ಯಲ್ಲಾಪುರ ರಂಜಿತಾ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಅರಣ್ಯದಲ್ಲಿ ಆರೋಪಿ ರಫೀಕ್ ಶವ ಪತ್ತೆ

Spread the love


ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಸಂಭವಿಸಿದ ವಿಚ್ಛೇದಿತ ಮಹಿಳೆ ರಂಜಿತಾ ಬನಸವಾಡೆ ಅವರ ಬರ್ಬರ ಹತ್ಯೆ ಪ್ರಕರಣಕ್ಕೆ ಈಗ ಮಹತ್ವದ ತಿರುವು ಸಿಕ್ಕಿದೆ. ಹತ್ಯೆ ನಡೆಸಿ ಪರಾರಿಯಾಗಿದ್ದ ಆರೋಪಿ ರಫೀಕ್ (30) ಪಟ್ಟಣದ ಸಮೀಪದ ಕಾಳಮ್ಮನಗರ ಅರಣ್ಯ ಪ್ರದೇಶದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ರಂಜಿತಾ ಅವರನ್ನು ಕೊಲೆ ಮಾಡಿ ಅಡಗಿದ್ದ ಆರೋಪಿಗಾಗಿ ರವಿವಾರದಂದು ಶ್ವಾನದಳದೊಂದಿಗೆ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾಗ ಈ ಘಟನೆ ಬೆಳಕಿಗೆ ಬಂದಿದೆ.

ಸ್ನೇಹದ ಹೆಸರಲ್ಲಿ ನಡೆದ ಘಾತುಕ ಕೃತ್ಯ:
ಕಳೆದ ಹತ್ತು ವರ್ಷಗಳ ಹಿಂದೆಯೇ ಪತಿಯಿಂದ ವಿಚ್ಛೇದನ ಪಡೆದಿದ್ದ ರಂಜಿತಾ, ಹತ್ತು ವರ್ಷದ ಮಗ ಹಾಗೂ ಪೋಷಕರೊಂದಿಗೆ ವಾಸವಿದ್ದರು. ಬಿಸಿಯೂಟ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದ ಇವರ ಕುಟುಂಬದೊಂದಿಗೆ ಆರೋಪಿ ರಫೀಕ್ ಆತ್ಮೀಯ ಸಂಬಂಧ ಹೊಂದಿದ್ದ ಎನ್ನಲಾಗಿದೆ. ರಫೀಕ್ ರಂಜಿತಾ ಅವರ ಅಣ್ಣನ ಸ್ನೇಹಿತನೂ ಆಗಿದ್ದು, ಹತ್ಯೆ ನಡೆಯುವ ಮುನ್ನಾದಿನದ ರಾತ್ರಿ ಇಬ್ಬರೂ ಜೊತೆಯಾಗಿ ಪಾರ್ಟಿ ಮಾಡಿದ್ದರು ಎಂಬ ಆಘಾತಕಾರಿ ವಿಷಯ ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.

ರಫೀಕ್ ರಂಜಿತಾ ಅವರನ್ನು ಮದುವೆಯಾಗುವಂತೆ ಸತತವಾಗಿ ಒತ್ತಾಯಿಸುತ್ತಿದ್ದರೂ, ಅದಕ್ಕೆ ರಂಜಿತಾ ನಿರಾಕರಿಸಿದ್ದರು. ಇದೇ ದ್ವೇಷದಿಂದ ಶಾಲೆಯಿಂದ ಮನೆಗೆ ಮರಳುತ್ತಿದ್ದ ರಂಜಿತಾಳನ್ನು ರಸ್ತೆ ಮಧ್ಯೆ ಅಡ್ಡಗಟ್ಟಿದ ರಫೀಕ್, ಮದುವೆಗೆ ಒಪ್ಪದ ಕಾರಣ ಚಾಕುವಿನಿಂದ ಇರಿದು ಪರಾರಿಯಾಗಿದ್ದನು.

ಬಂದ್ ಹಾಗೂ ಪ್ರತಿಭಟನೆಯ ಬಿಸಿ:
ಈ ಬರ್ಬರ ಹತ್ಯೆಯನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್ (VHP) ಹಾಗೂ ವಿವಿಧ ಹಿಂದೂ ಸಂಘಟನೆಗಳು ರವಿವಾರದಂದು ಯಲ್ಲಾಪುರ ಬಂದ್‌ಗೆ ಕರೆ ನೀಡಿದ್ದವು. ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಲು ಸಿದ್ಧತೆ ನಡೆದಿತ್ತು. ಅಷ್ಟೇ ಅಲ್ಲದೆ, ಆರೋಪಿಯನ್ನು ಬಂಧಿಸುವವರೆಗೂ ರಂಜಿತಾ ಅವರ ಅಂತ್ಯಕ್ರಿಯೆ ನಡೆಸುವುದಿಲ್ಲ ಎಂದು ಸಂಘಟನೆಗಳು ಪಟ್ಟು ಹಿಡಿದಿದ್ದವು. ಆದರೆ, ಪ್ರತಿಭಟನಾ ಸಭೆ ಆರಂಭವಾಗುವ ಮೊದಲೇ ಆರೋಪಿ ರಫೀಕ್ ಕಾಡಿನಲ್ಲಿ ಹೆಣವಾಗಿ ಪತ್ತೆಯಾಗಿರುವ ಸುದ್ದಿ ಹೊರಬಿದ್ದಿದೆ.

ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮೃತದೇಹದ ಪಂಚನಾಮೆ ನಡೆಸಿ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಕೊಲೆ ಆರೋಪಿಯೇ ಆತ್ಮಹತ್ಯೆ ಮಾಡಿಕೊಂಡಿರುವುದರಿಂದ ಪ್ರಕರಣದ ತನಿಖೆ ಹೊಸ ಹಂತಕ್ಕೆ ತಲುಪಿದೆ. ಇತ್ತ ಅನಾಥವಾಗಿರುವ ರಂಜಿತಾ ಅವರ ಮಗ ಹಾಗೂ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪಟ್ಟಣದಲ್ಲಿ ಹೆಚ್ಚಿನ ಪೊಲೀಸ್ ಭದ್ರತೆಯನ್ನು ಮುಂದುವರಿಸಲಾಗಿದೆ.


Leave a Reply

Your email address will not be published. Required fields are marked *