
ಕೋಲಾರ: ಜಿಲ್ಲೆಯ ಮೆಟ್ಟುಬಂಡೆ ಬಳಿ ಜನವರಿ 27 ರಂದು ನಡೆದಿದ್ದ ಯಲ್ಲೇಶ್ (41) ಎಂಬುವವರ ಭೀಕರ ಹತ್ಯೆ ಪ್ರಕರಣ ಈಗ ಮಹತ್ವದ ತಿರುವು ಪಡೆದುಕೊಂಡಿದೆ. ಪ್ರಕರಣದ ಪ್ರಮುಖ ಆರೋಪಿ ಬಿಂದು ಕುಮಾರ್ ಎಂಬಾತ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ಹತ್ಯೆಯ ಹೊಣೆಯನ್ನು ತಾನೇ ಹೊತ್ತುಕೊಳ್ಳುವ ಮೂಲಕ ಪೊಲೀಸರಿಗೆ ಸವಾಲು ಹಾಕಿದ್ದಾನೆ.
ಸೇಡಿನ ಕಿಚ್ಚಿಗೆ ಬಲಿಯಾದ ಯಲ್ಲೇಶ್:
ನರಸಾಪುರದ ಸಂತೋಷ್ ಎಂಬುವವರ ಪುತ್ರ ಬಿಂದು ಕುಮಾರ್, ತಾನು ಹಾಗೂ ಅಕ್ಷಯ್ ತಂಡ ಸೇರಿ ಈ ಕೃತ್ಯ ಎಸಗಿರುವುದಾಗಿ ವಿಡಿಯೋದಲ್ಲಿ ಬಹಿರಂಗಪಡಿಸಿದ್ದಾನೆ. “ನನ್ನ ತಂಗಿಯ ಬಗ್ಗೆ ಯಲ್ಲೇಶ್ ಅತ್ಯಂತ ಅಸಭ್ಯವಾಗಿ ಮಾತನಾಡಿದ್ದ. ಈ ವಿಚಾರವಾಗಿ ನಾನು ಐದು ಬಾರಿ ದೂರು ನೀಡಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಅಷ್ಟೇ ಅಲ್ಲದೆ, ಆತ ನಮ್ಮನ್ನೇ ಕೊಲ್ಲಲು ಸಂಚು ರೂಪಿಸಿದ್ದ. ಹಾಗಾಗಿ ನಾನೇ ಮೊದಲು ಆತನನ್ನು ಮುಗಿಸಿದೆ,” ಎಂದು ಆರೋಪಿ ತನ್ನ ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾನೆ.
ನ್ಯಾಯಾಲಯಕ್ಕೆ ಶರಣಾಗುವ ಮುನ್ಸೂಚನೆ:
ಇದೇ ವೇಳೆ ಈ ಕೊಲೆಗೂ ತನ್ನ ತಂದೆ ಸಂತೋಷ್‌ಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿರುವ ಆರೋಪಿ, ಶೀಘ್ರದಲ್ಲೇ ಕೃತ್ಯಕ್ಕೆ ಬಳಸಿದ ಆಯುಧದ ಸಮೇತ ನ್ಯಾಯಾಲಯಕ್ಕೆ ಶರಣಾಗುವುದಾಗಿ ತಿಳಿಸಿದ್ದಾನೆ. ಹಳೇ ದ್ವೇಷ ಹಾಗೂ ಕೌಟುಂಬಿಕ ಕಲಹವೇ ಈ ಭೀಕರ ಹತ್ಯೆಗೆ ಮೂಲ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಸದ್ಯ ಆರೋಪಿಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಪೊಲೀಸರು, ಆರೋಪಿಗಳ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.

