಅಧಿಕಾರಿಗಳ ಈ ನಡೆ ಖಂಡನೀಯವಾಗಿದೆ. ಸರ್ಕಾರ ಹಾಗೂ ಸಂಬಂಧಿತ ಅಧಿಕಾರಿಗಳ ವಿರುದ್ಧ ರಾಜ್ಯಪಾಲರು ಸೂಕ್ತ ಕ್ರಮ ಕೈಗೊಳ್ಳಬೇಕು,” ಎಂದು ಆಗ್ರಹಿಸಿದರು.
ಬಿಜೆಪಿ ಮುಖಂಡರು ಈ ಸಂದರ್ಭದಲ್ಲಿ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿ, ಈ ಘಟನೆಯಲ್ಲಿ ಭಾಗಿಯಾದ ಯಾವುದೇ ಅಧಿಕಾರಿಯಾಗಲಿ ಅಥವಾ ಜನಪ್ರತಿನಿಧಿಯಾಗಲಿ, ಅವರ ವಿರುದ್ಧ ಕ್ರಮ ಕೈಗೊಂಡು ರಾಜ್ಯದ ಆಡಳಿತದಲ್ಲಿ ತಟಸ್ಥತೆ ಕಾಯ್ದುಕೊಳ್ಳಬೇಕೆಂದು ಒತ್ತಾಯಿಸಿದರು.
ಈ ಪ್ರತಿಭಟನೆಯಲ್ಲಿ ಶಾಸಕರಾದ ಸೀಮಾ ಮಸೂತಿ, ಜಿಲ್ಲಾಧ್ಯಕ್ಷ ತಿಪ್ಪಣ ಮಜ್ಜಗಿ, ಶಿವು ಹೀರೆಮಠ, ವಿಜಯಾನಂದ ಶಟ್ಟಿ, ಸಂಜಯ ಕಪಟಕರ, ಶಿವು ಮೆಣಸಿನಕಾಯಿ, ಮಂಜುನಾಥ ಮಲ್ಲಿಗವಾಡ, ಮೋಹನ ರಾಮದುರ್ಗ, ಬಸವರಾಜ ಗರಗ, ಶ್ರೀನಿವಾಸ ಕೊಟ್ಯಾನ, ಮಂಜುನಾಥ ಕಾಟಕರ, ಎಲ್ಲಪ್ಪ ಸವನೂರ, ಆನಂದ ಯಾವಗಲ, ವಿಷ್ಣು ಕೊರಳ್ಳಿ, ಸುರೇಶ ಬೇದರೆ, ಬಸವರಾಜ ಬಾಳಗಿ, ಪ್ರಣಿತ ರಾಮನಗೌಡರ, ಬಸವರಾಜ ಮೂತ್ತಳಿ, ಸುನೀಲ ಮೋರೆ, ಮಂಜುನಾಥ ಬಟ್ಟಣನವರ, ಅಶೋಕ ವಾಲಿಕಾರ, ರಮೇಶ್ ದೊಡವಾಡ, ಮಂಜುನಾಥ ಹೆಸರುರ, ಅರುಣ ಅರಕೆರಿ, ಸದಾಶಿವ ಭಜಂತ್ರಿ, ಪ್ರಮೂದ ಕಾರಕೊನ, ಪ್ರಮೂದ ಬಾಗಿಲದ, ಅಮಿತ ಪಾಟೀಲ, ಪುಷ್ಪಾ ನವಲಗುಂದ, ಗೀತಾ ಪಾಟೀಲ, ಮಾಲತಿ ಹುಲಿಕಟ್ಟಿ, ಚಂದ್ರಕಲಾ ಕೊಟಬಾಗಿ, ಸುನಿತಾ ಮಳ್ಳಕರ, ನೀಲವ್ವ ಅರವಾಳದ, ಪುಷ್ಪಾ ಮಜ್ಜಗಿ, ಶೋಭಾ ಭೋಜಂಗನವರ, ರೊಪಾ ಚೌದರಿ ಹಾಗೂ ಅನೇಕ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

